ಕರ್ನಾಟಕ

ಚಿನ್ನ ಖರೀದಿಗೆ ‘ಚಿನ್ನ’ದಂಥ ಕಾಲ; 10ಗ್ರಾಂಗೆ 520 ರೂ. ಇಳಿಕೆ; ಕನಿಷ್ಠ ಮಟ್ಟಕ್ಕಿಳಿದ ಚಿನ್ನ

Pinterest LinkedIn Tumblr

A customer tries on a gold necklace inside a jewellery showroom in Hyderabad

ಮುಂಬೈ/ನವದೆಹಲಿ(ಪಿಟಿಐ): ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಧಾರಣೆ ಸತತವಾಗಿ ಇಳಿಮುಖವಾಗುತ್ತಿರುವುದು ದೇಶದ ಪ್ರಮುಖ ಚಿನಿವಾರ ಪೇಟೆಗಳ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಮುಂಬೈ ಮತ್ತು ನವದೆಹಲಿಯಲ್ಲಿ ಚಿನ್ನದ ಧಾರಣೆ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಸೋಮವಾರದ ವಹಿವಾಟಿನಲ್ಲಿ ಬಂಗಾರದ ಧಾರಣೆ ಮುಂಬೈನಲ್ಲಿ ₹ 520ರಷ್ಟು ಗರಿಷ್ಠ ಮಟ್ಟದಲ್ಲಿ ಕುಸಿತ ಕಂಡಿತು. ನವದೆಹಲಿಯಲ್ಲಿ ₹ 300ರಷ್ಟು ಬೆಲೆ ಇಳಿಕೆಯಾಗಿದೆ. ಸಿದ್ಧ ಬೆಳ್ಳಿಯೂ ಮುಂಬೈನಲ್ಲಿ ಕೆ.ಜಿ.ಗೆ ₹ 340ರಷ್ಟು, ದೆಹಲಿಯಲ್ಲಿ ₹ 150ರಷ್ಟು ಕೆಳಕ್ಕಿಳಿಯಿತು.

ಮುಂಬೈ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ₹ 25,250ಕ್ಕೂ, ಅಪರಂಜಿ ಚಿನ್ನ ₹ 25,400ಕ್ಕೂ ಇಳಿಯಿತು. 2013ರ ಜೂನ್‌ 28ರಲ್ಲಿ ಇದೇ ಧಾರಣೆ ಇತ್ತು. ಚಿನ್ನದ ಧಾರಣೆ ಇಳಿಕೆಯ ಪ್ರಭಾವದಿಂದಾಗಿ ಬೆಳ್ಳಿಯೂ ಕುಸಿತ ಕಂಡಿತು. ಮುಂಬೈ ಚಿನಿವಾರ ಪೇಟೆಯಲ್ಲಿ ಕೆ.ಜಿ. ಬೆಳ್ಳಿ ₹ 34,650ರಂತೆ ಮಾರಾಟವಾಯಿತು.

ನವದೆಹಲಿ ಧಾರಣೆ: 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ₹ 25,550ಕ್ಕೂ, ಅಪರಂಜಿ ಚಿನ್ನ ₹ 25,700ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ₹ 34,200ರ ಲೆಕ್ಕದಲ್ಲಿ ಮಾರಾಟವಾಯಿತು.

ನವದೆಹಲಿಯಲ್ಲಿನ ವಾಯಿದೆ ವಹಿವಾಟಿನಲ್ಲಿಯೂ 10 ಗ್ರಾಂ ಚಿನ್ನದ ಧಾರಣೆ ₹ 25 ಸಾವಿರದ ಮಟ್ಟಕ್ಕಿಂತ ಕೆಳಗಿಳಿಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಚಿನ್ನದ ವಾಯಿದೆ ಪೇಟೆ ವಹಿವಾಟಿನ ಮೇಲೆಯೂ ಪರಿಣಾಮ ಬೀರಿತು.

ನವದೆಹಲಿಯ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್‌) ಆಗಸ್ಟ್‌ಗೆ ವಿತರಣೆಯಾಗುವ ಚಿನ್ನದ ಬೆಲೆ 10 ಗ್ರಾಂಗೆ ₹ 524ರಷ್ಟು (ಶೇ 2.06) ಕೆಳಕ್ಕಿಳಿದು ₹ 24,974ರಂತೆ ವಹಿವಾಟು ನಡೆಸಿತು.

ಜಾಗತಿಕ ಮಾರುಕಟ್ಟೆ
ಲಂಡನ್‌ ವರದಿ: ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿಯೇ ಮುಂದುವರಿಸಲಿದೆ ಎಂಬ ಮುನ್ನೋಟ ವರದಿ ಹೊರಬಿದ್ದಿದ್ದರಿಂದ ಇಲ್ಲಿನ ಚಿನಿವಾರ ಪೇಟೆ ತತ್ತರಿಸಿತು.

