ಓದುಗರಿಗೆ ಗಣೇಶ ಚತುರ್ಥಿ ಹಾರ್ಧಿಕ ಅಭಿನಂದನೆಗಳು
ಬೆಳಗಿನ ಉಪಹಾರ ಸೇವನೆ ಬಹಳ ಮುಖ್ಯ. ಈ ತಿಂಡಿ ಹಗುರವಾಗಿರಬೇಕು ಮತ್ತು ಆರೋಗ್ಯಕರವಾಗಿರಬೇಕು. ಇದರಿಂದ ನಾವು ದಿನವಡೀ ಉತ್ಸಾಹದಿಂದಿರಬೇಕು ಆದರೆ ಕೊಬ್ಬಿನ ಅಂಶ ದೇಹ ಸೇರಬಾರದು. ಅದಕ್ಕೆ ಯಾವಾಗಲೂ ಬೆಳಗ್ಗೆ ತಿಂಡಿಗೆ ಏನು ಮಾಡುವುದು ಎನ್ನುವುದು ಎಲ್ಲರ ಮನೆಯಲ್ಲಿ ಪ್ರತೀದಿನ ಕಾಡುವ ಪ್ರಶ್ನೆ. ಅದೇ ದೋಸೆ, ಇಡ್ಲಿ, ಚಿತ್ರಾನ್ನ ಮಾಡಿ, ತಿಂದು ಬೇಸರವಾಗಿರುತ್ತದೆ ಅಲ್ಲವೇ? ಅದಕ್ಕೆ ಇಲ್ಲಿದೆ ನೋಡಿ ಹೊಸದೊಂದು ರೆಸಿಪಿ.
ಸಬ್ಬಕ್ಕಿ ಅಥವಾ ಸಾಬೂದಾನ ಸಾಮಾನ್ಯವಾಗಿ ಪಾಯಸ ಮಾಡುವಾಗ ಬಳಕೆಯಾಗುತ್ತದೆ. ಇನ್ನು ಮಹಾರಾಷ್ಟ್ರದಲ್ಲಿ ಸಾಬೂದಾನ ಖಿಚಡಿ ಹೆಚ್ಚಾಗಿ ಮಾಡುತ್ತಾರೆ. ಆದರೆ ಇದರಿಂದ ರುಚಿಕರ ದೋಸೆ ತಯಾರಿಸುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಸ್ನಾಯುಗಳ ಬೆಳವಣಿಗೆ, ರಕ್ತದೊತ್ತಡ ನಿಯಂತ್ರಣ ಕ್ಕೆ ಸಬ್ಬಕ್ಕಿ ಸಹಾಯ ಮಾಡುತ್ತದೆ. ಬನ್ನಿ, ದೋಸೆ ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ.
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ – 1/2 ಕಪ್
ಅಕ್ಕಿ ಹುಡಿ – 1/2 ಕಪ್
ಮೊಸರು – 1/3 ಕಪ್
ಹಸಿಮೆಣಸು – 2-3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – 2
ತುರಿದ ಕ್ಯಾರೆಟ್ – 1 ಕಪ್
ತೆಂಗಿನಕಾಯಿ ತುರಿ – 1/2 ಕಪ್
ಉಪ್ಪು , ತುಪ್ಪ, ಎಣ್ಣೆ
ಮಾಡುವ ವಿಧಾನ
ಸಬ್ಬಕ್ಕಿಯನ್ನು 2 – 3 ಗಂಟೆಗಳ ಕಾಲ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು ಅದಕ್ಕೆ ಮೊಸರು, ಅಕ್ಕಿ ಹಿಟ್ಟು, ತೆಂಗಿನ ತುರಿ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಈಗ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕರಿಬೇವು ಮತ್ತು ಕ್ಯಾರೆಟ್ ತುರಿಯನ್ನು ಹಾಕಿ ಮಿಶ್ರಣ ಮಾಡಿ.
ದೋಸೆ ಹಿಟ್ಟು ಸ್ವಲ್ಪ ಗಟ್ಟಿಯಾಗಿರಲಿ. ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ. ಈಗ ಸ್ಟೌ ಮೇಲೆ ತವಾ ಇಟ್ಟು ಅದು ಕಾದ ಮೇಲೆ ದೋಸೆ ಹಿಟ್ಟನ್ನು ಹುಯ್ದು ಹರಡಿರಿ.
ದೋಸೆಯನ್ನು 3-4 ನಿಮಿಷಗಳ ಕಾಲ ಬೇಯಿಸಬೇಕು. ಮೇಲೆ ಸ್ವಲ್ಪ ತುಪ್ಪ ಸವರಿ. ಈಗ ತಯಾರಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಸವಿಯಲು ಕೊಡಿ.
Comments are closed.