-ಸುಶೀಲಾ ಡೋಣೂರ
‘ಮ್ಯಾರೀಡ್ ಗೈ’ ಎಂದೇ ಚಿರಪರಿಚಿತ ಹೆಸರು ಅಮಿತ್ ಟಂಡನ್ ಅವರದು. ಗುಜರಾತಿ ಸರ್ದಾರ ಎನ್ನುವ ಖ್ಯಾತಿ ಪಡೆದವರು ಮಹೀಪ್ ಸಿಂಗ್. ಒಂದೇ ಊರಿನ, ಒಂದೇ ಆಸ್ಪತ್ರೆಯಲ್ಲಿ ಜನಿಸಿ, ಹಾಸ್ಯದಿಂದ-ಹಾಸ್ಯಕ್ಕಾಗಿ ಒಂದೇ ವೇದಿಕೆಯಡಿ ಬದುಕು ಕಟ್ಟಿಕೊಂಡಿರುವ ಈ ಹಾಸ್ಯನಟರ ನಗುವಿನಾಟ ಈಗ ಬೆಂಗಳೂರು ನಗರಿಯತ್ತ ಹರಿದು ಬಂದಿದೆ.
ನಗುವಿಲ್ಲದ ಬದುಕಿನಲ್ಲಿ ರಸವಿಲ್ಲ. ಹಾಗಿದ್ದ ಮೇಲೆ ನಗುವೇ ಬದುಕಾಗಬಾರದೇಕೆ ಎಂದು ನುಗುವಿನ ಬೆನ್ನು ಹತ್ತಿ ಹೊರಟವರೇ ಅಮಿತ್ ಟಂಡನ್ ಹಾಗೂ ಮಹೀಪ್ ಸಿಂಗ್. ಇಂದು, ಶನಿವಾರ, ಏಪ್ರಿಲ್ 11ರ ಸಂಜೆ 8 ಗಂಟೆಗೆ ವಸಂತ ನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ಅವರು ವಿಶೇಷ ಕಾರ್ಯಕ್ರಮ ನೀಡಲಿದ್ದಾರೆ.
ದೇಶದ ಅನೇಕ ಭಾಗಗಳಲ್ಲಿ ಹರಿದು ಹಂಚಿ ಹೋಗಿರುವ ಪಂಜಾಬಿಗಳಿಗೆ ನಿಜವಾದ ಪಂಜಾಬಿ ಜೋಕುಗಳ ಮೂಲಕ ನಗೆಯುಕ್ಕಿಸುವುದು ಹಾಗೂ ಇತರೆ ವರ್ಗದ ಜನರಿಗೂ ಪಂಜಾಬಿ ಶೈಲಿಯ ನಗುವನ್ನು ಹಂಚುವುದು ‘ಸ್ಟ್ಯಾಂಡ್–ಅಪ್ ಕಾಮಿಡಿ ಷೋ’ದ ಉದ್ದೇಶ. ಈ ಬಾರಿ ಪಂಜಾಬಿಗಳ ಜೀವನದ ಕೆಲವು ರೋಚಕ ಸಂಗತಿಗಳನ್ನು ಹೊತ್ತು ತಂದ ಹಾಸ್ಯ ಕಲಾವಿದರು ನಗರದ ಜನತೆಯ ಮುಂದೆ ನಗುವಿನ ಹಂದರ ಹಾಕಲಿದ್ದಾರೆ.
ನಗುವಿಗೆ ಜೊತೆಯಾದ ಜೋಡಿ
ಅಮಿತ್ ಹಾಗೂ ಮಹೀಪ್ ಒಂದೇ ನಗರದಲ್ಲಿ, ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದರೂ ಬೇರೆ ಬೇರೆ ಕೌಟುಂಬಿಕ ಹಿನ್ನೆಲೆಯಿಂದ ಬೆಳೆದವರು. ನಗುವನ್ನೇ ಜೀವಿಸುತ್ತ, ನಗುವಿಗಾಗಿ ಜೊತೆಯಾದ ಈ ಕಲಾವಿದರು ಬೆಂಗಳೂರಿನಲ್ಲಿ ಇಂದು ನಗುವಿನ ಹೊಳೆ ಹರಿಸಲಿದ್ದಾರೆ.
