ಕುಂದಾಪುರ: ಕಾಂಗ್ರೆಸ್ ಪಕ್ಷ ಸೇರುವವರನ್ನು ಸ್ವಾಗತಿಸುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಹೇಳಿದ್ದು, ಪಕ್ಷದ ನಿಲುವಿಗೆ ನಮ್ಮ ಸಹಮತ ಇರುವುದಾಗಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸಂಸದರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಳಿಸಿಕೊಂಡಿದ್ದ ಅವರು, ಮರಳಿ ಕಾಂಗ್ರೆಸ್ ಪಕ್ಷವನ್ನು ಸೇರುವುದಿದ್ದಲ್ಲಿ ನಾವು ಸ್ವಾಗತಿಸುತ್ತೇವೆ.
ಕಾಂಗ್ರೆಸ್ ಪಕ್ಷದೊಂದಿಗೆ ಅಪರಿಮಿತ ಸಂಬಂಧಗಳನ್ನು ಹೊಂದಿರುವ ಚಿಕ್ಕಮಗಳೂರ-ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಯಾರೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳಾದ ನಾವುಗಳು ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಕೆ. ವಿಕಾಸ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸರಸು ಡಿ ಬಂಗೇರ, ಜ್ಯೋತಿ ವಿ ಪುತ್ರನ್, ರಾಜ್ಯ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ದೇವಾನಂದ ಶೆಟ್ಟಿ ಹಳ್ನಾಡು, ರಮೇಶ್ ಗಾಣಿಗ ಕೊಲ್ಲೂರು, ಮದನ್ ಕುಮಾರ್ ಉಪ್ಪುಂದ, ವಿಜಯಾಧರ ಪೂಜಾರಿ, ಪುರಸಭಾ ಸದಸ್ಯ ಅಬು ಮಹಮ್ಮದ್, ಎನ್ಎಸ್ ಯುಐ ಮುಖಂಡ ಸುಜನ್ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments are closed.