ಕರ್ನಾಟಕ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ನವಿಲುಧಾಮದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಳ!

Pinterest LinkedIn Tumblr

navilu

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂ­ಕಿನ ಬಂಕಾಪುರದಲ್ಲಿರುವ ನವಿಲು­ಧಾಮದಲ್ಲಿ ನವಿಲುಗಳ ಸಂಖ್ಯೆ ಕ್ಷೀಣಿಸುತ್ತಿದೆ. ನವಿಲುಧಾಮ ಪುನರು­ಜ್ಜೀವನಗೊಳ್ಳದಿದ್ದರೆ, ನವಿಲುಗಳು ಶಾಶ್ವತ­ವಾಗಿ ನಶಿಸಿಹೋಗಿ­ಬಿಡುತ್ತವೆ ಎಂದು ಮುಂಬೈ­ನಲ್ಲಿರುವ ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್‌) ಇತ್ತೀಚೆಗೆ ವರದಿ ಮಾಡಿತ್ತು. ಆದರೆ, ಅಲ್ಲಿನ ಚಿತ್ರಣ ಬೇರೆಯೇ ಇದೆ. ಮೊದಲಿಗಿಂತ, ಈಗ ನವಿಲುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಲಭ್ಯವಿರುವ ಅಂಕಿ–ಅಂಶಗಳೂ ಇದನ್ನು ಪುಷ್ಟೀಕರಿಸುತ್ತವೆ.

‘ಕೇಂದ್ರಸರ್ಕಾರ 2001ರಲ್ಲಿ  ಬಂಕಾ­ಪುರ ಸಂರಕ್ಷಿತ ಪ್ರದೇಶವನ್ನು ನವಿಲು ಧಾಮ ಎಂದು ಘೋಷಿಸಿದಾಗಿನಿಂದ ಈವರೆಗೆ ನವಿಲುಗಳ ಸಂಖ್ಯೆ ಹೆಚ್ಚಾ­ಗುತ್ತಾ ಬಂದಿದೆಯೇ ಹೊರತು ಎಂದೂ ಕ್ಷೀಣಿಸಿಲ್ಲ. 2009ರಲ್ಲಿ ಮೊದಲ ಬಾರಿಗೆ ಬೆಂಗ­ಳೂರಿನ ವಿನೋದ ಭಟ್‌ ಇಲ್ಲಿ ನಡೆಸಿದ ಗಣತಿ­ಯಲ್ಲಿ 400 ನವಿಲು­ಗಳಿ­ದ್ದವು. ಅವರು ಅಂತಿಮ ವರದಿ­ಯ­ನ್ನೇನೂ ನೀಡಿಲ್ಲ. ಈಗ 500 ರಿಂದ 600 ನವಿಲುಗಳು ಇವೆ’ ಎನ್ನುತ್ತಾರೆ ಬಂಕಾ­ಪುರದ ಖಿಲ್ಲಾರಿ ತಳಿ ಗೋವು ಸಂವ­ರ್ಧನಾ ಕೇಂದ್ರದ ಉಪನಿರ್ದೇಶಕ ಡಾ. ಟಿ. ಪರಮೇಶ್ವರ ನಾಯಕ. ‘ಸಾಮಾನ್ಯ­ವಾಗಿ 1:20ರ ಅನುಪಾತ­ದಲ್ಲಿ ಗಂಡು ಮತ್ತು ಹೆಣ್ಣು ನವಿಲುಗಳು ಇರುತ್ತವೆ. ಇಲ್ಲಿ ಸುಮಾರು 89 ಗಂಡು ನವಿಲು­ಗಳಿವೆ. ಸಾಮಾನ್ಯ ಅನುಪಾತದ ಪ್ರಕಾರ ಲೆಕ್ಕ ಹಾಕಿ­ದರೂ, ಅವುಗಳ ಸಂಖ್ಯೆ ಸಾವಿರ ಮೀರುತ್ತದೆ’ ಎನ್ನುತ್ತಾರೆ.

