ರಾಷ್ಟ್ರೀಯ

ಆಪ್ ಸರ್ಕಾರದಿಂದ ನೀರಿನ ಬಿಲ್ ಮನ್ನಾ, ದೆಹಲಿ ಜನತೆಗೆ ವರ್ಷದ ಕೊಡುಗೆ

Pinterest LinkedIn Tumblr

Kejriwal

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ಭಾನುವಾರ ಒಂದು ವರ್ಷ ಪೂರ್ಣಗೊಳಿಸಿದ್ದು, ಈ ಸಂದರ್ಭದಲ್ಲಿ ನೀರಿನ ಬಿಲ್ ಮನ್ನಾ ಮಾಡುವ ಮೂಲಕ ದೆಹಲಿ ಜನತೆಗೆ ವಾರ್ಷಿಕೋತ್ಸವದ ಕೊಡುಗೆ ನೀಡಿದೆ.
ಆಪ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸಂಪುಟದ ಎಲ್ಲಾ ಸಚಿವರ ಜೊತೆಗೆ ಬೃಹತ್ ಜನ ಸಂಪರ್ಕ ಸಭೆ ನಡೆಸಿದರು. ಬಳಿಕ ಈ ವರ್ಷದ ನವೆಂಬರ್ ತಿಂಗಳವರೆಗಿನ ನೀರಿನ್ ಬಿಲ್​ಅನ್ನು ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದರು.

ವಿದ್ಯುತ್ ಮತ್ತು ನೀರಿನ ಬಿಲ್ ವ್ಯವಸ್ಥೆ ಅಯೋಮಯವಾಗಿದೆ. 20,000 ಲೀಟರ್ ನೀರನ್ನು ಉಚಿತವಾಗಿ ನೀಡಿದ ಬಳಿಕವೂ ದೆಹಲಿ ಜಲಮಂಡಳಿಯು ಈ ವರ್ಷ 176 ಕೋಟಿ ರುಪಾಯಿಗಳ ಆದಾಯ ಗಳಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಜನತೆಯ ನೀರಿನ ಬಿಲ್ಲನ್ನು ಆಸ್ತಿ ತೆರಿಗೆ ವರ್ಗೀಕರಣಕ್ಕೆ ಅನುಗುಣವಾಗಿ ಮನ್ನಾ ಮಾಡಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದರು.

ಎ/ಬಿ ವರ್ಗಗಳಿಗೆ ಶೇಕಡಾ 25ರಷ್ಟು ಬಿಲ್ ಮನ್ನಾ ಮಾಡಲಾಗುವುದು. ಸಿ ವರ್ಗಕ್ಕೆ ಶೇಕಡಾ 50, ಡಿ ವರ್ಗಕ್ಕೆ ಶೇಕಡಾ 75 ಮತ್ತು ಇ/ಎಫ್/ಜಿ/ಎಚ್ ವರ್ಗಗಳಿಗೆ ಶೇಕಡಾ 100ರಷ್ಟು ನೀರಿನ ಬಿಲ್ ಮನ್ನಾ ಮಾಡಲಾಗುವುದು ಎಂದು ಅವರು ದೆಹಲಿ ಸಿಎಂ ಹೇಳಿದರು.

2017ರ ಡಿಸೆಂಬರ್ ವೇಳೆಗೆ ಪ್ರತಿಯೊಬ್ಬರಿಗೂ ಕುಡಿಯಲು ಯೋಗ್ಯವಾದ ನೀರು ನಳದಲ್ಲೇ ಬರಲಿದೆ. ಈ ನೀರು ಫಿಲ್ಟರ್ ನೀರಿಗಿಂತ ಉತ್ತಮವಾಗಿರುತ್ತದೆ. ನೂತನ ಪ್ರಯೋಗಾಲಯ ಮತ್ತು ಸೋರಿಕೆ ಪತ್ತೆ ಸೆಲ್​ನ್ನು ದೆಹಲಿ ಜಲಮಂಡಳಿ ಹೊಂದಲಿದೆ ಎಂದೂ ಮುಖ್ಯಮಂತ್ರಿ ವಿವರಿಸಿದರು. ಅಧಿಕಾರಕ್ಕೆ ಬಂದ ತತ್ ಕ್ಷಣವೇ ನಾವು ವಿದ್ಯುತ್ ಬಿಲ್ ಇಳಿಸಿದ್ದೇವೆ. ಈಗ ರಾಷ್ಟ್ರದಲ್ಲೇ ಅತ್ಯಂತ ಕಡಿಮೆ ವಿದ್ಯುತ್ ದರ ಇರುವ ಮೂರು ರಾಜ್ಯಗಳಲ್ಲಿ ದೆಹಲಿಯೂ ಒಂದು ಎಂದು ಕೇಜ್ರಿವಾಲ್ ನುಡಿದರು.

Write A Comment