ಕರ್ನಾಟಕ

ಸಾರಿಗೆ ಮುಷ್ಕರದಿಂದ ಜನಜೀವನ ಅಸ್ತವ್ಯಸ್ತ; ಬಸ್‌ಗಳ ಮೇಲೆ ಕಲ್ಲು ತೂರಾಟ : ಸಂಚಾರ ವ್ಯತ್ಯಯ

Pinterest LinkedIn Tumblr

Photo Caption

ಬೆಂಗಳೂರು, ಏ.30: ಕೇಂದ್ರ ಸರ್ಕಾರದ ಕಟ್ಟುನಿಟ್ಟಾದ ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ ರಾಷ್ಟ್ರವ್ಯಾಪಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಹಮ್ಮಿಕೊಂಡಿರುವ ಭಾರತ್ ಬಂದ್‌ನಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ರಾಜ್ಯದಲ್ಲಿ ಅದರ ಪರಿಣಾಮ ಬೀರಿದೆ.

ರಸ್ತೆ ಸಾರಿಗೆ ಬಸ್‌ಗಳ ಓಡಾಟ ವಿರಳವಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಪ್ರಯಾಣಿಕರಿಗೆ ತೀವ್ರ ಅಡಚಣೆಯಾಯಿತು.

ಮಂಡ್ಯ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು, ಗದಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರವಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗಿ ಇಂದು ಬೆಳಗ್ಗೆಯಿಂದ ಪ್ರಯಾಣಿಕರು ಪರದಾಡಿದರು. ವಿವಿಧೆಡೆ ಮುಷ್ಕರ ವಿರೋಧಿಸಿ ಬಸ್ ಸಂಚರಿಸಿದ್ದರಿಂದ ಮುಷ್ಕರ ನಿರತರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದವು.

KSRTC-Strikew

KSRTC-Strikew-5

KSRTC-Strikew-4

KSRTC-Strikew-3

KSRTC-Strikew1

ಪ್ರಯಾಣಿಕರು ಖಾಸಗಿ ಬಸ್‌ಗಳ ಮೂಲಕ ತಮ್ಮ ಊರುಗಳನ್ನು ತಲುಪಲು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡುಬಂತು. ಬೆಂಗಳೂರಿನಲ್ಲಿ ಬಿಎಂಟಿಸಿ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಬೆಳಗ್ಗೆಯಿಂದ ಬಿಎಂಟಿಸಿ ಬಸ್‌ಗಳು ಸಂಚರಿಸಿಲ್ಲ. ಬೆಳಗಾವಿಯಲ್ಲಿ ಶೇ.50ರಷ್ಟು ಬಸ್ ಸಂಚಾರ ಇಳಿಮುಖವಾಗಿತ್ತು. ಮಂಗಳೂರು ಹಾಗೂ ಗದಗ ಜಿಲ್ಲೆಗಳಲ್ಲಿ ಬಹುತೇಕ ಬಸ್ ಸಂಚಾರ ಸ್ಥಗಿತವಾಗಿದ್ದರೆ, ಬೆಂಗಳೂರು, ಹುಬ್ಬಳ್ಳಿ, ಮೈಸೂರು ಜಿಲ್ಲೆಗಳಲ್ಲಿ ಭಾಗಶಃ ಬಸ್ ಸಂಚಾರ ವಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಟಿಸಿಯ ಎಲ್ಲ ವೋಲ್ವೋ ಬಸ್‌ಗಳ ಹಗಲು ಸಂಚಾರವನ್ನು ನಿಲ್ಲಿಸಲಾಗಿತ್ತು. ಬಿಎಂಟಿಸಿಯ ವೋಲ್ವೋ ಬಸ್‌ಗಳು ವಿರಳವಾಗಿ ಸಂಚಾರ ನಡೆಸಿದವು. ಇದರಿಂದ ನಗರ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಬಲವಂತವಾಗಿ ಪ್ರತಿಭಟನೆಗೆ ಪ್ರೇರೇಪಿಸಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಸುಮಾರು 300ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ನಗರದಲ್ಲಿ ಸಂಚರಿಸಿವೆ. ಮುಷ್ಕರ ನಿರತರು ಹಲವೆಡೆ ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾರ್ಪೊರೇಷನ್ ವೃತ್ತ, ರಾಜರಾಜೇಶ್ವರಿ ನಗರ ಗೇಟ್ ಬಳಿ ಜಾಲಹಳ್ಳಿ ವೃತ್ತ, ಕೆಂಗೇರಿ, ತಾವರೆಕೆರೆ, ಎಲೆಕ್ಟ್ರಾನಿಕ್ ಸಿಟಿ, ಕನ್ನಳ್ಳಿ, ಉತ್ತರಳ್ಳಿ ಬಳಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಹೆಬ್ಬಗೋಡಿ, ಚಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ಹಾಗೂ ತಮಿಳುನಾಡು ರಾಜ್ಯದ ಬಸ್ ಮೇಲೂ ಕೂಡ ಮುಷ್ಕರ ನಿರತರು ಕಲ್ಲು ತೂರಾಟ ನಡೆಸಿದ್ದಾರೆ.

