ಕರ್ನಾಟಕ

ಡಾ.ಕಲಬುರ್ಗಿ ಗುಂಡಿಗೆ ಬಲಿ: ತತ್ತರಿಸಿದ ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ

Pinterest LinkedIn Tumblr

MMK_ಧಾರವಾಡ/ಬೆಂಗಳೂರು, ಆ.30: ಹಿರಿಯ ಸಾಹಿತಿ, ಖ್ಯಾತ ಸಂಶೋಧಕ, ವೈಚಾರಿಕ ಚಿಂತಕರೂ ಆಗಿದ್ದ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಇಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ.
ರವಿವಾರ ಬೆಳಗ್ಗೆ 8:40ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರ ಪೈಕಿ ಓರ್ವ ಕಲಬುರ್ಗಿಯವರ ಮನೆಯ ಬಾಗಿಲು ತಟ್ಟಿದ್ದು, ಕಲಬುರ್ಗಿಯವರೇ ಬಾಗಿಲು ತೆರೆದಿದ್ದಾರೆ. ಈ ವೇಳೆ ದುಷ್ಕರ್ಮಿ ಏಕಾಏಕಿ ಪಿಸ್ತೂಲ್‌ನಿಂದ ಅತೀ ಸಮೀಪದಿಂದಲೇ ಅವರ ಎದೆ ಹಾಗೂ ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದಾನೆ.
ಗುಂಡಿನ ಮೊರೆತ ಕೇಳಿದ ಅವರ ಪತ್ನಿ ಉಮಾದೇವಿ ಬಂದು ನೋಡುವಷ್ಟರಲ್ಲಿ ಕಲಬುರ್ಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ 9:15ರ ಸುಮಾರಿಗೆ ಕೊನೆಯುಸಿರೆಳೆದರೆಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಕೊಲೆಗಾರರು ಕಲಬುರ್ಗಿಯವರನ್ನು ಯಾಕೆ ಕೊಂದಿದ್ದಾರೆ ಎನ್ನುವುದರ ಕುರಿತಂತೆ ಸ್ಪಷ್ಟ ನಿರ್ಧಾರಕ್ಕೆ ಬರಲು ಪೊಲೀಸ್ ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ. ಅವರ ವೈಚಾರಿಕ ಚಿಂತನೆಗಳು ಸಮಾಜದ ಕೆಲವು ದುಷ್ಟಶಕ್ತಿಗಳಿಗೆ ಅಸಹನೆಯನ್ನು ಉಂಟು ಮಾಡಿರಬಹುದು ಎನ್ನುವುದು ವ್ಯಾಪಕ ಅಭಿಪ್ರಾಯವಾಗಿದೆ. ಕಲಬುರ್ಗಿ ಅವರ ಕಗ್ಗೊಲೆ ಇಡೀ ಸಾರಸ್ವತ ಲೋಕವನ್ನೇ ಬೆಚ್ಚಿ ಬೀಳಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದ ಬರ್ಬರ ಹಲ್ಲೆ ಇದೆಂದು ವಿವಿಧ ಸಾಹಿತಿಗಳು, ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಕಲಬುರ್ಗಿಯವರು ಪತ್ನಿ ಉಮಾದೇವಿ, ಪುತ್ರಿ ರೂಪದರ್ಶಿ, ವಿದ್ಯಾರ್ಥಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಕನ್ನಡ ಸಾರಸ್ವತ ಲೋಕದ ಹಲವು ದಿಗ್ಗಜರು, ಸ್ವಾಮೀಜಿಗಳು ಕಲಬುರ್ಗಿಯವರ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

