ಮುಂಬಯಿ: ಮಹಾರಾಷ್ಟ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆದಿದ್ದ 206 ಕೋಟಿ ರೂ. ಮೊತ್ತ ಚಿಕ್ಕಿ ಖರೀದಿ ಹಗರಣ ಕೇವಲ ಮಾಧ್ಯಮಗಳ ಸೃಷ್ಟಿ ಎನ್ನುತ್ತಿದ್ದ ಸಚಿವೆ ಪಂಕಜಾ ಮುಂಡೆ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾರೆ.
206 ಕೋಟಿ ರೂ. ಮೊತ್ತದ ಚಿಕ್ಕಿ ಖರೀದಿ ಒಪ್ಪಂದಕ್ಕೆ ತಮ್ಮ ನೇತೃತ್ವದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೇವಲ ಒಂದು ದಿನದಲ್ಲಿ ಅಂಗೀಕಾರ ನೀಡಿದೆ ಎಂಬದು ‘ಆಂಶಿಕ ಸತ್ಯ’ ಎಂದು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವೆ ತಿಳಿಸಿದ್ದಾರೆ. ಪ್ರಚಲಿತ ನಿಯಮಗಳ ಪ್ರಕಾರವೇ ಒಪ್ಪಂದ ಮಾಡಿಕೊಂಡಿದ್ದರೂ, ಇಲಾಖೆಗೆ ಪೂರೈಕೆಯಾಗಿರುವ ಚಿಕ್ಕಿಗಳ ಪೈಕಿ ಕೆಲವಷ್ಟು ಕಳೆಪೆ ದರ್ಜೆಯಿಂದ ಕೂಡಿರುವುದು ಕಂಡುಬಂದಿದೆ. ಅದನ್ನು ಪೂರೈಸಿದ ಸಂಸ್ಥೆಗೆ ವಾಪಸ್ ಕಳಿಸುವ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.