ಮಂಡ್ಯ:
ರಸ್ತೆ ಸಾರಿಗೆ ವಿಧೇಯಕ ವಿರೋಧಿಸಿ ನಡೆಸುತ್ತಿರುವ ಮುಷ್ಕರದ ಬಿಸಿ ಮಂಡ್ಯ ಜಿಲ್ಲೆಗೂ ತಟ್ಟಿದೆ. ಮಂಡ್ಯ ಡಿಪೋದಿಂದ ಯಾವುದೇ ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದ ನಾಗರಿಕರು ಪರದಾಡಿದರು. ಖಾಸಗಿ ಬಸ್ ಹಾಗೂ ರಿಕ್ಷಾಗಳು ಸಂಚಾರ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿದವು. ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ರಮೇಶ್ ಈ ಸಂಜೆಯೊಂದಿಗೆ ಮಾತನಾಡಿ, ಮಂಡ್ಯ ಡಿಪೋದಿಂದ ಯಾವುದೇ ಬಸ್‌ಗಳ ಸಂಚಾರವಿಲ್ಲ. ಮದ್ದೂರು ಡಿಪೋದಿಂದ ಎರಡು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇದುವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದರು.

ಕೋಲಾರ:
ಸಾರಿಗೆ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್‌ನಲ್ಲಿ ಸಾರಿಗೆ ಬಸ್‌ಗಳು ಎಂದಿನಂತೆ ಚಲಿಸಿದರೆ, ಕೋಲಾರ ಮತ್ತಿತರ ಕಡೆ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ.

ತುಮಕೂರು:
ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಖಾಸಗಿ ಬಸ್‌ಗಳು ಮತ್ತು ಆಟೋಗಳ ಮೊರೆ ಹೋಗಬೇಕಾಯಿತು. ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡುಬಂದರು. ಈ ವೇಳೆ ಸಿಐಟಿಯುಸಿ ಕಾರ್ಯದರ್ಶಿ ಚಿನ್ನಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ನೌಕರರಿಗೆ ಮಾರಕವಾಗಿದೆ. ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ:
ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್‌ಗಳನ್ನು ಓಡಿಸುವಂತೆ ಸಾರಿಗೆ ಅಧಿಕಾರಿಗಳು ಮನವಿ ಮಾಡಿದರೂ ಚಾಲಕರು ಬಸ್‌ಗಳನ್ನು ಬಿಟ್ಟು ಮುಷ್ಕರಕ್ಕೆ ಬೆಂಬಲ ನೀಡಿದ್ದರಿಂದ ಇಲ್ಲಿಯೂ ಕೂಡ ಪ್ರಯಾಣಿಕರಿಗೆ ತೊಂದರೆಯಾಯಿತು. ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿಯ ಸಿದ್ಧಾರೂಢ ಮಠ ಹಾಗೂ ಹೊಸೂರು ಬಳಿ ಕೆಲ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಪ್ರಯಾಣಿಕರ ಹಿತದೃಷ್ಟಿಯಿಂದ ಕೆಲವೊಂದು ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ:
ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಬಸ್ ಓಡಿಸದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ನೌಕರರಿಗೆ ಎಚ್ಚರಿಕೆ ನೀಡಿದ್ದರೂ ನೌಕರರು ಕೇರ್ ಮಾಡಿಲ್ಲ. ನಂತರ ನೌಕರರ ಮನವೊಲಿಸಿ ಕೆಲ ಬಸ್‌ಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಹಾಸನ: ಬಂದ್‌ಗೆ ಸಾರಿಗೆ ನೌಕರರು ಬಸ್‌ಗಳನ್ನು ಡಿಪೋದಲ್ಲಿಯೇ ಬಿಟ್ಟು ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈಸೂರು:
ಸಿದ್ಧಾರ್ಥ ನಗರದ ಬಳಿ ಕೆಲ ಕಿಡಿಗೇಡಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ-ಚಿಕ್ಕಮಗಳೂರು:
ಸಾರಿಗೆ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

