ಕರಾವಳಿ

ಗೂಂಡಾ ಪ್ರವೃತಿ ನಿಯಂತ್ರಣಕ್ಕೆ ಮುಂದಾದ ಪೊಲೀಸ್ ಇಲಾಖೆ : ರೌಡಿ ಚೋನಿ ವಿರುದ್ಧ ಗೂಂಡಾ ಕಾಯಿದೆ ಜಾರಿ.

Pinterest LinkedIn Tumblr

Choni_Gund_Act_1

ಮಂಗಳೂರು,ಅ,31 : ಸೋಮೇಶ್ವರ ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಕುಖ್ಯಾತ ರೌಡಿ ಕೇಶವ ಪೂಜಾರಿ ಯಾನೆ ಚೋನಿ (24) ವಿರುದ್ಧ ಮಂಗಳೂರು ಕಮಿಷನರ್ ಗೂಂಡಾ ಕಾಯಿದೆ ಜಾರಿಗೊಳಿಸಿದ್ದಾರೆ. ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ ಮಾರಣಾಂತಿಕ ಹಲ್ಲೆ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದ.

ಈತ ಉಳ್ಳಾಲ ಠಾಣೆ ವ್ಯಾಪ್ತಿಯ ಸೋಮೇಶ್ವರದಲ್ಲಿ 2011ರ ನ.13ರಂದು ನಡೆದಿದ್ದ ಸಂದೀಪ್ ಶೆಟ್ಟಿ ಕೊಲೆ ಪ್ರಕರಣ ಮತ್ತು 2013ರಲ್ಲಿ ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ನಡೆದಿದ್ದ ಉದ್ಯಮಿ ಮೇಲಿನ ಶೂಟೌಟ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ. ಅಲ್ಲದೆ ಭೂಗತ ವ್ಯಕ್ತಿಗಳೊಂದಿಗೆ ನಂಟು ಬೆಳೆಸಿ ಹಲವಾರು ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಈತನ ಮೇಲಿದೆ. ಈತನ ಗೂಂಡಾ ವ್ಯಕ್ತಿತ್ವವನ್ನು ನಿಯಂತ್ರಿಸುವ ಸಲುವಾಗಿ ಈತನ ಮೇಲೆ ಬುಧವಾರ ಗೂಂಡಾಕಾಯಿದೆ ಜಾರಿ ಮಾಡಲಾಗಿದೆ. ಸದ್ಯ ಚೋನಿ ಬಳ್ಳಾರಿ ಜೈಲಿನಲ್ಲಿದ್ದಾನೆ.

ಸ್ಥಳೀಯ ಟಿ.ವಿ ಚಾನೆಲ್ ಒಂದರಲ್ಲಿ ಕ್ಯಾಮರಾ ಮೆನ್: ಕೇಶವ ಪೂಜಾರಿ ಯಾನೆ ಚೋನಿ ತೊಕ್ಕೊಟ್ಟಿನ ದೃಶ್ಯ ಮಾಧ್ಯಮವೊಂದರ ಕ್ಯಾಮರಾ ಮೆನ್ ಆಗಿದ್ದ. ಅಲ್ಲದೆ ವೃತ್ತಿಪರ ವೀಡಿಯೋಗ್ರಾಫರ್ ಆಗಿ ದುಡಿಯುತ್ತಿದ್ದ. ಆದರೆ ಪದೇ ಪದೇ ಪುಂಡಾಟಿಕೆ ಕೃತ್ಯಗಳಲ್ಲಿ ಭಾಗಿಯಾಗಿದ್ದರಿಂದ ಕೆಲಸ ಕಳೆದುಕೊಂಡ. ಆ ಬಳಿಕ ಆತ ಪಾತಕ ಕೃತ್ಯಗಳಲ್ಲಿ ಕಾಣಿಸಿಕೊಂಡಿದ್ದ. ಚೋನಿ ಕೊಲೆ ಮಾಡಿದ್ದ ಸಂದೀಪ್‌ನೊಂದಿಗೆ ಇದ್ದ ಆತ ಬಳಿಕ ಉಳ್ಳಾಲದ ಡಾನ್ ಆಗುವ ಕನಸು ಕಂಡು ಸಹಚರ ಸಂದೀಪ್ ಶೆಟ್ಟಿಯನ್ನೇ ಸ್ನೇಹಿತರ ಜತೆಗೂಡಿ ಕೊಲೆ ಮಾಡಿದ್ದ.

ಆರೋಪಿ ಚೋನಿ ಗೂಂಡಾ ಕಾಯಿದೆ ಹೇರಿರುವ ಹಿನ್ನೆಲೆಯಲ್ಲಿ ಆತನನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕಾಗುತ್ತದೆ. ಈಗಾಗಲೇ ಆತ ಬಳ್ಳಾರಿ ಜೈಲ್‌ನಲ್ಲಿರುವುದರಿಂದ ಆತನನ್ನು ಅಲ್ಲೇ ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗುತ್ತದೆ.