ಎಂಬಿಎ ಪದವಿ ಮುಗಿಸಿ ಹೋಟೆಲ್ ಉದ್ಯಮದಲ್ಲಿ ತೊಡಗಿರುವ ಅಮಿತ್ ಅವರಿಗೆ ನಗಿಸುವ ಕಲೆ ದೇವರು ಕೊಟ್ಟ ವರ. ಟೀವಿ ಅಥವಾ ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರವಲ್ಲ, ಸುಮ್ಮನೆ ಅವರೊಂದಿಗೆ ಮಾತಿಗಿಳಿದ ಸ್ನೇಹಿತರು–ಬಂಧುಗಳನ್ನೂ ಅವರು ನಗಿಸಿಯೇ ಕೈಬಿಡುವುದು.
ಪಂಜಾಬ್‌ನ ಅನೇಕ ಸಂಪ್ರದಾಯಸ್ಥ ಕುಟುಂಬದ ಮಕ್ಕಳಂತೆ ಅಮಿತ್ ಕೂಡ ಚೆನ್ನಾಗಿ ಓದಿ, ಪದವಿ ಪಡೆದು, ಒಂದೊಳ್ಳೆ ಉದ್ಯೋಗ ಹಿಡಿದರು. ಸಕಾಲಕ್ಕೆ ಮದುವೆಯಾಗಿ, 30 ವರ್ಷಕ್ಕೆ ಎರಡು ಮಕ್ಕಳನ್ನೂ ಪಡೆದರು. ನಂತರದ ದಿನಗಳು ಯಾಂತ್ರಿಕ ಎನ್ನುವಂತೆ ಭಾಸವಾಗಲು ಆರಂಭಿಸಿತ್ತು. ಬದುಕಿನಲ್ಲಿ ಎದುರಾಗುವ ಸಮಸ್ಯೆ–ಸವಾಲುಗಳಲ್ಲಿಯೂ ಹಾಸ್ಯವನ್ನು ಹುಡುಕುತ್ತ ಹೊರಟ ಅಮಿತ್‌ಗೆ ಪ್ರತಿದಿನ, ಪ್ರತಿ ಕೆಲಸದಲ್ಲಿ, ಪ್ರತಿ ಮಾತಿನಲ್ಲಿ, ಪ್ರತಿ ವರ್ತನೆಯಲ್ಲಿಯೂ ಹಾಸ್ಯ ಕಾಣಲು ಆರಂಭವಾಗಿತ್ತು. ಹೀಗಾಗಿ ಹಾಸ್ಯದಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾದರು.
ಹೀಗೆ ಸುಮಾರು ಒಂದು ದಶಕದಿಂದ ನಗುತ್ತ, ನಗುವನ್ನು ಹಂಚುತ್ತ, ನಗುವನ್ನೇ ಉಸಿರಾಡುತ್ತ ಹೊರಟ ಅಮಿತ್ ಹಾಸ್ಯ ಕಾರ್ಯಕ್ರಮಗಳಿಗೆ ಅಂತರರಾಷ್ಟ್ರೀಯ ಬೇಡಿಕೆ ಇದೆ. ದೇಶದೆಲ್ಲೆಡೆ ಸುಮಾರು 500 ಕಾರ್ಯಕ್ರಮಗಳನ್ನು ನೀಡಿರುವ ಅಮಿತ್, ನಗಿಸಲು ವೇದಿಕೆ ಏರುತ್ತಾರೆ ಎಂದು ಗೊತ್ತಾದರೆ ಸಾಕು, ಯಾವುದೇ ಊರು, ಗಲ್ಲಿ, ಮೊಹಲ್ಲಾ ಆದರೂ ಸರಿಯೇ, ಎಲ್ಲಾ ವರ್ಗ, ವಯೋಮಾನದ ಜನರೂ ನಗಲು ನುಗ್ಗಿ ಬರುತ್ತಾರೆ.
