ಮನೋರಂಜನೆ

‘ಮೆಲೋಡಿ’ ಚಿತ್ರಕ್ಕೆ ಅಂತರ್ಜಾಲ ಪ್ರೇಮಕಥೆಗಳೇ ಎಳೆ

Pinterest LinkedIn Tumblr

pvec180415Melody

– ಡಿ.ಎಂ. ಕುರ್ಕೆ ಪ್ರಶಾಂತ

ಚಿತ್ರ : ಮೆಲೋಡಿ
ನಿರ್ಮಾಪಕ:   ಎಸ್. ಕೃಷ್ಣಮೂರ್ತಿ
ನಿರ್ದೇಶಕ: ನಂಜುಂಡ ಕೃಷ್ಣ
ತಾರಾಗಣ: ರಾಜೇಶ್ ಕೃಷ್ಣನ್, ಚೇತನ್ ಗಂಧರ್ವ, ಕಾರ್ತಿಕಾ ಮೆನನ್, ಅಕ್ಷತಾ ಮಾರ್ಲಾ, ರಾಮಕೃಷ್ಣ, ಮಂಡ್ಯ ರಮೇಶ್, ಮತ್ತಿತರರು

ನಿರ್ದೇಶಕ ನಂಜುಂಡ ಕೃಷ್ಣ ಅವರ ‘ಮೆಲೋಡಿ’ ಚಿತ್ರಕ್ಕೆ ಅಂತರ್ಜಾಲ ಪ್ರೇಮಕಥೆಗಳೇ ಎಳೆ. ಆದರೆ, ಈ ‘ಮೆಲೋಡಿ’ ಸಿನಿಮಾಕ್ಕೂ ಮಿಗಿಲಾಗಿ ಮೆಗಾ ಧಾರಾವಾಹಿಯನ್ನು ಹೆಚ್ಚು ಹೋಲುತ್ತದೆ. ಹಿತ ಮತ್ತು ಮುದ ಎನ್ನುವುದು ‘ಮೆಲೋಡಿ’ಯ ಶೀರ್ಷಿಕೆ ಯಲ್ಲಷ್ಟೇ ಇದೆ. ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಮತ್ತು ಅವುಗಳಲ್ಲಿ ರೂಪುಗೊಳ್ಳುವ ಪ್ರೇಮ ಕಥೆಗಳ ಸುತ್ತುವ ಸಿನಿಮಾಗಳು ಹೆಚ್ಚು ತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪ ಡೆ ಯಾಗಿಯೂ ‘ಮೆಲೋಡಿ’ ಕಾಣಿಸುತ್ತದೆ.

ಚಿತ್ರದ ನಾಯಕ ಕಿರಣ್ ‘ಫೇಸ್‌ ಬುಕ್‌’ನಲ್ಲಿ ನಕಲಿ ಖಾತೆ ಸೃಷ್ಟಿಸಿ, ಅನುಷ್ಕಾ ಎನ್ನುವ ಹುಡುಗಿಯನ್ನು ಪ್ರೀತಿಸುತ್ತಾನೆ. ಧೈರ್ಯವಂತನಲ್ಲದ ಈ ಹೃದಯವಂತ ಹುಡುಗನಿಗೆ ಸಾಥ್ ನೀಡುವುದು ಗೆಳೆಯ ಮಧು. ಮಧುವಿನ ಮಾತುಗಾರಿಕೆಗೆ ಅನುಷ್ಕಾ ಫಿದಾ! ಅನುಷ್ಕಾ ಮತ್ತು ಕಿರಣ್ ಮದುವೆ ಯಾಗುವರು. ಈ ನಡುವೆಯೇ ಮಧು ಮತ್ತು ಬೆನ್ನಿಯ ಪ್ರೇಮಕಥೆಯೂ ಇದೆ. ‘ಫೇಸ್‌ಬುಕ್‌ ಫೇಕ್’ ತಿಳಿದಾಗ ಗಂಡ–ಹೆಂಡತಿ ಬದುಕಿನ ಪಲ್ಲಟಗಳೇನು ಎನ್ನುವುದೇ ಸಿನಿಮಾದ ಮುಖ್ಯಾಂಶ. ಮಧು ಗೆಳೆಯನಿಗೆ ನೆರವು ನೀಡುವ ಸ್ನೇಹಿತ ಮತ್ತೊಂದು ಕಡೆ ಫೇಸ್‌ಬುಕ್‌ ಫ್ಲರ್ಟ್‌ ಆಗಿಯೂ ಕಾಣಿಸುವನು. ಮಾತುಗಾರಿಕೆಗೆ ಫಿದಾ ಆಗಿ ಇವನು ಅವನಲ್ಲ ಎಂದು ತಿಳಿದ ಮೇಲೆ ಗಂಡನನ್ನು ‘ನಿನಗೆ ಕ್ಯಾರೆಕ್ಟರೇ ಇಲ್ಲ’ ಎಂದು ಹೀಗಳೆಯುವ ಸೂಕ್ಷ್ಮ ಮನಸ್ಸಿನ ಅನುಷ್ಕಾ ಮಾತುಗಳನ್ನು ಪ್ರೇಕ್ಷಕ ಸಹಿಸಿಕೊಳ್ಳಲೇಬೇಕು!

