ಕರಾವಳಿ

ತಂದೆಯನ್ನೇ ಕಡಿದು ಹತ್ಯೆಗೈದ ಪುತ್ರನನ್ನು ಬಂಧಿಸಿದ ಬ್ರಹ್ಮಾವರ ಪೊಲೀಸರು

Pinterest LinkedIn Tumblr

ಬ್ರಹ್ಮಾವರ: ಮನೆಯಲ್ಲಿ ತಂದೆಯ ಜೊತೆ ಜಗಳಕ್ಕಿಳಿದ ಪುತ್ರ ತಂದೆಯನ್ನು ಕಡಿದು ಕೊಂದು ಪರಾರಿಯಾದ ಘಾನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಮೊಗವೀರಪೇಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಭಾನುವಾರ ಉಪ್ಪೂರು ಎಂಬಲ್ಲಿ ಬಂಧಿಸಿದ್ದಾರೆ.

ಆನಂದ (50) ಮಾರಕಾಯುಧದಿಂದ ತಂದೆಯನ್ನು ಕಡಿದು ಹತ್ಯೆಗೈದ ಆರೋಪಿ. ಸಾಧು ಮರಕಾಲ (68) ಕೊಲೆಯಾದವರು.

ಘಟನೆ ವಿವರ: ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಸಾಧು ಮರಕಾಲ ದಂಪತಿಗಳ ಮಕ್ಕಳ ಪೈಕಿ ಆನಂದ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಆಗಾಗ್ಗೆ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಶನಿವಾರ ಕೂಡ ಆನಂದ ಮನೆಗೆ ಬಂದಿದ್ದು ತಂದೆಯ ಜೊತೆ ಗಲಾಟೆ ಮಾಡಿ ಸಾಧು ಅವರನ್ನು ಮನೆಯಿಂದ ಬಿಟ್ಟು ಹೊರಹೋಗುವಂತೆ ತಗಾದೆ ತೆಗೆದಿದ್ದ. ಬಳಿಕ ತಂದೆಯ ಬೆನ್ನು, ಕಾಲಿನ ಭಾಗ ಕಡಿದು ಆರೋಪಿ ಆನಂದ ಪರಾರಿಯಾಗಿದ್ದ. ಗಾಯಾಳುವನ್ನು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿಎಂ, ಪಿಎಸ್ಐ ರಾಜಶೇಖರ್ ವಂದಲಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿದೆ.

Comments are closed.