ಮಹೀಪ್ ಸಿಂಗ್ ವೃತ್ತಾಂತ
ಗುಜರಾತಿ ಸರ್ದಾರ್ ಮಹೀಪ್ ಸಿಂಗ್ ಅವರದು ಮತ್ತೊಂದು ವೃತ್ತಾಂತ. ಬದುಕಿನ ಮುಖ್ಯ ಘಟ್ಟದಲ್ಲಿ ಅಸಾಧಾರಣ ಖಿನ್ನತೆಗೆ ಒಳಗಾಗಿ ಬದುಕು ಅಸಹನೀಯ ಎನಿಸಿದಾಗ ಅದರಿಂದ ಪುಟಿದು ಹೊರಗೆ ಬರಲು ಮಹೀಪ್ ಆರಿಸಿಕೊಂಡ ಮಾರ್ಗವೇ ಕಾಮಿಡಿ ಷೋ.
‘ನನ್ನ ಕಾರ್ಯಕ್ರಮಕ್ಕೆ ಬಂದು ಯಾರಾದರೂ ಒಬ್ಬರು ನಗದೇ ಹೋದರೂ ಅದು ನನ್ನದೇ ಸೋಲು ಎಂದುಕೊಳ್ಳುತ್ತೇನೆ. ಮೊದಲ ಸೀಟಿನಲ್ಲಿ ಕುಳಿತವರಿಂದ ಹಿಡಿದು, ಕಟ್ಟ ಕಡೆಯ ಸಾಲಿನಲ್ಲಿರುವವರೆಲ್ಲರ ಮುಖದಲ್ಲೂ ನಗು ಚಿಮ್ಮಬೇಕು.
ಪುಟ್ಟ ಮಗುವಿನಿಂದ ಹಿಡಿದು, ಕಿವಿ ಕೇಳದ ವೃದ್ಧರೂ ನಕ್ಕು ಹಗುರಾಗಬೇಕು. ಅಂದಾಗ ಮಾತ್ರ ನಮ್ಮ ಶ್ರಮ ಸಾರ್ಥಕ’ ಎನ್ನುವುದು ಅವರ ನಂಬಿಕೆ. ಆದರೆ ನಗಿಸುವುದು ಈಗ ಅಷ್ಟು ಸುಲಭವಾದ ಸಂಗತಿಯಾಗಿ ಉಳಿದಿಲ್ಲ ಎನ್ನುವ ಮಹೀಪ್, ನೂರಾರು ಟೀವಿ ಚಾನೆಲ್‌ಗಳಿವೆ. ಅವರೂ 24 ಗಂಟೆ ಕಾರ್ಯಕ್ರಮ ನೀಡಬೇಕು. ಅದರಲ್ಲಿ ಕಾಮಿಡಿ ಕಾರ್ಯಕ್ರಮಗಳು ಮುಖ್ಯ ಪಾತ್ರ ವಹಿಸುತ್ತವೆ. ಅವೆಲ್ಲವನ್ನು ಮೀರಿ ನಾವು ಬೆಳೆಯಬೇಕು. ಪ್ರತಿ ಬಾರಿ ಟೀವಿ ಪರದೆಯ ಮೇಲೆ ಬಂದರೂ, ವೇದಿಕೆ ಏರಿ ನಿಂತರೂ ಒಂದೊಂದು ಹೊಸ ನಗುವಿನ ಹಂದರ ಹೊತ್ತು ಬರಬೇಕು. ಅದಕ್ಕಾಗಿ ಸಾಕಷ್ಟು ತಯಾರಿ ಬೇಕು ಎನ್ನುತ್ತಾರೆ.