ಜತೆಗೆ, ಚೀನಾದಲ್ಲಿ ಚಿನ್ನದ ಸಗಟು ಮಾರಾಟ ಹೆಚ್ಚಿದ್ದರ ಪರಿಣಾಮ ಬೀಜಿಂಗ್‌ ಮಾರುಕಟ್ಟೆಯಲ್ಲಿಯೂ ಬಂಗಾರದ ಧಾರಣೆ ಗಣನೀಯವಾಗಿ ಕುಸಿದಿದೆ. ಒಂದೇ ದಿನದಲ್ಲಿ ಚೀನಾದ ಚಿನಿವಾರ ಪೇಟೆಗಳಲ್ಲಿ ಒಟ್ಟು 33 ಟನ್‌ಗಳಷ್ಟು ಚಿನ್ನ ಮಾರಾಟವಾಗಿದೆ. ಇದೂ ಸಹ ವಿಶ್ವದ ವಿವಿಧೆಡೆಯಲ್ಲಿ ಧಾರಣೆ ಕುಸಿತಕ್ಕೆ ಕಾರಣವಾಗಿದೆ.

ಲಂಡನ್‌ನಲ್ಲಿ ಸೋಮವಾರದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಇಲ್ಲಿನ ಚಿನಿವಾರ ಪೇಟೆಯಲ್ಲಿ ಬಂಗಾರದ ಧಾರಣೆ ಸತತವಾಗಿ ಆರು ದಿನಗಳಿಂದ ಇಳಿಕೆ ಹಾದಿಯಲ್ಲಿಯೇ ಸಾಗಿ ಬಂದಿದೆ. ಸೋಮವಾರದ ವಹಿವಾಟಿನಲ್ಲಿ ಔನ್ಸ್ ಚಿನ್ನದ ಧಾರಣೆ 1,115.14 ಅಮೆರಿಕನ್‌ ಡಾಲರ್‌ಗಳಿಗೆ (₹ 70,990ಕ್ಕೆ) ಅಂದರೆ ಶೇ 1.70ರಷ್ಟು ಇಳಿಕೆಯಾಯಿತು. ಬೆಳ್ಳಿ ಬೆಲೆಯೂ ಔನ್ಸ್‌ಗೆ 14.80 ಡಾಲರ್‌ಗೆ ಇಳಿಯಿತು.

ಸಿಂಗಪುರದಲ್ಲಿಯೂ ಸೋಮ ವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 1,086.18 ಅಮೆರಿಕನ್‌ ಡಾಲರ್‌ಗಳಂತೆ (₹ 69,146ರಂತೆ) ಮಾರಾಟವಾಯಿತು.

ಬೆಂಗಳೂರಿನಲ್ಲಿ 2013ರ ಧಾರಣೆ!
ಬೆಂಗಳೂರು: ನಗರದಲ್ಲಿಯೂ 10 ಗ್ರಾಂ ಸ್ಟ್ಯಾಂಡರ್ಡ್‌ ಚಿನ್ನದ ಬೆಲೆ ₹ 24,390ಕ್ಕೆ ಕುಸಿದಿದೆ. ಇದು 2013ರ ಏಪ್ರಿಲ್‌ ನಂತರದಲ್ಲಿ ದಾಖಲಾದ ಬಂಗಾರದ ಕನಿಷ್ಠ ಧಾರಣೆಯಾಗಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ₹ 24,450ರಲ್ಲಿತ್ತು. ನಂತರ ₹ 24,390ಕ್ಕೆ ಇಳಿಯಿತು. ಬೇಡಿಕೆ ತಗ್ಗಿರುವುದೇ ಬೆಲೆ ಇಳಿಕೆಗೆ ಕಾರಣ’ ಎಂದು ಗಣೇಶ್‌ ಜ್ಯುವೆಲ್ಲರ್ಸ್‌ ಮಾಲೀಕ ವೇಣುಗೋಪಾಲ ಶೆಟ್ಟಿ ಅವರು ಪ್ರತಿಕ್ರಿಯಿಸಿದ್ದಾರೆ.

ಷೇರಿಗೆ ಮೌಲ್ಯ!
ಅಚ್ಚರಿ ಎಂದರೆ, ಒಂದೆಡೆ ಚಿನ್ನದ ಬೆಲೆ ಕುಸಿತ ಕಾಣುತ್ತಿದ್ದರೆ, ಚಿನ್ನಾಭರಣ ತಯಾರಿಕಾ ಕಂಪೆನಿಗಳ ಷೇರುಗಳು ಮೌಲ್ಯ ಹೆಚ್ಚಿಸಿಕೊಳ್ಳುತ್ತಿವೆ. ಮುಂಬೈ ಷೇರುಪೇಟೆಯಲ್ಲಿ ಸೋಮವಾರ ಗೀತಾಂಜಲಿ ಜೆಮ್ಸ್‌ ಷೇರು ಶೇ 13.71ರಷ್ಟು, ಶ್ರೀ ಗಣೇಶ್‌ ಜ್ಯುವಲ್ಲರಿ ಹೌಸ್‌ ಷೇರು ಶೇ 11.79ರಷ್ಟು ಹಾಗೂ ತ್ರಿಭುವನ್‌ದಾಸ್‌ ಭೀಮ್‌ಜಿ ಝವೇರಿ ಕಂಪೆನಿ ಷೇರು ಶೇ 9.37ರಷ್ಟು ಭಾರಿ ಪ್ರಮಾಣದಲ್ಲಿ ಬೆಲೆ ಏರಿಸಿಕೊಂಡವು.

Write A Comment