ಮತಾಂಧರಿಂದ ಕಲಬುರ್ಗಿ ಕೊಲೆ?
ಹಿರಿಯ ಸಾಹಿತಿ, ಖ್ಯಾತ ಸಂಶೋಧಕರು ಹಾಗೂ ವಿಶೇಷವಾಗಿ ವೈಚಾರಿಕ ಚಿಂತಕರಾಗಿದ್ದ ಪ್ರೊ.ಎಂ.ಎಂ.ಕಲಬುರ್ಗಿ ಅವರ ಕೊಲೆಯನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತೀವ್ರವಾಗಿ ಖಂಡಿಸಿದೆ.
ಇದೊಂದು ಅನಿರೀಕ್ಷಿತ ಹಾಗೂ ಆಘಾತಕಾರಿಯಾದ ಸುದ್ದಿಯಾಗಿದ್ದು, ತಕ್ಷಣ ತನಿಖಾ ತಂಡ ರಚಿಸಿ ಕೊಲೆ ಆರೋಪಿಗಳನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಮುಂದಾಗಬೇಕು ಎಂದು ಅದು ಆಗ್ರಹಿಸಿದೆ.
ಕಲಬುರ್ಗಿ ಅವರು ವಚನ ಚಳುವಳಿಯ ಜತೆಗೆ ಜನರಲ್ಲಿ ವೈಚಾರಿಕತೆ ಬೆಳೆಸಲು ಸಾಕಷ್ಟು ಶ್ರಮಿಸಿದ್ದಾರೆ. ನೇರ-ನಿಷ್ಠೂರವಾಗಿ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿದ್ದ ಅವರು ಅವೈಜ್ಞಾನಿಕ ಆಚರಣೆಗಳನ್ನು ನೇರವಾಗಿ ಖಂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮತಾಂಧರು ಈ ಕೃತ್ಯ ಎಸಗಿರಬಹುದೆಂದು ಸಮಿತಿಯು ಸಂಶಯ ವ್ಯಕ್ತಪಡಿಸಿದೆ.
ಕಲಬುರ್ಗಿಯವರ ಕೊಲೆಯ ಮೂಲಕ ವೈಚಾರಿಕ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸಮಿತಿ ರಾಜ್ಯಾಧ್ಯಕ್ಷರೂ ಆಗಿರುವ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ್, ಪವಾಡ ಭಂಜಕರು ಹಾಗೂ ಕಾರ್ಯಾಧ್ಯಕ್ಷ ಹುಲಿಕಲ್ ನಟರಾಜು, ಕಾರ್ಯದರ್ಶಿ ಈ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಅಂತ್ಯಸಂಸ್ಕಾರ: ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಅಂತ್ಯಸಂಸ್ಕಾರವನ್ನು ನಾಳೆ(ಆ.31) ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕಲಬುರ್ಗಿಯವರ ಮೃತದೇಹವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ ಇರಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹಸಚಿವ ಕೆ.ಜೆ.ಜಾರ್ಜ್, ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ.ಪಾಟೀಲ್, ಸಾಹಿತ್ಯ ಲೋಕದ ಹಲವು ದಿಗ್ಗಜರು ಮೃತರ ಅಂತಿಮ ದರ್ಶನ ಪಡೆದರು.