ಹಾಗೆ ನೋಡಿದರೆ ನಿರ್ದೇಶಕರು ಎತ್ತಿಕೊಂಡಿರುವುದು ವರ್ತಮಾನದ ಅಂಶಗಳನ್ನೇ. ಇಂದಿನ ಯುವ ಸಮುದಾಯದ ಜಾಲತಾಣದ ತವಕ–ತಲ್ಲಣಗಳನ್ನು. ಆದರೆ ಸಿನಿಮಾವನ್ನು ಮೆಗಾ ಧಾರಾವಾಹಿಯಂತೆ  ಎಳೆದು ಕೊಂಡು ಹೋಗಿರುವುದು, ಕಥೆ ಎಲ್ಲಿಂದ ಎಲ್ಲೆಲ್ಲೋ ಓಡುವುದು, ಮಧ್ಯೆ ನುಸುಳುವ ಅನಪೇಕ್ಷಿತ ಪ್ರಸಂಗಗಳು, ಪ್ರೇಕ್ಷಕನ ಮೇಲೆ ಪರಿಣಾಮಕಾರಿ ಪ್ರಭಾವ ಬೀರದ ಪಾತ್ರಗಳು… ಹೀಗೆ ‘ಮೆಲೋಡಿ’ ಅಲ್ಲದ ಸಂಗತಿಗಳೇ ಎದ್ದುಕಾಣಿಸುತ್ತವೆ.

ಚಿತ್ರದಲ್ಲಿ ಎಲ್ಲಕ್ಕಿಂತ ಪ್ರಮುಖ ಕೊರತೆ ಸಂಗೀತ–ಸಾಹಿತ್ಯದ್ದು. ರಾಜೇಶ್ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಇರುವು ದರಿಂದ ಸಂಗೀತದ ಬಗ್ಗೆ ಪ್ರೇಕ್ಷಕರಲ್ಲಿ ಆಶಾಭಾವವಿತ್ತು. ಆದರೆ ಆ ಆಸೆ ಭಂಗವಾಗುತ್ತದೆ. ಎಲ್‌.ಎನ್.ಶಾಸ್ತ್ರೀ ಅವರ ಸಂಗೀತದಲ್ಲಿ ಹೊಸತನವಿಲ್ಲ. ಭರಪೂರ ಹಾಡುಗಳಿವೆ. ಆದರೆ ಅವು ಗಳು ಗುನುಗಿಕೊಳ್ಳುವ ಗುಣಪಡೆದಿಲ್ಲ. ‘ಕ್ಯಾಮೆಯಿಲ್ಲದ ಕೆಂಪ ಕುಂತವ್ನೆ ನೋಡು ಕಂಪ್ಯೂಟರ್ ಮುಂದೆ’ ಹಾಡು ಆ ಕ್ಷಣದಲ್ಲಿ ಇಷ್ಟವಾಗುತ್ತದೆ. ರಾಜೇಶ್ ಕೃಷ್ಣನ್–ಕಾರ್ತಿಕಾ ಮೆನನ್ ಜೋಡಿಗೆ ಹೋಲಿಸಿದರೆ ಚೇತನ್ ಗಂಧರ್ವ, ಅಕ್ಷತಾ ಮಾರ್ಲಾ ಗಮನ ಸೆಳೆಯುತ್ತಾರೆ. ತಂದೆಯ ಪಾತ್ರದಲ್ಲಿ ರಾಮಕೃಷ್ಣ ನಟನೆ ಇಷ್ಟವಾಗುತ್ತದೆ.

Write A Comment