ಮಂಗಳೂರು, ಸೆ.15: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ರಾಜ್ಯದ ಐದು ನಗರಗಳಲ್ಲಿ ಪೈಲಟ್ ಯೋಜನೆಗಳಾಗಿ ಕಾರ್ಯಾ ರಂಭಿಸಲಿರುವ ನಗರ ಆರೋಗ್ಯ ಅಭಿಯಾನಕ್ಕೆ ಮಂಗಳೂರಿನಲ್ಲಿ ಅಕ್ಟೋಬರ್ 25ರಂದು ಚಾಲನೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಈ ಸಂಬಂಧ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಜತೆ ಚರ್ಚಿಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡುತ್ತಿದ್ದರು.
ಈ ಅಭಿಯಾನವು ನಗರದ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ 7 ಹೊಸ ಸುಸಜ್ಜಿತ ನಗರ ಆರೋಗ್ಯ ಕೇಂದ್ರಗಳನ್ನು ಆರಂಭಿಸುವ ಮೂಲಕ ಆರಂಭಗೊಳ್ಳಲಿದೆ. ಸುಸಜ್ಜಿತ ಪ್ರಯೋಗಾ ಲಯ, ಪ್ರಯೋಗಾಲಯ ತಂತ್ರಜ್ಞ, ವೈದ್ಯಾಧಿ ಕಾರಿಗಳನ್ನೊಳಗೊಂಡ ಈ ಕೇಂದ್ರಗಳು ಬೆಳಗ್ಗೆ 7 ಗಂಟೆಯಿಂದ ಅಪರಾಹ್ನ್ನ 2ರವರೆಗೆ ಹಾಗೂ ಸಂಜೆ 4ರಿಂದ 8 ಗಂಟೆಯವರೆಗೆ ಕಾರ್ಯಾಚರಿಸಲಿವೆ. ಇದಕ್ಕಾಗಿ ನೂತನ ಕೇಂದ್ರಗಳಿಗೆ 40 ಲಕ್ಷ ರೂ. ಹಾಗೂ ಮೇಲ್ದರ್ಜೆಗೇರಿಸುವ ಕೇಂದ್ರಗಳಿಗೆ 10 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುವುದು ಎಂದು ಸಚಿವ ಖಾದರ್ ವಿವರಿಸಿದರು.
ಸುರತ್ಕಲ್, ಬೆಂಗ್ರೆ ಮತ್ತು ಜಪ್ಪುವಿನಲ್ಲಿ ಈಗಾಗಲೇ ಇರುವ ನಗರ ಆರೋಗ್ಯ ಕೇಂದ್ರ ಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಉಳಿ ದಂತೆ, ಕುಳಾಯಿ, ಕುಂಜತ್ತಬೈಲ್, ಶಕ್ತಿನಗರ, ಬಂದರು, ಪಡೀಲ್, ಎಕ್ಕೂರು ಹಾಗೂ ಬಿಜೈಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಕೇಂದ್ರಗಳ ಮೇಲ್ವಿಚಾರಣೆಯ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಗುತ್ತಿದ್ದು, ಸ್ಥಳೀಯ ಶಾಸಕರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇಲ್ಲವಾದಲ್ಲಿ ಸಂಬಂಧಪಟ್ಟ ವಾರ್ಡ್ನ ಕಾರ್ಪೊರೇಟರನ್ನು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ನಿರ್ದೇಶಿಸುವುದು ಸ್ಥಳೀಯ ಶಾಸಕರ ವಿವೇಚನೆಗೆ ಸೇರಿದ್ದಾಗಿದೆ ಎಂದವರು ತಿಳಿಸಿದರು.
ವಾರದಲ್ಲೊಂದು ದಿನ ಆರೋಗ್ಯ ದಿನಕ್ಕೆ ಕರೆ
ಮಲೇರಿಯಾ, ಫೈಲೇರಿಯಾ, ಡೆಂಗ್ನಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಹಿನ್ನೆಲೆ ಯಲ್ಲಿ ನೀರು ನಿಲ್ಲದಂತೆ ಜಾಗರೂಕತೆ ವಹಿಸಲು ಸಾರ್ವಜನಿಕರಿಗೆ ಕರೆ ನೀಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಈ ಸಂಬಂಧ ಸಾರ್ವಜನಿಕರೇ ಖುದ್ದಾಗಿ ವಾರದಲ್ಲಿ ಒಂದು ದಿನ ತಮ್ಮ ಮನೆಯ ಸುತ್ತಮುತ್ತ ಸಂಗ್ರಹವಾದ ನೀರನ್ನು ಬರಿದು ಮಾಡಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯ ದಿನವನ್ನಾಗಿ ಕಾರ್ಯಾಚರಿಸಬೇಕು ಎಂದು ಸಚಿವರು ನುಡಿದರು.
ಬೆಂಗಳೂರಿನಲ್ಲಿ ಹತ್ತು ಬೈಕ್ ಆ್ಯಂಬುಲೆನ್ಸ್ ಶೀಘ್ರ ಆರಂಭ
ರಾಜ್ಯದಲ್ಲಿ ಒಟ್ಟು 22 ಬೈಕ್ ಆ್ಯಂಬುಲೆನ್ಸ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 10 ಬೈಕ್ ಆ್ಯಂಬುಲೆನ್ಸ್ಗಳು ಬೆಂಗಳೂರಿನಲ್ಲಿ ಕಾರ್ಯಾಚರಿಸಲಿವೆ ಎಂದು ಸುದ್ದಿಗಾರರ ಪ್ರಶ್ನೆ ಯೊಂದಕ್ಕೆ ಸಚಿವ ಖಾದರ್ ಉತ್ತರಿಸಿದರು.