ಕಲಬುರ್ಗಿ ಪರಿಚಯ: 1938ರ ನವೆಂಬರ್ 28ರಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಬ್ಬೇವಾಡದಲ್ಲಿ ಮಡಿವಾಳಪ್ಪ ಹಾಗೂ ಗುರವ್ವ ದಂಪತಿಯ ಪುತ್ರರಾಗಿ ಜನಿಸಿದ್ದ ಡಾ.ಎಂ.ಎಂ.ಕಲಬುರ್ಗಿ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಂಶೋಧನ ಕ್ಷೇತ್ರದಲ್ಲಿ ತನ್ನದೇ ಆದ ಛಾಫು ಮೂಡಿಸಿದ್ದಾರೆ.
ಇತಿಹಾಸ, ಶಾಸನ, ಜಾನಪದ, ವ್ಯಾಕರಣ, ಹಸ್ತಪ್ರತಿ ಶಾಸ್ತ್ರ, ಗ್ರಂಥ ಸಂಪಾದನಾ ಶಾಸ್ತ್ರ, ಛಂದಸ್ಸು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಳವಾದ ಸಂಶೋಧನೆ ನಡೆಸಿರುವ ಕಲಬುರ್ಗಿ ಅವರು, ಸಾಹಿತ್ಯದ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದರು.
1960ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಬಿಎ, 1962ರಲ್ಲಿ ಎಂ.ಎ. ಪದವಿ ಪ್ರಥಮ ಪಡೆದಿದ್ದು, 1968ರಲ್ಲಿ ಅವರು ಸಲ್ಲಿಸಿದ್ದ ಕವಿರಾಜ ಮಾರ್ಗ, ಪರಿಸರದ ಕನ್ನಡ ಸಾಹಿತ್ಯ ಎಂಬ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
1962ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಕಲಬುರ್ಗಿ, 1966ರಲ್ಲಿ ಕರ್ನಾಟಕ ವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾಗಿ ನೇಮಕಗೊಂಡು, ಶೈಕ್ಷಣಿಕ ಮತ್ತು ಆಡಳಿತ ಹುದ್ದೆಗಳನ್ನು ನಿರ್ವಹಿಸಿದರು.
ಸುಮಾರು 19 ವರ್ಷಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಲಬುರ್ಗಿ, 39 ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ ಸೇವೆ ಸಲ್ಲಿದ್ದಾರೆ. ಈ ಅವಧಿಯಲ್ಲಿ ಅನೇಕ ಸಂಶೋಧನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಎಂಬುದು ಗಮನಾರ್ಹ.
1998ರಿಂದ 2001ರ ಕಾಲಾವಧಿಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದ ಡಾ.ಕಲಬುರ್ಗಿ, ವಿಶ್ವ ವಿದ್ಯಾಲಯದಲ್ಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿ ನಿವೃತ್ತಿ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿದ್ದು ಅವರ ಸಂಶೋಧನಾ ಆಸಕ್ತಿಯ ಸಂಕೇತವಾಗಿತ್ತು.
15 ಸಂಪುಟಗಳ ವಚನ ಸಾಹಿತ್ಯ ಸಂಪುಟ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ಸಮಗ್ರ ಕೀರ್ತನಾ ಸಂಪುಟಗಳ ಸಂಪಾದಕ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶಿಕ್ಷಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಪ್ರಖರ ವಿಚಾರವಾದಿ, ವೈಚಾರಿಕ ಚಿಂತಕ, ಇತಿಹಾಸ, ಜಾನಪದ ಹಾಗೂ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಕಲಬುರ್ಗಿ ಅತ್ಯಂತ ಸರಳ ವ್ಯಕ್ತಿತ್ವದ ವಿನಯಶೀಲ, ಕನ್ನಡದ ಕ್ರಿಯಾಶೀಲ ಚೇತನ ಎಂದರೆ ಉತ್ಪ್ರೇಕ್ಷೆಯಲ್ಲ.
2011, ನವೆಂಬರ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆದ ಆಳ್ವಾಸ್ ‘ನುಡಿಸಿರಿ’ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಲಬುರ್ಗಿಯವರಿಗೆ ಜಾನಪದ ಅಕಾಡಮಿ, ರಾಜ್ಯೋತ್ಸವ, ಪಂಪ, ವರ್ಧಮಾನ, ವಿಶ್ವ ಮಾನವ, ಕೇಂದ್ರ ಸಾಹಿತ್ಯ ಅಕಾಡಮಿ, ಚಿದಾನಂದ, ನೃಪತುಂಗ ಸೇರಿ ಹಲವು ಪ್ರಶಸ್ತಿಗಳು ಸಂದಿವೆ.

‘ಅಂಬಲಿ-ಕಂಬಳಿ ನಮ್ಮ ಆಸ್ತಿ. ಉಳಿದದ್ದೆಲ್ಲ ಜಾಸ್ತಿ’ ಎಂದು ಸದಾ ನಮಗೆಲ್ಲ ತಿಳಿ ಹೇಳುತ್ತಿದ್ದ ತಂದೆಯವರಿಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿರಲಿಲ್ಲ.
ರೂಪದರ್ಶಿ, ಡಾ.ಎಂ.ಎಂ.ಕಲಬುರ್ಗಿಯವರ ಪುತ್ರಿ

ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ
………………………..
ಹಿಮದಂತೆ ಹೆಪ್ಪುಗಟ್ಟದೆ
ಇಳಿಯುತ್ತೇನೆ, ದುರ್ಜನರ ಎದೆಯಲ್ಲಿ
ದೊಡ್ಡ ದಾಳಿಯಾಗಿ,
ಸುಳಿಯುತ್ತೇನೆ ಸಜ್ಜನರ ಪ್ರಾಣದಲಿ
ಪ್ರಾಣವಾಯುವಾಗಿ
(ಡಾ. ಎಂ. ಎಂ. ಕಲಬುರ್ಗಿ ಅವರ ಕವಿತೆಯೊಂದರ ಸಾಲು )

ದೇಶಕ್ಕೆ ಕಪ್ಪುಚುಕ್ಕೆ
ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವದ ಹಿರಿಯ ಸಾಹಿತಿ, ಸಂಶೋಧಕ, ನೇರ ನಡೆನುಡಿಯ ಡಾ.ಎಂ.ಎಂ. ಕಲಬುರ್ಗಿಯವರ ಹತ್ಯೆ ಆಘಾತವನ್ನುಂಟು ಮಾಡಿದೆ. ಇದು ದೇಶಕ್ಕೆ ಕಪ್ಪುಚುಕ್ಕೆ. ಇದೊಂದು ಅಪಾಯಕಾರಿ ಬೆಳವಣಿಗೆ. ಕಲಬುರ್ಗಿ ಒಳಗೊಂದು ಹೊರಗೊಂದು ವ್ಯಕಿತ್ವದವರಲ್ಲ. ನೇರ ನಡೆನುಡಿಯ ಪ್ರಾಮಾಣಿಕ, ಸದಾ ಕ್ರಿಯಾಶೀಲತೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು.
ಡಾ.ಬಿ.ಎ.ವಿವೇಕ ರೈ, ಹಂಪಿ ವಿವಿ ವಿಶ್ರಾಂತ ಕುಲಪತಿಗಳು

ಪ್ರಾಮಾಣಿಕ ಸಂಶೋಧಕ
ಎಂ.ಎಂ. ಕಲಬುರ್ಗಿ ಎಂದರೆ ನಮಗೆ ಮೊತ್ತಮೊದಲು ನೆನಪಾಗುವುದೇ ‘ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ’. ಅದು ಅವರ ಪಿಎಚ್‌ಡಿ ಮಹಾಪ್ರಬಂಧವೂ ಹೌದು. ಜೊತೆಗೆ ಕನ್ನಡದ ವೌಲಿಕವಾದ ಸಂಶೋಧನಾ ಕೃತಿಯೂ ಹೌದು. ಅವರ ಗ್ರಂಥ ಸಂಪಾದನೆ ಇರಬಹುದು, ಪ್ರಾಚೀನ ಕವಿಗಳ ಕಾಲ, ದೇಶಗಳ, ಮಧ್ಯಕಾಲೀನ ಕನ್ನಡದ ಅನೇಕ ಸಂಪ್ರದಾಯ ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಇರಬಹುದು, ಅವರು ಬಹಳ ವೌಲಿಕ ವಿಚಾರಗಳನ್ನು ದಾಖಲಿಸಿದ್ದಾರೆ. ಅವರ ಮೂಲಗುಣವೇ ನಿರ್ಭೀತವಾದ, ದಾಕ್ಷಿಣ್ಯರಹಿತವಾದ ಅಭಿಪ್ರಾಯ.  ತಾಳ್ತಜೆ ವಸಂತ ಕುಮಾರ್, ಹಿರಿಯ ವಿದ್ವಾಂಸರು
ಮುಂಬಯಿ ವಿವಿ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥರು

ಆಘಾತಕಾರಿ ಘಟನೆ
ವಚನ ಸಾಹಿತ್ಯದ ಕಸುವನ್ನು ಕನ್ನಡಿಗರಿಗೆ ಒದಗಿಸಿದ ಕಲಬುರ್ಗಿಯವರ ಕೊಲೆ- ಹೀನ ವ್ಯಕ್ತಿಗಳಿಂದ ಹೀನಾಯ ಕೊಲೆ. ಬೆಳ್ಳಂಬೆಳಗ್ಗೆ ಹಾಸಿಗೆಯಿಂದೆದ್ದವನೇ ಸಭೆಗಳಲ್ಲಿದ್ದೆ. ಒಂದು ಸಭೆ ಮುಗಿದು ಮತ್ತೊಂದಕ್ಕೆ ಹೋಗುವುದರ ನಡುವೆ ಜನವಾದಿ ಸಂಘಟನೆಯ ವಿಮಲಾರ ಕರೆ. ಬಹಳ ಆಘಾತಕರ ಸುದ್ದಿ. ಒಂದು ಕ್ಷಣ ಮರಗಟ್ಟಿ ಹೋದೆ.ಮೊತ್ತಮೊದಲ ಬಾರಿಗೆ ಕನ್ನಡ ಸಾಂಸ್ಕೃತಿಕ ಪ್ರಪಂಚದಲ್ಲಿ ಇಂತಹ ಕ್ರೌರ್ಯ. ಇದು ಕನ್ನಡ ಸಾಮಾಜಿಕ ಜೀವನವನ್ನೇ ತಲ್ಲಣಗೊಳಿಸುವ ಘಟನೆ.
ಜಿ.ಎನ್. ನಾಗರಾಜ್, ಹಿರಿಯ ಚಿಂತಕರು, ಹೋರಾಟಗಾರರು

