ಕರ್ನಾಟಕ

50 ವರ್ಷಕ್ಕೆ ಭಾರತ ತಲೆಕೆಟ್ಟವರ ದೇಶವಾಗುತ್ತೆ!: ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ

Pinterest LinkedIn Tumblr

'Bannanjeಬೆಂಗಳೂರು: “ಇನ್ನು 50 ವರ್ಷ ಕಳೆದರೆ ಅಮೆರಿಕ ಆಸ್ತಿಕ ದೇಶವಾಗುತ್ತದೆ, ಭಾರತ ತಲೆಕೆಟ್ಟವರ ದೇಶವಾಗುತ್ತದೆ’ ಎಂದು ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಹೇಳಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ದಯಾನಂದಸಾಗರ ಕಾಲೇಜು ಸಭಾಂಗಣದಲ್ಲಿ ನಡೆಸುತ್ತಿರುವ “ಬನ್ನಂಜೆ 80ರ ಸಂಭ್ರಮ’ ಸಮಾರಂಭದ ಮೂರನೇ ದಿನವಾದ ಶುಕ್ರವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿದೇಶಗಳಲ್ಲಿ ಮಾಂಸ ಸೇವನೆ, ಮದ್ಯಸೇವನೆ ಪ್ರಮಾಣ ಕಡಿಮೆಯಾಗುತ್ತಿದೆ. ಸಂಸ್ಕೃತದ ಅಧ್ಯಯನ ಹಾಗೂ ಭಾರತೀಯ ಸಂಸ್ಕೃತಿಯ ಅನುಕರಣೆ ಹೆಚ್ಚುತ್ತಿದೆ. ಅಮೆರಿಕದಲ್ಲಿ 30ಕ್ಕೂ ಹೆಚ್ಚು ಸಂಸ್ಕೃತ ಕಲಿಕಾ ಕೇಂದ್ರಗಳಲ್ಲಿ ಅಲ್ಲಿನ ಮಕ್ಕಳಿಗೆ ಸಂಸ್ಕೃತ ಕಲಿಸಲಾಗುತ್ತಿದೆ. ಆದರೆ, ಭಾರತೀಯರೇ ಇವುಗಳ ಬಗ್ಗೆ ನಿರ್ಲಕ್ಷ್ಯ ತಾಳಿದ್ದು, ದೇಶ,ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ.

ಕಲಿಯಬೇಕಾದ್ದನ್ನು ಮರೆತು ಕಲಿಯ ಬಾರದ್ದನ್ನು ಕಲಿಯುತ್ತಿದ್ದಾರೆ ಎಂದರು.

ಮೌನ ದೊಡ್ಡ ಭಾಷೆ: ಮಾತಿಗಿಂತ ಮೌನ ದೊಡ್ಡ ಭಾಷೆ, 100 ಮಾತುಗಳ ಅರ್ಥವನ್ನು ಒಂದು ಮೌನದ ಸೆಲೆ ನೀಡುತ್ತದೆ. ಆದರೆ, ಸಭೆ, ಸಮಾರಂಭಗಳ ಮೂಲಕ ನಿತ್ಯವೂ ಮೌನದ ಕೊಲೆಯಾಗುತ್ತಿದೆ. ವಾಲ್ಮೀಕಿ ರಾಮಾಯಣ ಕಾವ್ಯದ ಸಾಲುಗಳನ್ನು ಓದುವುದಕ್ಕಿಂತ ಆ ಸಾಲುಗಳ ನಡುವಿನ ಖಾಲಿ ಜಾಗವನ್ನು ಓದಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಶತಾಯುಷಿ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಮಾತನಾಡಿ, ಬನ್ನಂಜೆಯವರು ಕ್ಲಿಷ್ಟ ಸಾಹಿತ್ಯವನ್ನು ಸರಳ ಕನ್ನಡಕ್ಕೆ ಇಳಿಸಿ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದವರು. ಅವರ ಈ ಕಾರ್ಯ ಶ್ಲಾಘನೀಯವಾದುದು ಎಂದರು.

ಬನ್ನಂಜೆ, ಮುಕ್ತ ಮನಸ್ಸು: ನೆದರ್‌ಲ್ಯಾಂಡ್‌ ವಿದ್ವಾಂಸ ಡಾ.ರಾಬರ್ಟ್‌ ಜೈದಂಬರ್‌, ಕೆನಡಾದಲ್ಲಿ ಹುಟ್ಟಿ, ನೆದರ್‌ಲ್ಯಾಂಡ್‌ನ‌ಲ್ಲಿ ವಿದ್ಯಾಭ್ಯಾಸ ಮಾಡಿ, ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ನನ್ನಂತಹವರ ಮೇಲೂ ಅವರ ಪ್ರಭಾವ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ, ನಟಿ ಭಾರತಿ ವಿಷ್ಣುವರ್ಧನ್‌, ಅಮೆರಿಕದ ವಿವಿಗಳ ಪ್ರಾಧ್ಯಾಪಕರಾದ ಡಾ.ಪಿ.ಆರ್‌.ಮುಕುಂದ್‌, ಕೇಶವರಾವ್‌ ಪಾಡಿಪತ್ರಿ ಮತ್ತಿತರರಿದ್ದರು.

ಬನ್ನಂಜೆ ಟೀಕಿಸುವವರ ಪ್ರಭಾವವೇನು?
ದೇಶ, ವಿದೇಶಗಳಲ್ಲಿ ಪ್ರಭಾವ ಬೀರಿರುವ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರನ್ನು ಟೀಕಿಸುತ್ತಿರುವವರು ಏನು ಪ್ರಭಾವ ಬೀರಿದವರಾಗಿದ್ದಾರೆ ಎಂದು ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಶ್ನಿಸಿದರು. ಹಾಸ್ಯ ಪ್ರಜ್ಞೆಯ ವೇದಾಂತಿ, ಸಾಹಿತಿ, ಕವಿ ಮೂರನ್ನೂ ಒಂದೇ ಕಡೆ ಕಾಣಬಹುದಾದರೆ ಅದು ಬನ್ನಂಜೆ ಗೋವಿಂದಾಚಾರ್ಯರಲ್ಲಿ ಮಾತ್ರ ಎಂದರು. ಮೇಲುಕೋಟೆಯ ಯತಿರಾಜ ಮಠದ ಯತಿರಾಜ ಜೀಯರ್‌ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂಬ ಪ್ರಸ್ತಾಪಗಳು ಕೇಳಿಬರುತ್ತಿವೆ.

ಆದರೆ,ಬನ್ನಂಜೆ ಅವರೇ ಒಂದು ಜ್ಞಾನಪೀಠ. ಹಾಗಾಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬೇಕಾಗಿಲ್ಲ ಎಂದರು.
-ಉದಯವಾಣಿ

Write A Comment