ನಗು ಎಂದರೆ…
ನಗಬೇಕೆನ್ನುವವರು, ನಗುವ ಮನಸ್ಸಿರುವವರನ್ನು ಕರೆದು ಮುಂದೆ ಕೂಡಿಸಿಕೊಂಡು ನನ್ನ ಮನದ ಭಾವನೆಗಳನ್ನು, ಬೇಗುದಿಗಳನ್ನು ಹೊರಹಾಕಲಿಕ್ಕಿರುವ ಒಂದು ಅವಕಾಶ. ದುಡ್ಡು ಕೊಟ್ಟು ನಮ್ಮ ಮಾತು ಕೇಳಿ ನಕ್ಕು ಹೋಗುತ್ತಾರೆ. ಇತ್ತ ನಮ್ಮ ಮನಭಾರವೂ ಇಳಿಯುವುದಲ್ಲದೇ, ಅತ್ತ ಅವರ ಮನಸ್ಸೂ ಹಗುರ…
– ಅಮಿತ್ ಟಂಡನ್
ನಗುವೇ ನಮ್ಮ ಬದುಕು
ನಗು ಎನ್ನುವುದು ಯಾರೊ ಒಬ್ಬರ ಸ್ವತ್ತಲ್ಲ. ನಗು ಅಮಿತ್ ಟಂಡನ್ ಹಾಗೂ ಮಹೀಪ್ ಸಿಂಗ್ ಅವರ ಆಸ್ತಿ ಏನಲ್ಲ. ನಗು ನಮ್ಮ–ನಿಮ್ಮೆಲ್ಲರಿಗೂ ಬೇಕು. ನಗುವೇ ನಮ್ಮೆಲ್ಲರ ಬದುಕು ಎನ್ನುವ ಅಮಿತ್ ಹಾಗೂ ಮಹೀಪ್ ಮಾತಿನ ಹದ…
ಕಾಮಿಡಿ ಎನ್ನುವ ಈ ಜಗದೊಳಗಿಟ್ಟ ಮೊದಲ ಹೆಜ್ಜೆ…
ಅಮಿತ್: ಎಂಜಿನಿಯರಿಂಗ್ ಓದಿದೆ, ಸಮಾಧಾನ ಅನಿಸಲಿಲ್ಲ, ಎಂಬಿಎ ಮುಗಿಸಿದೆ ತೃಪ್ತಿ ಸಿಗಲಿಲ್ಲ, ಹತ್ತು ವರ್ಷ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದೆ, ಪ್ರತಿದಿನ ಸಂಜೆ ಮನೆಗೆ ಬಂದಾಗಲೂ ಇವತ್ತು ನಾನೇನು ಮಾಡಿದೆ ಎಂದು ಯೋಚಸಿದರೆ…. ಖಾಲೀ ಖಾಲೀ… ಈ ಟ್ರಾಜಿಡಿಗೆ ವಿದಾಯ ಹೇಳಲೇಬೇಕು ಎಂದು ನಿರ್ಧರಿಸಿದ ದಿನವೇ ಬಹುಶಃ ನಾನು ಕಾಮಿಡಿಯನ್ ಆಗಿಬಿಟ್ಟಿದ್ದೆ ಅನಿಸುತ್ತದೆ. ಹೀಗೆ ಸ್ಟ್ಯಾಂಡ್–ಅಪ್ ಕಾಮಿಡಿ ಷೋಕ್ಕೆ ಎಂಟ್ರಿ ಕೊಟ್ಟು ಐದು ವರ್ಷಗಳಾಗಿವೆಯಷ್ಟೆ. ಆದರೆ ಈ ಕೆಲಸ ಕೊಟ್ಟ ಸಮಾಧಾನ ಐದು ಜನುಮಕ್ಕಾಗುವಷ್ಟಿದೆ.