ಸಾರಸ್ವತ ಲೋಕಕ್ಕೆ ಬೆದರಿಕೆ
ಲಿಂಗಾಯತರು ಹಿಂದೂಗಳಲ್ಲ, ಒಂದೇ ಜಾತಿಯವರಲ್ಲ, ಲಿಂಗಾಯತರೇ ಬೇರೆ.. ವೀರಶೈವರೇ ಬೇರೆ ಎಂಬುದರ ಬಗ್ಗೆ ಖಚಿತವಾಗಿ ಹೇಳುತ್ತಿದ್ದರು. ವಿವಾದವುಂಟಾಗಿತ್ತು. ಭಿನ್ನಾಭಿಪ್ರಾಯಗಳಿದ್ದವು. ಆದರೆ, ಅವು ಸಂಸ್ಕೃತಿ, ಸಾಂಸ್ಕೃತಿಕ ಜಗತ್ತಿಗೆ ಸಂಬಂಧಿಸಿದ್ದವು. ಹೇಳಬೇಕಾದ್ದನ್ನು ನಿಷ್ಠುರವಾಗಿ, ನಿರ್ಭೀತಿಯಿಂದ ಹೇಳುತ್ತಿದ್ದರು. ಹಾಗೆ ನಿಷ್ಠುರವಾಗಿ ಮಾತನಾಡುವವರಿಗೆ ಎಚ್ಚರಿಕೆ ಕೊಡುವಂತಿದೆ ಈ ಕೊಲೆ.
ಪ್ರೊ. ಕೆ.ಎಂ. ಮರುಳಸಿದ್ದಪ್ಪ, ಚಿಂತಕರು

ವೈಚಾರಿಕತೆಗೆ ಗುಂಡು
ಹಾಗೆ ನೋಡಿದರೆ ಕಟುವಾಗಿ ಸತ್ಯವನ್ನು ಹೇಳುವ ದೊಡ್ಡ ಪರಂಪರೆಯೇ ಇದೆ ಕರ್ನಾಟಕಕ್ಕೆ. ಕಲಬುರ್ಗಿಯವರು ಅದರ ಮುಂದುವರಿದ ಭಾಗವಾಗಿದ್ದರು. ಅಂತಹ ಸತ್ಯಕ್ಕೆ, ವೈಚಾರಿಕತೆಗೆ ಗುಂಡಿಟ್ಟಿದ್ದು ಕರ್ನಾಟಕದ ದುರಂತ ಎಂದೇ ಭಾವಿಸುತ್ತೇನೆ. ಕರ್ನಾಟಕದಲ್ಲಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲಿಯೇ ಒಂದು ರೀತಿ ವಿಚಾರವಾದಿ ಚಿಂತನೆಗಳ ಮೇಲೆ ಹಲ್ಲೆ ನಡೀತಿದೆ. ಅಸಹನೆಯ ಸಂಸ್ಕೃತಿ ಹೆಚ್ಚಾಗುತ್ತಿದೆ. ಈ ಅಸಹನೆ ಎಲ್ಲ ಧರ್ಮಗಳಲ್ಲೂ ಬೆಳೀತಿದೆ. ಇದು ಅಪಾಯಕಾರಿ.
ಪ್ರೊ.ರಹಮತ್ ತರೀಕೆರೆ, ಸಂಸ್ಕೃತಿ ಚಿಂತಕರು

Write A Comment