ಕನ್ನಡ ವಾರ್ತೆಗಳು

ಪಡೀಲ್ ಬಳಿ 41 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ – 2ವರ್ಷದೊಳಗೆ ಪೂರ್ಣ : ಸಚಿವ ರೈ

Pinterest LinkedIn Tumblr

Padil_Dc_Office_1

ಮಂಗಳೂರು, ಎ.19: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡಿದೆ. ಮುಂದಿನ ಎರಡು ವರ್ಷದೊಳಗೆ 41 ಕೋಟಿ ರೂಪಾಯಿ ವೆಚ್ಚದ ನೂತನ ಕಚೇರಿ ಮಂಗಳೂರಿನ ತಾಲೂಕಿನ ಅಳಪೆ ಗ್ರಾಮದ ಪಡೀಲ್ ಬಳಿ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳಪೆ ಗ್ರಾಮದ ಸರಕಾರಿ ನಿಗಮದ 5.89 ಎಕ್ರೆ ಪ್ರದೇಶದಲ್ಲಿ 2,15,382 ಚದರ ಅಡಿ ವಿಸ್ತೀರ್ಣದ 5 ಮಹಡಿಗಳ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಕರ್ನಾಟಕ ಗೃಹ ಮಂಡಳಿಯ ಮಂಗಳೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿ ನಿಯರ್ ವಿವರವಾದ ಯೋಜನಾ ವರದಿ ತಯಾರಿಸುತ್ತಿದ್ದು, ಮುಂದಿನ ಎರಡು ವರ್ಷದೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸುವ ಚಿಂತನೆ ಇದೆ.

ಈ ಹಿಂದೆ ಸರಕಾರಕ್ಕೆ 45 ಕೋಟಿ ರೂ.ಯ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿತ್ತು. ಆದರೆ ಸರಕಾರದಿಂದ ಈ ಅಂದಾಜು ಮೊತ್ತವನ್ನು 25 ರಿಂದ 30 ಕೋಟಿ ರೂ.ಗೆ ಸೀಮಿತಗೊಳಿಸಲು ಸೂಚನೆ ದೊರೆತ ಬಳಿಕ ಮೂರು ಇಲಾಖೆಗಳನ್ನು ಸೇರಿಸಿ ಅವುಗಳಿಗೆ ಕಟ್ಟಡ ನಿರ್ಮಾಣ ಮಾಡುವ ಅನುದಾನದ ನಿರೀಕ್ಷೆಯೊಂದಿಗೆ 45 ಕೋಟಿ ರೂ.ಅಂದಾಜು ಮೊತ್ತದ ಪ್ರಸ್ತಾಪವನ್ನು ಸರಕಾರಕ್ಕೆ ಎರಡನೆ ಬಾರಿ ಕಳುಹಿಸಿದ ಪ್ರಕಾರ ಶುಕ್ರವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ 41 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ ಎಂದು ಅವರು ತಿಳಿಸಿದರು.

Padil_Dc_Office_2

ಸಂಕೀರ್ಣದ ವಿಶೇಷತೆಗಳು: ತಳ, ನೆಲ ಅಂತಸ್ತು ಸೇರಿದಂತೆ 5 ಮಹಡಿಗಳ ಕಟ್ಟಡ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಹಿಂದುಳಿದ ವರ್ಗಗಳ ಜಿಲ್ಲಾ ಕಚೇರಿ, ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿ, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ, 400ಆಸನಗಳ ಸಭಾಂಗಣ, ಎರಡು ಚಿಕ್ಕ ಸಭಾಂಗಣ ಸೇರಿದಂತೆ ಒಟ್ಟು 36 ಕಚೇರಿಗಳ ಸಂಕೀರ್ಣ ಇದಾಗಿದೆ.

ಒಟ್ಟು 5.89 ಎಕ್ರೆ ಪ್ರದೇಶದಲ್ಲಿ 2,15,382 ಚದರ ಅಡಿ ವಿಸ್ತೀರ್ಣದ ಕಟ್ಟಡ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿಯ ಕಚೇರಿ 1,10,739 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. 307 ಕಾರುಗಳು, 150 ದ್ವಿಚಕ್ರ ವಾಹನಗಳು ತಂಗಲು ವ್ಯವಸ್ಥೆ ಇರುತ್ತದೆ. ಅಂಚೆ ಕಚೇರಿ, ಎಟಿಎಂ/ಬ್ಯಾಂಕ್, ಪೊಲೀಸ್ ಔಟ್ ಪೋಸ್ಟ್, ಕ್ಯಾಂಟೀನ್ , ಸ್ಟೇಶನರಿ ಇತ್ಯಾದಿ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದು ಯೋಜನಾ ವರದಿಯಲ್ಲಿ ತಿಳಿಸಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.

ಕಸ್ತೂರಿ ರಂಗನ್ ವರದಿಯಿಂದ ಕಾಡಿನ ಅಂಚಿನಲ್ಲಿ ವಾಸಿಸುತ್ತಿರುವ ಜನರಿಗೆ ತೊಂದರೆಯಾಗದಂತೆ ಜನವಸತಿಯ ಪ್ರದೇಶವನ್ನು ಹೊರತು ಪಡಿಸಿ, ತೊಂದರೆ ನಿವಾರಿಸಲು ಪೂರಕವಾಗಿ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಕಂದಾಯ ಇಲಾಖೆಗೆ ಅರಣ್ಯ ಪ್ರದೇಶವಲ್ಲದ ಭೂಮಿಯನ್ನು ವರ್ಗಾಯಿಸಲು ನಿರ್ಧರಿಸಿದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

Padil_Dc_Office_3

ಕೊಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರಕಾರ ಬದ್ಧವಿದೆ. ಈ ಬಗ್ಗೆ ಅಪಪ್ರಚಾರ ಬೇಡ, ಜಿಲ್ಲೆಯ ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ಸ್ಥಾಪಿಸಲುದ್ದೇಶಿಸಿರುವ ಪಶು ವೈದ್ಯ ಕಾಲೇಜನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಈ ಬಗ್ಗೆ ಪಶು ಸಂಗೋಪನಾ ಸಚಿವರೇ ಸ್ಪಷ್ಟನೆ ನೀಡಿದ್ದಾರೆ. ಸರಕಾರ 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಯೋಜನೆಯನ್ನು ಗದಗದ ಯೋಜನೆಯ ಬಳಿಕ ಸರಕಾರ ಕೈಗೆತ್ತಿಕೊಳ್ಳಲಿದೆ ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ರಂಗ ಮಂದಿರ ನಿರ್ಮಾಣ ಯೋಜ ನೆಗೆ ಟಾಗೂರ್ ಕಲ್ಚರಲ್ ಫೌಂಡೇಶನ್‌ನ ನೆರವನ್ನು ಕೋರ ಲಾಗುವುದು ಬಳಿಕ ರಂಗ ಮಂದಿರ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಂಬೇಡ್ಕರ್ ಭವನವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕುಗಳಲ್ಲಿ ನಿರ್ಮಾಣಗೊಂಡಿರುವ ಮಿನಿ ವಿಧಾನ ಸೌಧ ಕಟ್ಟಡಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಶರಾವತಿ ನದಿ ಪ್ರದೇಶದಲ್ಲಿ ಭೂಮಿ ಮುಳುಗಡೆಯಾದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರಕಾರ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment