ಕರ್ನಾಟಕ

ರಾಘವೇಶ್ವರ ಶ್ರೀ ಬೆಂಬಲಿಸಿ ಸಾಗರದಲ್ಲಿ ಸಭೆ; ಗುರುಭಕ್ತರ ಸಮಾವೇಶದಲ್ಲಿ ಕಪ್ಪು ಬಾವುಟ–ಹಲ್ಲೆ

Pinterest LinkedIn Tumblr

parmeshwara1

ಸಾಗರ: ಇಲ್ಲಿನ ಗಾಂಧಿ ಮೈದಾನದಲ್ಲಿ ‘ಸಚ್‌ ಕೇ ಸಾಥ್‌’ ಸಂಘಟನೆ ಸೋಮವಾರ ಆಯೋಜಿ­ಸಿದ್ದ ರಾಮಚಂದ್ರಾಪುರ ಮಠದ ಗುರುಭಕ್ತರ ಸಮಾವೇಶದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಅವರ ಮೇಲೆ ಭಕ್ತರು ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.

ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಖಂಡಿಸಿ ಜನ­ಜಾಗೃತಿ­ಗಾಗಿ ಈ ಸಮಾವೇಶ ಸಂಘಟಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ರಾಮ­ಕಥಾ ಸಂಯೋಜಕ ಗಜಾನನ ಶರ್ಮ ಅವರು ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಭಾಷಣ ಮಾಡು­ತ್ತಿದ್ದಾಗ, ಸಭೆ ನಡುವೆ ಇದ್ದ ಪರ­ಮೇಶ್ವರ ದೂಗೂರು, ಶ್ರೀಗಳು ತಪ್ಪು ಮಾಡಿದ್ದು ಅವರನ್ನು ಸಮರ್ಥಿಸುವುದು ಸರಿಯಲ್ಲ ಎಂಬ ಒಕ್ಕಣೆ ಇರುವ ಕರಪತ್ರವನ್ನು ಹಂಚಿ ಸಭೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆ ಕೂಗಿದರು.

ಇದರಿಂದ ಕೆರಳಿದ ಸಭೆಯಲ್ಲಿದ್ದವರು ದೂಗೂರು ಅವರ ಮೇಲೆ ಎರಗಿ ಅವರ ಅಂಗಿ ಮತ್ತು ಬನಿಯನ್‌ನನ್ನು ಹರಿದು ಹಲ್ಲೆ ನಡೆಸಿದರು.
ಈ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಉದ್ರಿಕ್ತ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಭೆ ಮುಂದುವರಿಯಿತು.

ಘಟನೆಯಲ್ಲಿ ಗಾಯಗೊಂಡಿರುವ ಪರ­ಮೇಶ್ವರ ದೂಗೂರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎ.ವಿ.ಸದಾಶಿವ,  ಕೆ.ಎನ್. ಶ್ರೀಧರ್, ಯು.ಎಚ್.ರಾಮಪ್ಪ, ಶಾಂತನಕೊಪ್ಪ ಶ್ರೀಕಾಂತ, ಶಮಂತ್ ಮತ್ತಿತರರು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.

Write A Comment