ಮುಷ್ಕರ ಬಹುತೇಕ ಶಾಂತಿಯುತ

ಬೆಂಗಳೂರು: ಇಂದು ಬೆಳಗ್ಗೆ ಕೆಲವು ಬಸ್‌ಗಳಿಗೆ ಕಲ್ಲು ತೂರಾಟ ಬಿಟ್ಟರೆ ಸಾರಿಗೆ ನೌಕರರ ಮುಷ್ಕರ ಬಹುತೇಕ ಶಾಂತಿಯುತವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮೆಘರಿಕ್ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ 3, ಹುಬ್ಬಳ್ಳಿಯಲ್ಲಿ 2, ಬೆಂಗಳೂರು ಗ್ರಾಮಾಂತರದಲ್ಲಿ 3 ಕಡೆ ಬಸ್‌ಗಳಿಗೆ ಕಲ್ಲು ತೂರಲಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಐಜಿಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಸ್ತಿನಲ್ಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.ಕೆಲವು ಕಡೆ ಸಾರಿಗೆ ಬಸ್‌ಗಳ ಓಡಾಟಕ್ಕೆ ಭದ್ರತೆ ನೀಡಲಾಗಿದೆ ಎಂದು ತಿಳಿಸಿದರು. ಸ್ಥಳೀಯ ಪೊಲೀಸರು ಕೂಡ ಎಚ್ಚರಿಕೆ ವಹಿಸಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಆದರೂ ಎಲ್ಲೂ ಕೂಡ ಮಧ್ಯಾಹ್ನದವರೆಗೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಿಡಿಗೇಡಿಗಳ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಿದ್ದೇನೆ ಎಂದು ಹೇಳಿದರು.

* ಕೆಎಸ್‌ಆರ್‌ಟಿಸಿಯ 25 ಬಸ್‌ಗಳ ಮೇಲೆ ಕಲ್ಲು ತೂರಾಟ.
* ಬೆಂಗಳೂರಿನಲ್ಲಿ ವಿವಿಧೆಡೆ 50 ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ.
* ಖಾಸಗಿ ಬಸ್‌ಗಳಿಗೆ ಸುಗ್ಗಿಯೋ ಸುಗ್ಗಿ.
* ಬಿಕೋ ಎನ್ನುತ್ತಿದ್ದ ನಿಲ್ದಾಣಗಳು.
* ಪ್ರಯಾಣಿಕರ ಪರದಾಟ.
* ಟಿಕೆಟ್ ಕೌಂಟರ್‌ಗಳು ಖಾಲಿ ಖಾಲಿ.
* ಮೆಟ್ರೋ ಸಂಚಾರಕ್ಕೂ ತಟ್ಟಿದ ಬಿಸಿ.
* ಖಾಸಗಿ ವಾಹನಗಳ ಟಯರ್ ಗಾಳಿ ತೆಗೆದ ಮುಷ್ಕರ ನಿರತರು.
* ಐಟಿ-ಗಾರ್ಮೆಂಟ್ಸ್ ಉದ್ಯೋಗಿಗಳಿಂದ ಟ್ಯಾಕ್ಸಿ ಮೊರೆ.
* ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ತಟ್ಟದ ಟ್ರಾಫಿಕ್ ಜಾಮ್.
* ಕಾರ್ಮಿಕರು-ಸಾರಿಗೆ ಅಧಿಕಾರಿಗಳ ನಡುವೆ ನಡೆದ ಮಾತಿನ ಚಕಮಕಿ.
* ಬಿಟಿಎಸ್ ಬಸ್ ನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಭೇಟಿ.
* ಮುಷ್ಕರದ ಬಿಸಿ, ವಿಧಾನಸೌಧ ಶೇ.60ರಷ್ಟು ಹಾಜರಾತಿ ಕಡಿಮೆ.

ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

ಬೆಂಗಳೂರು: ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ನಡೆಸಿದ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಬೆಂಗಳೂರಿನ ಕೆಂಪೇಗೌಡ ಹಾಗೂ ಮೆಜಸ್ಟಿಕ್ ಬಸ್ ನಿಲ್ದಾಣದ ಬಳಿ ಪ್ರಯಾಣಿಕರನ್ನು ಪಿಕಪ್ ಮಾಡಲು ಖಾಸಗಿ ಬಸ್‌ಗಳವರು ಮುಗಿಬಿದ್ದಾಗ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಹಾಗೂ ಖಾಸಗಿ ಬಸ್‌ಗಳ ನೌಕರರ ನಡುವೆ ವಾಗ್ವಾದ ನಡೆದಿರುವುದು ತಿಳಿದುಬಂದಿದೆ. ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಸಿಬ್ಬಂದಿ ಕಲ್ಲು ತೂರಾಟ ನಡೆಸಿದರೆ, ಸರ್ಕಾರಿ ಬಸ್‌ಗಳ ಮೇಲೆ ಖಾಸಗಿ ಬಸ್‌ಗಳ ಸಿಬ್ಬಂದಿ ಕಲ್ಲು ತೂರಾಟ ನಡೆಸುವ ಪ್ರಯತ್ನ ನಡೆಸಿದ್ದಾರೆ. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಯಾಣಿಕರನ್ನು ಕರೆದೊಯ್ಯಲು ಯತ್ನಿಸಿದ ಮುಷ್ಕರ ನಿರತರು ಖಾಸಗಿ ಬಸ್‌ಗಳ ಟಯರ್‌ಗಳ ಗಾಳಿ ತೆಗೆದಿದ್ದಾರೆ.

ಬೆಂಗಳೂರು ಮಹಾನಗರಕ್ಕೆ ಹೆಚ್ಚಾಗಿಯೇ ತಟ್ಟಿದೆ ಮುಷ್ಕರದ ಬಿಸಿ

ಬೆಂಗಳೂರು: ಸರ್ಕಾರಿ ಬಸ್ ಚಾಲಕರು ಹಾಗೂ ಕೆಲ ಆಟೋ ಸಂಘಟನೆಗಳು ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸುರಕ್ಷತಾ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸಿದ ಬಿಸಿ ಬೆಂಗಳೂರು ಮಹಾನಗರಕ್ಕೆ ಹೆಚ್ಚಾಗಿಯೇ ತಟ್ಟಿದೆ. ಬಿಎಂಟಿಸಿ ಬಸ್‌ಗಳು ಮತ್ತು ಆಟೋ ಸಂಚಾರ ನಗರದಲ್ಲಿ ವಿರಳವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಟ್ಯಾಕ್ಸಿ, ಖಾಸಗಿ ಬಸ್, ಟೆಂಪೋಗಳ ಮೂಲಕ ಕೆಲವರು ಪ್ರಯಾಣ ಬೆಳೆಸಿದರು.

ಬಿಎಂಟಿಸಿ ರಾತ್ರಿ ಪಾಳಿಯ 2800 ಬಸ್‌ಗಳು ಹಗಲಿನಲ್ಲಿಯೂ ಸಂಚಾರ ಮುಂದುವರಿಸಲಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿ ಪ್ರಸಾದ್ ಹೇಳಿದರೂ ಕೂಡ ನಗರದ ವಿವಿಧೆಡೆ ಕಲ್ಲು ತೂರಾಟ ನಡೆಸಿದ್ದರಿಂದ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಸಂಚಾರ ವಿರಳವಾಗುತ್ತಿದ್ದಂತೆ ಪ್ರಯಾಣಿಕರು ಟ್ಯಾಕ್ಸಿ ಮತ್ತಿತರ ವಾಹನಗಳ ಮೊರೆ ಹೋದರು. ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಓಡಿಸುವ ಚಾಲಕರಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿದರು. ಬಲವಂತವಾಗಿ ಯಾರನ್ನೂ ಮುಷ್ಕರಕ್ಕೆ ಪ್ರೇರೇಪಿಸಬಾರದು ಎಂದು ಎಚ್ಚರಿಕೆ ನೀಡಿದರು. ವೋಲ್ವೋ ಬಸ್‌ಗಳ ಸೇವೆ ಶೇ.60ರಷ್ಟಿದೆ. ಸಾಮಾನ್ಯ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ಪರಿಸ್ಥಿತಿಗನುಗುಣವಾಗಿ ಬಸ್ ಸೇವೆ ಒದಗಿಸಲಾಗುವುದು. ಬಹುತೇಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿ ಪ್ರಸಾದ್ ಪ್ರತಿಕ್ರಿಯಿಸಿದರು.

Write A Comment