‘ರಾಷ್ಟ್ರೀಯ ಪಕ್ಷಿ ಎಂಬ ಗೌರವ ಇರು­ವುದ­ರಿಂ­ದಲೂ ನವಿಲುಗಳಿಗೆ ಹಾನಿ ಉಂಟು ಮಾಡಲು ಯಾರೂ ಬಯ­ಸು­ವು­ದಿಲ್ಲ. ಅಲ್ಲದೆ, ಕಾಡಿನ ಕ್ರೂರ ಮೃಗ­ಗಳಿ­ಗಿಂತ, ಮನುಷ್ಯನೇ ವಾಸಿ ಎಂಬ ಭಾವನೆ­ಯಲ್ಲಿ ಅವುಗಳು ಹೊಲಗಳ ಕಡೆಗೆ ಬರು­ತ್ತಿವೆ. ಮನುಷ್ಯ­ನಿಂದ ಯಾವುದೇ ತೊಂದರೆ ಇಲ್ಲ ಎಂದು ಖಚಿತವಾದ ಮೇಲೆ ಆ ಪ್ರದೇಶದ­ಲ್ಲಿಯೇ ವಂಶಾ­ಭಿ­ವೃದ್ಧಿ ಪ್ರಾರಂಭಿ­ಸುತ್ತವೆ. ಇಲ್ಲಿ ಅವುಗಳ ವಾಸಕ್ಕೆ, ವಂಶಾಭಿವೃದ್ಧಿಗೆ ಪೂರಕವಾದ ವಾತಾವ­ರಣ­ವಿದೆ’ ಎಂದು ಪರಮೇಶ್ವರ ನಾಯಕ ಹೇಳಿದರು.

‘ಹುಳ, ಹುಪ್ಪಡಿ ತಿಂದು ಬದುಕುವ ನವಿಲು­ಗಳಿಂದ ಬೆಳೆಗೂ ತೊಂದರೆಗಳೂ ಹೆಚ್ಚಿಲ್ಲ. ಹೀಗಾಗಿ ಸುತ್ತ–ಮುತ್ತಲ ರೈತರು ಅವುಗಳಿಗೆ ತೊಂದರೆ ಮಾಡು­ವು­ದಿಲ್ಲ’ ಎಂದು ಹೇಳಿದರು.

‘139 ಎಕರೆ ಪ್ರದೇಶದಲ್ಲಿ ನವಿಲು­ಧಾಮ ಹರಡಿಕೊಂಡಿದೆ. ಈ ಪ್ರದೇಶ­ವನ್ನು ನವಿಲುಧಾಮ ಎಂದು ಘೋಷಿಸಿ­ದಾ­ಗಿ­ನಿಂದ ನಾನು ಇಲ್ಲಿ ಕಾರ್ಯ­ನಿರ್ವ­ಹಿ­ಸುತ್ತಿದ್ದೇನೆ. ಯಾರೂ ಈವರೆಗೆ ಸರಿಯಾಗಿ ನವಿಲುಗಳ ಗಣತಿ ಮಾಡಿಲ್ಲ. ವಂಶಾಭಿವೃದ್ಧಿ ಮುಂದು­ವರಿಸುತ್ತಾ ಅವು ಬೇರೆ ಕಡೆಗೆ ವಲಸೆ ಹೋಗು­ವುದರಿಂದ ನಿಖರವಾಗಿ ಸಂಖ್ಯೆ ಹೇಳಲೂ ಸಾಧ್ಯವಿಲ್ಲ. ಆದರೆ, ಮೊದಲಿಗಿಂತ ಅವುಗಳ ಸಂಖ್ಯೆ  ಸಾಕಷ್ಟು ಹೆಚ್ಚಾಗಿರು­ವುದು ಸತ್ಯ’  ಎಂದು ಹೇಳುತ್ತಾರೆ ಪರಮೇಶ್ವರ ನಾಯಕ.

‘ಕಾರ್ಯಕ್ರಮ ನಿಲ್ಲಲಿ’
ನವಿಲುಧಾಮ ಪ್ರವೇಶಿಸು­ತ್ತಿದ್ದಂ­ತೆಯೇ ಯಲ್ಲಮ್ಮನ ದೇವಸ್ಥಾನ ಸಿಗುತ್ತದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆ. ಅಲ್ಲದೆ, ಮದುವೆ ಸಮಾರಂಭಗಳು ನಡೆಯು­ತ್ತಿ­ರುತ್ತವೆ. ಅದರೊಂದಿಗೆ, ಬಕ್ರೀದ್‌, ರಂಜಾನ್‌ ವೇಳೆ ಈ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಸಹ ಜಿಲ್ಲಾ­ಧಿ­ಕಾರಿ ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ವಾಹನ ಸಂಚಾರ, ಜನರ ಗದ್ದಲ,  ಸಿನಿಮಾ ಹಾಡುಗಳ ಭರಾಟೆ ಜೋರಾಗಿರುತ್ತದೆ. ಇದ­ರಿಂದ ನವಿಲು­ಗಳು ಗಾಬರಿ­ಗೊಳ್ಳು­ತ್ತವೆ. ಈ ಪ್ರದೇಶದಲ್ಲಿ ವಾಹನ ಸಂಚಾರ­ ನಿರ್ಬಂಧಿಸಿದರೆ ಉತ್ತಮ ಎಂಬುದು ಪಕ್ಷಿಪ್ರಿಯರ ಮನವಿ.­

Write A Comment