ಕುಂದಾಪುರ: ಆಹಾರ ಸರಪಣಿಯಲ್ಲಿ ಪ್ರಾಣಿ-ಪಕ್ಷಿ-ಸರೀಸೃಪಗಳು ಬೇರೆ ಬೇರೆ ಆಹಾರ ಇಲ್ಲವೇ ಒಂದನ್ನೊಂದು ತಿಂದು ಬದುಕುವುದು ಸಾಮಾನ್ಯ. ಆದರೆ ಇಲ್ಲೊಂದು ಬಲು ಅಪರೂಪದ ಘಟನೆ ಎಂಬಂತೆ ಹೆಬ್ಬಾವೊಂದು ತಾನು ನುಂಗಿದ್ದ ಆಹಾರನ್ನು ಹೊರ ಕಕ್ಕಿದಾಗ ಅದು ನವಿಲೆಂದು ಗೊತ್ತಾಗಿ ಅದನ್ನು ನೋಡಿದ ಸ್ಥಳೀಯರು ಆಶ್ಚರ್ಯ ಪಡುವಂತಾಗಿತ್ತು.
ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಹಲ್ತೂರು ಕೊಜಿ (ಆವೆ ಮಣ್ಣು) ಹೊಂಡದಲ್ಲಿ ಹೆಬ್ಬಾವು ಕಂಡು ಬಂದಿದ್ದು ಸ್ಥಳೀಯರು ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಆಶ್ಚರ್ಯವೆಂದರೆ ಹೆಬ್ಬಾವನ್ನು ಹಿಡಿದ ಸಂದರ್ಭದಲ್ಲಿ ಹಾವು ತಾನು ನುಂಗಿದ್ದ ನವಿಲನ್ನು ಹೊಟ್ಟೆಯಿಂದ ಹೊರ ಹಾಕಿದೆ.
ದೊಡ್ದ ಹೆಬ್ಬಾವೊಂದು ಕೊಜಿ ಹೊಂಡದಲ್ಲಿ ನವಿಲನ್ನು ನುಂಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ದಾರಿಹೋಕರು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದಾರೆ. ನಂತರ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ಹಿಡಿವ ಕಾರ್ಯಾಚರಣೆ ಕೈಗೊಂಡಾಗ ಹೆಬ್ಬಾವು ತನ್ನ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಆಹಾರ ನುಂಗಿರುವುದು ಗಮನಕ್ಕೆ ಬಂದು ಜನರ ಕುತೂಹಲಕ್ಕೆ ಕಾರಣವಾಗಿತ್ತು.
ಸ್ಥಳೀಯರ ಕಾರ್ಯಾಚಾರಣೆ ವೇಳೆ ಜಾಗೃತವಾದ ಹೆಬ್ಬಾವು ತಾನು ನುಂಗಿದ ಆಹಾರವನ್ನು ಉಗುಳಲು ಮುಂದಾಗಿದೆ. ಈ ವೇಳೆ ಹಾವಿನ ಬಾಯಿಂದ ನವಿಲಿನ ಭಾಗ ಹೊರ ಬರುತ್ತಿರುವುದನ್ನು ನೋಡಿ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ. ನೋಡ ನೋಡುತ್ತಲೇ ಹೆಬ್ಬಾವು ನವಿಲನ್ನು ತನ್ನ ಬಾಯಿಂದ ಹೊರ ಕಕ್ಕಿದೆ. ಆದರೆ ದುರದೃಷ್ಟವಶಾತ್ ಆ ವೇಳೆಗಾಗಲೇ ಹೆಬ್ಬಾವಿನ ಹೊಟ್ಟೆ ಸೇರಿದ್ದ ನವಿಲು ತನ್ನ ಉಸಿರು ಕಳೆದು ಕೊಂಡಿತ್ತು.
Comments are closed.