Entertainment

ಆನೆಗಳಿಗೆ ಸ್ವರ್ಗ ಸಕ್ರೇಬೈಲು ಬಿಡಾರ

Pinterest LinkedIn Tumblr

sakrebailu_elephant_camp_1

ಸಕ್ರೆಬೈಲು ಈ ಹೆಸರು ಕೇಳಿದೊಡನೆಯೇ ಬಹುಶಃ ಇದು ಕಬ್ಬಿನ ಸೀಮೆ ಇರಬೇಕು ಇಲ್ಲವೆ, ಸಕ್ಕರೆ ಕಾರ್ಖಾನೆ ಇರುವ ಊರಿರಬೇಕು ಎನಿಸಿದರೆ ಅಚ್ಚರಿಯಿಲ್ಲ. ಆದರೆ, ಇದು ಆನೆಗಳ ಬಿಡಾರ.

ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ಕರೆ ಬೈಲಿಗೆ ಶತಮಾನದ ಇತಿಹಾಸವಿದೆ. ಸಕ್ಕರೆ ಬೈಲಿನಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಜಳಕ ಮಾಡುವುದನ್ನು ನೋಡುವುದೇ ಒಂದು ಸೊಬಗು.

ಸ್ವಚ್ಛಂದ ಜೀವನಕ್ಕೆ ಹೆಸರಾದ ಆನೆಗಳು, ಸಕ್ರೆಬೈಲಿನಲ್ಲಿ ಸ್ನೇಹಜೀವಿಗಳಾಗಿ ವಿಹರಿಸುವುದನ್ನು ನೋಡಲೆಂದೇ ನಿತ್ಯವೂ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆನೆಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ನುರಿತ ಮಾವುತರು, ಕವಾಡಿಗಳ ಆರೈಕೆಯಲ್ಲಿ ಇಲ್ಲಿ ದೈತ್ಯದೇಹಿ ಆನೆಗಳು ಮಾನವರ ಒಡನಾಟಕ್ಕೆ ಒಗ್ಗಿ ಕೊಂಡು ಶಿಸ್ತುಬದ್ಧ ಜೀವನ ನಡೆಸುತ್ತಿವೆ.

sakrebailu_elephant_camp_2 sakrebailu_elephant_camp_3 sakrebailu_elephant_camp_4 sakrebailu_elephant_camp_5

ಪ್ರತಿನಿತ್ಯ 6 -7 ಗಂಟೆಗೆಲ್ಲ ಕಾಡಿನಿಂದ ಸಕ್ಕರೆಬೈಲಿಗೆ ಬರುವ ಆನೆಗಳು ಪ್ರಶಾಂತವಾಗಿ ಹರಿಯುವ ತುಂಗಾನದಿಯಲ್ಲಿ ಆನಂದದಿಂದ ಜಲಕ್ರೀಡೆಯಾಡುತ್ತವೆ. ಮಾವುತರು ತಮ್ಮ ಮೈ ಉಜ್ಜಲು ಅನುವಾಗುವಂತೆ ನೀರಿನಲ್ಲಿ ಮಲಗುವ ಆನೆಗಳು, ನಂತರ ಸೊಂಡಿಲಿನಲ್ಲಿ ನೀರು ತುಂಬಿಕೊಂಡು ಪಕ್ಕದಲ್ಲಿರುವ ಆನೆಗಳಿಗೆ ಹಾಗೂ ತಮ್ಮ ಮರಿಗಳಿಗೆ ಜಲಸಿಂಚನ ಮಾಡುವ ನೋಟ ನಯನ ಮನೋಹರ.

ಆನೆಗಳ ಸ್ನಾನ ನೋಡಲೆಂದೇ ಸಾಲುಗಟ್ಟಿ ನಿಲ್ಲುವ ಜನರು ನಂತರ ಆನೆಗಳ ಭೋಜನ ನೋಡಲು ಆನೆಗಳ ಹಿಂಡಿನೊಂದಿಗೇ ತೆರಳುತ್ತಾರೆ. ಗಂಡಾನೆಗಳು ತಮಗೆ ನೀಡುವ ತಲಾ 10 ಕೆಜೆ ಹುಲ್ಲು, ಆರೇಳು ಕೇಜಿ ಭತ್ತವನ್ನು ಅರೆಕ್ಷಣದಲ್ಲಿ ನುಂಗಿ ಅರಗಿಸಿಕೊಂಡು ಬಿಡುತ್ತದೆ. ಮಾವುತರು ಕಾಯಿ, ಬೆಲ್ಲ, ಅಕ್ಕಿ ಇತ್ಯಾದಿ ಸೇರಿಸಿ ಕಟ್ಟುವ ವಿಶೇಷ ಉಂಡೆಗಳನ್ನು ಚಪ್ಪರಿಸಿಕೊಂಡು ಮೆಲ್ಲುತ್ತವೆ.

ಮರಿ ಹಾಕಿರುವ ಆನೆಗಳಿಗೆ ಮಾವುದರು ಇಲ್ಲಿ ವಿಶೇಷ ತಿಂಡಿ ತಿನಿಸು ನೀಡುತ್ತಾರೆ. ಐದು ಕಿಲೋಗ್ರಾಂ ಅಕ್ಕಿ, ಹಣ್ಣು ತೆಂಗಿನಕಾಯಿ ಬೆಲ್ಲ ಎಣ್ಣೆ ಇರುವ ಆಹಾರ ನೀಡಿ ಅವಕ್ಕೆ ತಿಂಗಳುಗಟ್ಟಲೆ ಬಾಣಂತನ ಮಾಡುತ್ತಾರೆ.

ಭೋಜನಾ ನಂತರ ಮಧ್ಯಾಹ್ನ ಹನ್ನೊಂದರ ಹೊತ್ತಿಗೆ ಕಾಡಿನ ವಿಹಾರಕ್ಕೆ ಹೊರಡುವ ಗಜರಾಯರು ವಿಹಾರ ಮುಗಿಸಿಕೊಂಡು ಮರಳಿ ಬರುವುದೇ ಮಾರನೆಯದಿನ ಬೆಳಗ್ಗೆ. ಹೀಗೆ ನಿತ್ಯ ನಾಡಿಗೆ ಬಂದು ಮರಳಿ ಕಾಡಿಗೆ ಹೋಗುವ ಆನೆಗಳನ್ನು ನೋಡಲು ಅತೀ ಸುಂದರ.

Write A Comment