ಮನೋರಂಜನೆ

ನಿಖಿಲ್‌ ಮನೋಜ್ ಲಿಂಗಯ್ಯ ನಿರ್ದೇಶನದ ‘ಹಜ್‌’: 7ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ವಿಭಾಗ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಶಸ್ತಿ

Pinterest LinkedIn Tumblr

hujjjjjjjkg-hgd

ನಿಖಿಲ್‌ ಮನೋಜ್ ಲಿಂಗಯ್ಯ ನಿರ್ದೇಶನದ ‘ಹಜ್‌’ ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ವಿಭಾಗ ಸ್ಪರ್ಧೆಯಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಪಾತ್ರವಾದ ಸಿನಿಮಾ. ಮಾನವೀಯ ಆಶಯಗಳಿಗೆ ತುಡಿಯುವ ಈ ಸಿನಿಮಾ ಗಮನಸೆಳೆಯುವುದು ತನ್ನ ಸರಳತೆಯಿಂದಾಗಿ. ಮನುಷ್ಯನ ಬದುಕಿನಲ್ಲಿ ಧರ್ಮಗಳು ಪ್ರಭಾವ ಬೀರಿ ಸಂಬಂಧಗಳನ್ನು ಶಿಥಿಲಗೊಳಿಸುತ್ತಿರುವ ಈ ಹೊತ್ತಿನಲ್ಲಿ ‘ಹಜ್‌’ ಮಾನವೀಯ ಯಾತ್ರೆಯಾಗಿ ಕಣ್ಣ ಮುಂದೆ ನಿಲ್ಲುತ್ತದೆ. ಕಡಿಮೆ ಪಾತ್ರಗಳಲ್ಲಿ ಅರ್ಥಪೂರ್ಣ ಚಿತ್ರ ಹೆಣೆದಿರುವುದು ಇಲ್ಲಿನ ಹೆಚ್ಚುಗಾರಿಕೆ. ಅಂದಹಾಗೆ, ಪಾಕಿಸ್ತಾನ ಮತ್ತು ಕೋಲ್ಕತ್ತ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲು ‘ಹಜ್‌’ ಆಯ್ಕೆಯಾಗಿದೆ.

‘ಹಜ್‌’ನ ಶೂಟಿಂಗ್‌ ನಡೆದಿರುವುದು ಕುಂದಾಪುರ ಮತ್ತು ಮರವಂತೆಯ ಪರಿಸರದಲ್ಲಿ. ನಿರ್ದೇಶನದ ಜೊತೆಗೆ, ಚಿತ್ರದ ನಾಯಕ ಅಲ್ತಾಫ್ ಪಾತ್ರದಲ್ಲಿ ನಿಖಿಲ್ ಬಣ್ಣ ಹಚ್ಚಿದ್ದಾರೆ. ಮಾನಸ ಜೋಷಿ, ಗೀತಾ, ರಾಜೀವ್ ಕೊಟ್ಟಾರಿ ತಾರಾಗಣದಲ್ಲಿರುವ ಇತರರು.
‘ಕಾಣೆಯಾಗುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಚಿತ್ರ ಮಾತನಾಡುತ್ತದೆ. ದೇವಸ್ಥಾನ – ದೇವರ ಪರಿಕಲ್ಪನೆ ಬದಲಾಗಿದೆ.

ಗುಡಿಗೋಪುರಗಳಿಂದ ಹೊರತಾಗಿ ದೇವರು ಮೆಚ್ಚುವ ಕೆಲಸ ಎಂದರೆ ಮತ್ತೊಬ್ಬರಿಗೆ ನೆರವಾಗುವುದು. ಈ ಎಳೆ ಆಧರಿಸಿ ‘ಹಜ್‌’ ಚಿತ್ರ ಮಾಡಿದ್ದೇನೆ’ ಎನ್ನುತ್ತಾರೆ ನಿಖಿಲ್. ಕರಾವಳಿ ಭಾಗದಲ್ಲಿ ಕೋಮುವಾದ, ಮತೀಯವಾದ ಮತ್ತು ನೈತಿಕ ಪೊಲೀಸ್ ಅಲೆಗಳು ಬೊಬ್ಬಿರಿಯುವ ಈ ಹೊತ್ತಿನಲ್ಲಿ ‘ಹಜ್‌’ ಬದುಕಿಗೆ ಹೊಸ ದೃಷ್ಟಿಯಂತೆ ಕಾಣಿಸುತ್ತದೆ. ಈ ರಾಜಕೀಯಕ್ಕೆ ಬಳಕೆಯಾಗುತ್ತಿರುವ ಇಸಂಗಳಿಂದ ದೂರನಿಂತು ಆಲೋಚಿಸಿದ್ದರ ಪರಿಣಾಮ ಈ ಚಿತ್ರ ಎನ್ನುವ ಮಾತು ನಿರ್ದೇಶಕರದ್ದು.