ದಸರಾ: ಮೈಸೂರಿನಲ್ಲಿ ವಿಶೇಷ ಆರೋಗ್ಯ ಕಾರ್ಯಕ್ರಮ
ದಸರಾ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಮೈಸೂರಿನಲ್ಲಿ ಆಯುಷ್ ಕೇಂದ್ರ ವೊಂದನ್ನು ಈ ನಿಟ್ಟಿನಲ್ಲಿ ದಸರಾ ಅವಧಿಯಲ್ಲಿ ಆರಂಭಿಸಲಾಗುತ್ತಿದೆ. ಮಾತ್ರವಲ್ಲದೆ ದಸರಾ ಸಂದರ್ಭ ಮೈಸೂರಿನ ವಿದ್ಯಾರ್ಥಿ ನಿಲಯಗಳಲ್ಲಿ ನುರಿತ ಯೋಗ ತರಬೇತುದಾರರಿಂದ ವಾರದ ಲ್ಲೊಂದು ದಿನ ಯೋಗ ತರಬೇತಿ ನೀಡಲಾಗು ವುದು. ಮೈಸೂರಿನ 45 ಹೊಟೇಲ್ಗಳಲ್ಲಿ ತಂಗುವ ವಿದೇಶಿ ಅತಿಥಿಗಳಿಗೂ ಬೆಳಗ್ಗಿನ ಹೊತ್ತು ಯೋಗ ತರಬೇತು ನೀಡಲಾಗುವುದು. ಇದೇ ವೇಳೆ ಮೈಸೂರು ಜಿಲ್ಲಾದ್ಯಂತ 30,000 ಔಷಧೀಯ ಗಿಡ ಮೂಲಿಕೆಗಳ ಸಸಿಗಳನ್ನು ನೆಡುವ ಕಾರ್ಯ ಕ್ರಮವನ್ನು ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ, ಶಾಸಕ ಲೋಬೊ ಉಪಸ್ಥಿತರಿದ್ದರು.
ಮಡಿಲು ಕಿಟ್ ಸೌಲಭ್ಯ ವಿಸ್ತರಣೆ
ಜನನದ ಸಂದರ್ಭ ಶಿಶು ಹಾಗೂ ತಾಯಿ ಮರಣವನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಪ್ರಥಮ ಮತ್ತು ದ್ವಿತೀಯ ಮಕ್ಕಳಿಗೆ ಸರಕಾರದಿಂದ ಆರಂಭಿಸಲಾಗಿರುವ ಮಡಿಲು ಕಿಟ್ ಸೌಲಭ್ಯ ವನ್ನು ಇದೀಗ ರಾಜ್ಯದ 10 ಜಿಲ್ಲೆಗಳಲ್ಲಿ ಎರಡ ಕ್ಕಿಂತ ಹೆಚ್ಚು ಮಕ್ಕಳ ಜನನದ ಸಂದರ್ಭ ದಲ್ಲೂ ವಿಸ್ತರಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು. ಹೆರಿಗೆಗಳು ಆಸ್ಪತ್ರೆಗಳಲ್ಲೇ ಆಗುವ ಮೂಲಕ ಮಗು ಮತ್ತು ತಾಯಿಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆ ಆರಂಭಿಸ ಲಾಗಿದೆ. ಮೊದಲ ಎರಡು ಮಕ್ಕಳಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದ್ದ ಕಾರಣ ಕೆಲವು ಜಿಲ್ಲೆಗಳಲ್ಲಿ ಮುಂದಿನ ಹೆರಿಗೆ ಮನೆಗಳಲ್ಲೇ ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಆಸ್ಪತ್ರೆ ಯಲ್ಲಿ ಹೆರಿಗೆಯಾಗುವ ಎರಡಕ್ಕಿಂತ ಹೆಚ್ಚಿನ ಮಕ್ಕಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಚಿವವರು ಹೇಳಿದರು.
ಕೇಪ್ಟೌನ್ನಲ್ಲಿ ಸಚಿವ ಖಾದರ್ರಿಂದ ಭಾಷಣ!
ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಸೆಪ್ಟಂಬರ್ 28ರಿಂದ ಅಕ್ಟೋಬರ್ 2ರವರೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ವತಿಯಿಂದ ‘ಗ್ರಾಮೀಣ ಆರೋಗ್ಯ ಜಾಗೃತಿಗಾಗಿ ವೈದ್ಯಕೀಯ ಪರಿಹಾರ’ ಎಂಬ ವಿಷಯದಲ್ಲಿ ನಡೆಯಲಿರುವ ವಿಶ್ವ ಮಟ್ಟದ ಕಾರ್ಯಕ್ರಮದಲ್ಲಿ ಕರ್ನಾಟಕದ ಆರೋಗ್ಯ ಸಚಿವ ಯು.ಟಿ.ಖಾದರ್ ಭಾಗವಹಿಸಿ ಮಾತನಾಡಲಿದ್ದಾರೆ. ಭಾರತದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಏಕೈಕ ಜನಪ್ರತಿನಿಧಿಯಾಗಿ ಖಾದರ್ರಿಗೆ ವಿಶೇಷ ಆಹ್ವಾನ ದೊರಕಿದೆ.