ರಾಷ್ಟ್ರೀಯ

ಉಗ್ರರ ಗುಂಡಿಗೆ ಬಲಿಯಾದ ಎನ್ ಕೌಂಟರ್ ಸ್ಪೆಶಲಿಸ್ಟ್ ಅಲ್ತಾಫ್ ದಾರ್

Pinterest LinkedIn Tumblr

Altaf-Darಶ್ರೀನಗರ: ಜಮ್ಮು-ಕಾಶ್ಮೀರದ ಭಯೋತ್ಪಾದಕ ನಿಗ್ರಹ ತಜ್ಞ ಪ್ರಮುಖ ಪೊಲೀಸ್ ಅಧಿಕಾರಿಗಳಲ್ಲೊಬ್ಬರೆಂಬ ಖ್ಯಾತಿಗೆ ಪಾತ್ರರಾಗಿದ್ದ ಸಬ್ ಇನ್ಸ್ ಪೆಕ್ಟರ್ ಮೊಹಮ್ಮದ್ ಅಲ್ತಾಫ್ ದಾರ್ (37) ಅವರು ಬಂಡೀಪುರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹುತಾತ್ಮರಾಗಿದ್ದಾರೆಂದು ಗುರುವಾರ ವರದಿಯಾಗಿದೆ.

ನಿನ್ನೆ ಬಂಡೀಪುರದಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ತಂಡ ಕಾರ್ಯಾಚರಣೆಯೊಂದರಲ್ಲಿ ಅಲ್ತಾಫ್ ಅಹ್ಮದ್ ಅವರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. ಅಲ್ತಾಫ್ ಸಾವು ಭದ್ರತಾ ಪಡೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಜಮ್ಮು ಕಾಶ್ಮೀರದಲ್ಲಿ ದುಃಖದ ಮಡುಗಟ್ಟುವಂತೆ ಮಾಡಿದೆ.

ಬಂಡೀಪುರದಲ್ಲಿ ಲಷ್ಕರೆ ತಯ್ಯಿಬಾ ಕಮಾಂಡರ್ ಅಬು ಖಾಸಿಮ್ ಪತ್ತೆಗಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ತಾಫ್ ಇತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಕಾರ್ಯ ನಿರತರಾಗಿದ್ದರು.. ರಾಷ್ಟ್ರೀಯ ತನಿಖಾ ದಳದ ಪ್ರಕಾರ, ಆಗಸ್ಟ್ 5ರಂದು ಉಧಂಪುರದಲ್ಲಿ ಗಡಿ ಭದ್ರತಾ ನೆಲೆಯ ಮೇಲೆ ನಡೆದ ದಾಳಿಯ ರೂವಾರಿ ಪಾಕಿಸ್ತಾನ ಮೂಲದ ಖಾಸಿಮ್ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಿಮ್ ಪತ್ತೆಗಾಗಿ ಬಂಡೀಪುರದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಲ್ತಾಫ್ ಅವರು ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಖಾಸಗಿ ಕಾರೊಂದರಲ್ಲಿ ಖಾಸಿಮ್ ನನ್ನು ಹಿಡಿಯಲು ಕಾರ್ಯಾಚರಣೆಗಿಳಿದಿದ್ದರು. ಕಾರಿನಲ್ಲಿ ಹೋಗುತ್ತಿದ್ದ ವೇಳೆ ದಾರಿಯಲ್ಲಿ ಖಾಸಿಮ್ ಹಾಗೂ ಆತನ ಸಹವರ್ತಿಗಳು ಚಲಿಸುತ್ತಿರುವುದು ಕಂಡುಬಂದಿತು. ಈ ವೇಳೆ ಅವರನ್ನು ಅಡ್ಡಗಟ್ಟಲು ಪ್ರಯತ್ನಿಸಿದಾಗ ಅಲ್ತಾಫ್ ಇದ್ದ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ದಾಳಿ ವೇಳೆ ಅಲ್ತಾಫ್ ಅವರ ಕುತ್ತಿಗೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯವಾಯಿತು. ತಕ್ಷಣವೇ ಅವರನ್ನು ಸೇನೆಯ ಹೆಲಿಕಾಪ್ಟರ್ ನಲ್ಲಿ ಸೇನಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ ಗಾಮ್ ನ ನಿವಾಸಿಯಾಗಿರುವ ಅಲ್ತಾಫ್ ಅವರು ಅಪಾರ ದೇಶಪ್ರೇಮ ಹೊಂದಿರುವ ವ್ಯಕ್ತಿಯಾಗಿದ್ದರು. ಅಲ್ಲದೆ, ಪೊಲೀಸ್ ಸೇವೆಗೆ ಸಲ್ಲಿಕೆಯಾಗುವ ಅತ್ಯುನ್ನತ ಗೌರವ, ರಾಷ್ಟ್ರಪತಿಯವರ ಶೌರ್ಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಅವರು ಹುತಾತ್ಮರಾಗಿದ್ದು, ಎರಡು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಅಗಲಿದ್ದಾರೆ.

Write A Comment