ಮಹೀಪ್: ಜೀವನದಲ್ಲಿ ಸೋತಿದ್ದೆ. ನನ್ನ ಮುಂದೆ ಆಗ ಎರಡೇ ಆಯ್ಕೆಗಳಿದ್ದವು. ಒಂದು ಸರಣಿ ಹಂತಕನಾಗುವುದು, ಎರಡು ಕಾಮಿಡಿಯನ್ ಆಗುವುದು. ಆದರೆ ಮೊದಲ ಆಯ್ಕೆ ಹೆಚ್ಚು ಕಠಿಣ ಎಂದು ಹಾಸ್ಯವನ್ನು ಒಪ್ಪಿಕೊಂಡೆ ಮತ್ತು ಅದಕ್ಕಾಗಿಯೇ ಇಂದು ನಿಮ್ಮೆಲ್ಲರ ಮನದಲ್ಲಿ ನನಗೆ ಅಂತ ಒಂದಿಷ್ಟು ಜಾಗವಿದೆ ಎಂದುಕೊಳ್ಳುವೆ.
ಭಾರತದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಷೋ ಭವಿಷ್ಯ ಹೇಗಿದೆ?
ಅಮಿತ್: ಅತ್ಯುತ್ತಮ, ಮುಂದಿನ ಹತ್ತು ವರ್ಷಗಳ ಕಾಲ ಈ ರೀತಿಯ ಷೋಗಳಿಗೆ ಭಾರೀ ಬೇಡಿಕೆ ಇರುತ್ತದೆ. ಜೀವನದಲ್ಲಿ ಬರೀ ಒತ್ತಡ, ನಿರಾಸೆ, ಹತಾಶೆಗಳಿಂದ ಬೇಸತ್ತ ಜನ ನಗುವುದಕ್ಕಾಗಿ ಕಾದಿರುತ್ತಾರೆ. ಈ ಹೊತ್ತಿನಲ್ಲಿ ಹಾಸ್ಯ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎನಿಸುತ್ತಿವೆ.
ಮಹೀಪ್: ನಿಜಕ್ಕೂ ಖುಷಿ ಎನಿಸುತ್ತದೆ. ಇದೇ ಕಳೆದ ಐದಾರು ವರ್ಷಗಳಿಂದ ಈಚೆಗಂತೂ ಈ ಕಾರ್ಯಕ್ರಮಗಳಿಗೆ ಜನ ಮುಗಿ ಬಿದ್ದು ಬರುತ್ತಾರೆ. ನಗು ಮನುಷ್ಯನ ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದು ಇದರಿಂದಲೇ ತಿಳಿದು ಬರುತ್ತದೆ.
ನಗರಿಂದ ನಗರಕ್ಕೆ ಪ್ರೇಕ್ಷಕರಲ್ಲಿ ವ್ಯತ್ಯಾಸ ಕಂಡುಬರುತ್ತದೆಯೇ?
ಅಮಿತ್: ಜನ ನಗುವುದಕ್ಕಾಗಿ ಹೀಗೆ ಕಾರ್ಯಕ್ರಮಗಳಿಗೆ, ಕ್ಲಬ್‌ಗಳಿಗೆ ಹೋಗುವುದು ಮೆಟ್ರೊ ನಗರಗಳಲ್ಲಿ ಮಾತ್ರ ಕಂಡು ಬರುವ ಬೆಳವಣಿಗೆ. ಅನೇಕ ಮೆಟ್ರೊ ನಗರಗಳಲ್ಲಿ ಕಾರ್ಯಕ್ರಮ ನೀಡಿದ್ದೇವೆ. ಕೊಲ್ಕತ್ತ ಬಿಟ್ಟರೆ ಬೆಂಗಳೂರೇ ಸಾಂಸ್ಕೃತಿಕವಾಗಿ ಹೆಚ್ಚು ಗುರುತಿಸಿಕೊಂಡ ನಗರ ಎನಿಸುತ್ತದೆ. ಇಲ್ಲಿ ಪ್ರೇಕ್ಷಕರು ಕಲೆಯನ್ನು ಗೌರವಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ.
ಮಹೀಪ್: ಪ್ರತಿಯೊಬ್ಬ ಕಲಾವಿದನಿಗೂ ಅವನದೇ ಆದ ಪ್ರೇಕ್ಷಕ ಗುಂಪು ಇರುತ್ತದೆ. ಆ ಕಲಾವಿದನ ಕಾರ್ಯಕ್ರಮಗಳು ಎಲ್ಲೇ ನಡೆದರೂ ಆ ವರ್ಗದ ಉಪಸ್ಥಿತಿ ಇದ್ದೇ ಇರುತ್ತದೆ.