‘ಕೋಮುವಾದ, ಮತೀಯವಾದ ಇತ್ಯಾದಿ ವಿಚಾರಗಳಿಗಿಂತ ನನಗೆ ಮುಖ್ಯವಾಗಿ ಕಂಡಿದ್ದು ಮಾನವೀಯ ಆಶಯಗಳು. ಧರ್ಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಸರಿ–ತಪ್ಪುಗಳ ಸಮರ್ಥನೆ ಇದೆ. ನಾನು ಈ ವಿಚಾರವಾಗಿ ಮಾತನಾಡುವುದಿಲ್ಲ. ಮಾನವೀಯ ಅಂಶಗಳು ಹೇಗೆ ಪ್ರಸ್ತುತವಾಗುತ್ತವೆ ಎನ್ನುವುದನ್ನು ಹೇಳಲು ಪ್ರಯತ್ನಿಸಿದ್ದೇನೆ. ಸಿನಿಮಾ ಮಾಡಲು ಕುಂದಾಪುರಕ್ಕೆ ಹೋದೆ. ಅದಾಗಲೇ ಆ  ಅಲ್ಲಿ ನಾನು ಚಿತ್ರಗಳನ್ನು ಮಾಡಿದ್ದರಿಂದ ಪರಿಚಿತ ಗೆಳೆಯರು ಇದ್ದರು. ಮೊದಲು ಯಾಕುಬ್‌ ಗುಲ್ವಾಡಿ ಅವರನ್ನು ಭೇಟಿ ಮಾಡಿದೆ. ‘ಬನ್ನಿ ಎಲ್ಲವನ್ನೂ ಶೇರ್ ಮಾಡಿಕೊಳ್ಳೋಣ’ ಎಂದರು. ನಂತರ ಉಸ್ಮಾನ್ ಅವರನ್ನು ಭೇಟಿ ಮಾಡಿದೆ. ಅವರು ಸೂಕ್ಷ್ಮವಿಚಾರಗಳನ್ನು ತಿಳಿಸಿದರು.

‘ಖಚಿತವಾಗಿ ಸಿನಿಮಾ ಬಂದಿದೆ’ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಈ ಇಬ್ಬರು ಗೆಳೆಯರು. ಚಿತ್ರೀಕರಣದಲ್ಲಿ ತೊಡಗಿರುವಾಗ ಧರ್ಮ ಕಾಣಲಿಲ್ಲ, ಕಾಣಿಸಿದ್ದೆಲ್ಲವೂ ಮಾನವೀಯ ಮುಖಗಳು. ಆ ಸಂದರ್ಭದಲ್ಲಿಯೇ ನನ್ನ ಚಿತ್ರಕ್ಕೆ ಸಲ್ಲಬೇಕಾದ ಎಲ್ಲ ಪ್ರಶಸ್ತಿಗಳು ಸಿಕ್ಕಿದವು’ ಎಂದು ‘ಹಜ್‌’ ರೂಪುಗೊಂಡ ದಾರಿಯನ್ನು ನಿಖಿಲ್‌ ನೆನಪಿಸಿಕೊಳ್ಳುತ್ತಾರೆ.

‘ಪರ್ಯಾಯ’ ಹಣೆಪಟ್ಟಿಯ ಸಿನಿಮಾಗಳನ್ನು ಜನರಿಗೆ ತಲುಪಿಸುವ ಸವಾಲು ಮತ್ತು ಸಾಧ್ಯತೆಗಳ ಅರಿವು ನಿಖಿಲ್ ಅವರಿಗೆ ಇದೆ. ‘ನಮ್ಮ ಚಿತ್ರಗಳ ಬಜೆಟ್ ಕಡಿಮೆ. ಸರ್ಕಾರದ ಸಬ್ಸಿಡಿ ಮತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿಕ್ಕುವ ನೆರವು ಮತ್ತು ಬೆಂಬಲ ನನ್ನಂಥ ನಿರ್ದೇಶಕರಿಗೆ ಅನುಕೂಲವಾಗುತ್ತದೆ. ಸಿನಿಮೋತ್ಸವಗಳಲ್ಲಿನ ಪ್ರದರ್ಶನ ನೈತಿಕ ಸ್ಫೂರ್ತಿ ತುಂಬುತ್ತದೆ. ಪರ್ಯಾಯ ಸಿನಿಮಾಗಳಿಗೆ ಒಂದು ಸಣ್ಣ ವೇದಿಕೆ ಇದೆ.

ಬೆಂಗಳೂರು ಸಿನಿಮೋತ್ಸವವನ್ನು ನೋಡುವುದಾದರೆ ಭವಿಷ್ಯದಲ್ಲಿ ಆಶಾದಾಯ ಬೆಳವಣಿಗೆಗಳು ಕಾಣ ಸಿಗುತ್ತವೆ. ನಾನು ಮತ್ತಷ್ಟು ಹೊಸ ಪ್ರಯತ್ನಗಳಲ್ಲಿ ತೊಡಗುವೆ. ಫೆಬ್ರುವರಿ ಇಲ್ಲವೆ ಮಾರ್ಚ್‌ನಲ್ಲಿ ‘ಹಜ್‌’ ಅನ್ನು ಬೆಂಗಳೂರು ಮತ್ತು ಕರಾವಳಿಯ ಒಂದು ಚಿತ್ರಮಂದಿರಲ್ಲಿ ತೆರೆಗೆ ತರುವ ಉದ್ದೇಶವಿದೆ. ಪ್ರದರ್ಶನದ ಕುರಿತು ವಿವಿಧ ಸಂಘ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದು, ಹೆಚ್ಚು ಜನರಿಗೆ ಸಿನಿಮಾ ತಲುಪಿಸುವ ಪ್ರಯತ್ನ ನಡೆದಿದೆ. ಪರ್ಯಾಯ ಸಿನಿಮಾ ಮಾರುಕಟ್ಟೆ ಭವಿಷ್ಯದಲ್ಲಿ ಆಶಾದಾಯಕವಾಗಿ ಕಾಣಿಸುತ್ತಿದೆ’ ಎಂದು ನಿಖಿಲ್‌ ಹೇಳುತ್ತಾರೆ.

ಸದಭಿರುಚಿಯ ಬೆನ್ನೇರಿ…
ನಟನಾಗುವ ಆಸೆಯಿಂದ ಸಿನಿಮಾರಂಗಕ್ಕೆ ಬಂದ ನಿಖಿಲ್‌ಮನೋಜ್ ಲಿಂಗಯ್ಯ ಸದಭಿರುಚಿಯ ಚಿತ್ರ ನಿರ್ದೇಶನದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡವರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ‘ಊರ್ವಶಿ’ ಅವರು ಬಣ್ಣ ಹಚ್ಚಿದ ಮೊದಲ ಚಿತ್ರ. ಆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಮನ್ನಣೆ ಸಿಕ್ಕಿತ್ತು. ಆ ನಂತರ ‘ಚೈತ್ರದ ಚಿಗುರು’ವಿನಲ್ಲಿ ನಟಿಸಿದರು. ಈ ನಡುವೆ ಕಿರುತೆರೆಯಲ್ಲೂ ಕೆಲಕಾಲ ತೊಡಗಿಸಿಕೊಂಡರು. 2002ರಲ್ಲಿ ಕಿರುತೆರೆಯಲ್ಲಿ ‘ಸವಿಗಾನ’ ಧಾರಾವಾಹಿ ನಿರ್ದೇಶಿಸಿದರು. 2005ರಲ್ಲಿ ‘ದೇಸಿ’ ಸಿನಿಮಾ ನಿರ್ದೇಶಿಸುವ ಮೂಲಕ ಬೆಳ್ಳಿತೆರೆಯಲ್ಲಿ ಪರ್ಯಾಯ ಸಿನಿಮಾ ಆಲೋಚನೆಯ ಪ್ರಸಾರಕರಾಗಿ ಗುರ್ತಿಸಿಕೊಂಡರು ನಿಖಿಲ್‌.

ಅನನ್ಯ ಕಾಸರವಳ್ಳಿ ನಟಿಸಿರುವ ‘ದೇಸಿ’ ಚಿತ್ರ ಮುಂಬೈ ಮತ್ತು ಕೇರಳ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಆನಂತರ ತಾರಾ ಮತ್ತು ಬಿ. ಜಯಶ್ರೀ ನಟನೆಯ ‘ಪ್ರಶ್ನೆ’ ಚಿತ್ರವನ್ನು ನಿರ್ದೇಶಿಸಿದರು. ನಿಖಿಲ್‌ ಅವರಿಗೆ ಹೆಚ್ಚು ಮನ್ನಣೆ ತಂದುಕೊಟ್ಟಿದ್ದು ‘ಒಂದೂರಲ್ಲಿ’ ಮಕ್ಕಳ ಚಿತ್ರ. 2010–11ರಲ್ಲಿ ತೆರೆಗೆ ಬಂದ ಈ ಚಿತ್ರ ಐದು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ‘ಒಂದೂರಲ್ಲಿ’ಗೆ ಚಿತ್ರಕಥೆ ಮತ್ತು ಸಾಹಿತ್ಯ ಬರೆದಿದ್ದಾರೆ. ನಿಖಿಲ್‌ ಅವರ ‘ಭಾವನೆಗಳ ಬೆನ್ನೇರಿ’ ಚಿತ್ರ ಪಾಕಿಸ್ತಾನ ಮತ್ತು ಕೋಲ್ಕತ್ತ ಮಕ್ಕಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಸದ್ಯ ‘ಲಾಸ್ಟ್‌ಪೇಜ್’ ಎನ್ನುವ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದು ಪೋಸ್ಟ್‌ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ.

Write A Comment