ಕುಂದಾಪುರ: ಮಾಜಿ ಶಾಸಕ, ಹಿರಿಯ ಧಾರ್ಮಿಕ ನೇತಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನ ಹಿನ್ನೆಲೆಯಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನವು ಪ್ರತಿವರ್ಷದಂತೆ ನೀಡುತ್ತಾ ಬಂದಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಗೆ ಕುರಿಯಾಜೆ ತಿರುಮಲೇಶ್ವರ ಭಟ್ ಆಯ್ಕೆಯಾಗಿದ್ದಾರೆ.
ಬಸ್ರೂರು ಶಾರದಾ ಕಾಲೇಜಿನ ಆವರಣದಲ್ಲಿ ಡಿ.24ರ ಸಂಜೆ 4ಕ್ಕೆ ನಡೆಯುವ ಅಪ್ಪಣ್ಣ ಹೆಗ್ಡೆ 87ನೇ ಹುಟ್ಟು ಹಬ್ಬದಲ್ಲಿ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ದತ್ತಿನಿಧಿ ಸಹಾಯಧನ ವಿತರಿಸಲಾಗುತ್ತದೆ.
ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಾದ ಕುರಿಯಾಜೆ ತಿರುಮಲೇಶ್ವರ ಭಟ್...
ಕುರಿಯಾಜೆ ತಿರುಮಲೇಶ್ವರ ಭಟ್ ಸುಳ್ಯ ತಾಲೂಕು, ಬೆಳ್ಳಾರೆ ಸಮೀಪದ ಕುರಿಯಾಜೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೃಷಿಯಲ್ಲಿ ಅದ್ಭುತವಾದ ಸಾಧನೆ ಮಾಡಿ ಸಾವಯವ ಕೃಷಿ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. ದೇಶ-ವಿದೇಶಗಳಿಂದ ತಂದು ಬೆಳೆಸಿದ ಹೂ-ಹಣ್ಣು, ಗಿಡಮೂಲಿಕೆ ಸೇರಿದಂತೆ ನೂರಾರು ಬಗೆಯ ಸಸ್ಯರಾಶಿ ಇವರ ತೋಟದಲ್ಲಿ ಇದೆ. ಸಾಂಪ್ರದಾಯಿಕ ಬೆಳೆಗಳ ಈ ಸುಂದರ ತೋಟ ಬೆಳ್ಳಾರೆ ನಂದನವನ ಎಂದು ಖ್ಯಾತಿಯಾಗಿದೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ.
Comments are closed.