ನಗಿಸುವುದನ್ನು ಬಿಟ್ಟರೆ ಮತ್ತೇನು ಮಾಡುತ್ತೀರಿ?
ಅಮಿತ್: ನಗಿಸುವುದನ್ನು ಬಿಟ್ಟರೆ ಹೊಟ್ಟೆಗೆ ಬಡಿಸುವುದನ್ನು ಮಾಡುತ್ತೇನೆ. ನನ್ನದೇ ಆದ ರೆಸ್ಟೋರೆಂಟ್, ಹೋಟೆಲ್ ಇವೆ.
ಮಹೀಪ್: ಬರೆಯುವುದು ಮತ್ತು ರಂಗಭೂಮಿ.
ನಿಮಗೆ ಸ್ಫೂರ್ತಿಯಾಗುವ ರೋಲ್ ಮಾಡೆಲ್?
ಅಮಿತ್: ದೇವರಾಣೆ… ಯಾರೂ ಇಲ್ಲ… ಹಾಸ್ಯಕ್ಕೆ ಗುರು ಇಲ್ಲ, ಬೇಕಾಗಿಯೂ ಇಲ್ಲ. ಇನ್ನೊಬ್ಬರ ಅನುಕರಣೆಗೆ ಇಲ್ಲಿ ಭವಿಷ್ಯವಿಲ್ಲ. ಆದರೆ ನನಗೆ ಬಿಲ್ ಬುರ್ರ್ ಇಷ್ಟವಾಗುತ್ತಾರೆ.
ಮಹೀಪ್: ನೋವು ನುಂಗುತ್ತಲೇ ನಗು ಹಂಚಿ ಹೋದ ಚಾರ್ಲಿ ಚಾಪ್ಲಿನ್‌ಗಿಂತ ಬೇರೆ ಸ್ಫೂರ್ತಿ ಬೇಕೇ?
ಈ ಪ್ರಪಂಚಕ್ಕೆ ಬರಲಿಚ್ಚಿಸುವ ಹೊಸ ಕಲಾವಿದರಿಗೆ ನಿಮ್ಮ ಸಲಹೆ?
ಅಮಿತ್: ಮೊದಲ ಐದು ವರ್ಷ ಹೆಚ್ಚು ಹೆಚ್ಚು ವೇದಿಕೆಗಳನ್ನು, ಕಾರ್ಯಕ್ರಮಗಳನ್ನು ಗಳಿಸುವುದು ನಿಮ್ಮ ಗುರಿಯಾಗಲಿ, ಹೆಚ್ಚು ಹಣ ಮಾಡುವುದಲ್ಲ.
ಮಹೀಪ್: ದಯವಿಟ್ಟು ಹಿಂದುಮುಂದು ಯೋಚಿಸದೆ ಈ ಕ್ಷೇತ್ರದತ್ತ ನುಗ್ಗಬೇಡಿ. ವಿನಾಕಾರಣ ಸ್ಪರ್ಧೆ ಅಧಿಕವಾಗುವುದು ನನಗೆ ಬೇಕಿಲ್ಲ… ಅಷ್ಟಕ್ಕೂ ಇದು ಕಣ್ಣಿಗೆ ಕಾಣುವಷ್ಟು ಸರಳವಾದ ಕೆಲಸ ಅಲ್ಲ. ಸಾಕಷ್ಟು ಪರಿಶ್ರಮ ಬೇಕು, ಸಾಮರ್ಥ್ಯವೂ ಬೇಕು.
ಈ ಬಾರಿಯ ನಗೆ–ನಗಾರಿ?
ಪಂಜಾಬಿಗಳು ಮತ್ತು ಅವರ ಶೈಲಿಗಳನ್ನು ಪರಿಚಯಿಸುವ ವಿಡಂಬನಾತ್ಮಕ ಹಾಸ್ಯ ಕಾರ್ಯಕ್ರಮ.