ಗೂಂಡಾ ಕಾಯಿದೆ ಜಾರಿಗೊಂಡ ಹಿನ್ನೆಲೆಯಲ್ಲಿ ಈ ಹಿಂದಿನ ಯಾವುದೇ ಪ್ರಕರಣದಲ್ಲಿ ಆತ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಅಲ್ಲದೆ ಜೈಲಿನಲ್ಲಿ ಆತನನ್ನು ವಕೀಲರು, ಸಂದರ್ಶಕರು ಸೇರಿದಂತೆ ಯಾರೂ ಭೇಟಿ ಮಾಡುವಂತಿಲ್ಲ. ಒಂದು ವೇಳೆ ಭೇಟಿ ಮಾಡುವುದಿದ್ದರೆ, ಜೈಲು ಅಧೀಕ್ಷಕರು ಡಿಜಿಪಿಗೆ ಮನವಿ ಮಾಡಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಗೂಂಡಾ ಕಾಯಿದೆ ಹಾಕಿರುವುದನ್ನು ಆರೋಪಿ ಪ್ರಶ್ನಿಸುವಂತಿಲ್ಲ. ಪ್ರಶ್ನಿಸುವುದಿದ್ದರೆ ಹೈಕೋರ್ಟ್‌ಗೆ ಕೇವಿಯಟ್ ಸಲ್ಲಿಸಬಹುದಾಗಿದೆ. ಮೂರನೇ ಗೂಂಡಾ ಆ್ಯಕ್ಟ್: ಕೇಶವ ಪೂಜಾರಿ ಯಾನೆ ಚೋನಿಗೆ ಗುಂಡಾ ಕಾಯಿದೆ ವಿಧಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂರನೇ ಗೂಂಡಾ ಕಾಯಿದೆಯಾಗಿದೆ.

ಈ ಮೊದಲು ಮೂರು ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ ಸುಮಾರು 13 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಪ್ರದೀಪ್ ಮೆಂಡನ್ ಹಾಗೂ ಉಳ್ಳಾಲ ಟಾರ್ಗೆಟ್ ಗ್ರೂಪ್ ಹೆಸರಿನಲ್ಲಿ ಬ್ಯ್ಲಾಕ್‌ಮೇಲ್ ಮಾಡಿಸಿ ಬಲವಂತದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿಸಿ ಹಣ ದೋಚುತ್ತಿದ್ದ ಇಲ್ಯಾಸ್ ವಿರುದ್ಧ ಗೂಂಡಾ ಕಾಯಿದೆ ಜಾರಿಗೊಳಿಸಲಾಗಿತ್ತು.

ಗೂಂಡಾಕಾಯ್ದೆ ಪಟ್ಟಿಯಲ್ಲಿ ಇನ್ನಷ್ಟು ಹೆಸರುಗಳು…

ದಿನದಿಂದ ದಿನಕ್ಕೆ ನಟೋರಿಯಸ್ ಆಗಿ ಬೆಳೆಯುತ್ತಿದ್ದ ಚೋನಿ ಮೇಲೆ ಗೂಂಡಾಕಾಯ್ದೆ ಹಾಕಿದ ನಂತರ ಈ ಪಟ್ಟಿಯಲ್ಲಿ ಇನ್ನಷ್ಟು ಹೆಸರುಗಳು ಕಾಯುತ್ತಿವೆ ಎಂದು ತಿಳಿದುಬಂದಿವೆ. ಚೋನಿಯನ್ನು ಬೆಳೆಸುತ್ತಿರುವ ಒಂದು ಗುಂಪಿನ ಮೇಲೆಯೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಇದರ ಜೊತೆಗೇ ಬಜರಂಗದಳದ ಕೆಲ ಪ್ರಮುಖರ ಮೇಲೆಯೂ ಗೂಂಡಾಕಾಯ್ದೆ ಹಾಕಲು ಸಿದ್ಧತೆ ನಡೆಸಲಾಗುತ್ತಿರುವ ಅಂಶವೂ ಬೆಳಕಿಗೆ ಬಂದಿದೆ.

ಸದ್ಯ ಬಜರಂಗದಳದವರ ಮೇಲೆ ಗೂಂಡಾಕಾಯ್ದೆ ಹೇರಿದರೆ ಅದು ಕಾಂಗ್ರೆಸ್-ಬಿಜೆಪಿ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೆಲ ನಟೋರಿಯಸ್ ರೌಡಿಗಳನ್ನು ಈ ಪಟ್ಟಿಗೆ ಎಳೆದು ತರಲಾಗುತ್ತಿದೆ.

Write A Comment