ಮುಂಬೈ, ಸೆ.15: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಸ್ಪರ್ಧಿಸುವ ಬಿಜೆಪಿಯ ಬೇಡಿಕೆಯನ್ನು ತಾವು ತಿರಸ್ಕರಿಸಿದ್ದೇವೆಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೋಮವಾರ ತಿಳಿಸಿದ್ದು, ಬಿಜೆಪಿಯೊಂದಿಗಿನ ಸೀಟು ಹಂಚಿಕೆಯ ವಿಚಾರದಲ್ಲಿ ತಮ್ಮ ಪಕ್ಷದ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.
‘ಪ್ರತಿಯೊಂದು ವಿಚಾರಕ್ಕೆ ಬದಲಿ ಮಾರ್ಗಗಳಿರುತ್ತವೆ’ ಎಂದು ಮುಗುಮ್ಮಾಗಿ ಹೇಳಿರುವ ಅವರು, ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
ಆದರೆ, ಸೀಟು ಹಂಚಿಕೆಯ ಸೂತ್ರದ ಕುರಿತಂತೆ ಮಾತುಕತೆಗಳು ಈಗಲೂ ಮುಂದುವರಿದಿವೆ ಎಂದೂ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
‘ಅವರು (ಬಿಜೆಪಿ) ಪ್ರಸ್ತಾಪವೊಂದನ್ನು ಮುಂದಿಟ್ಟು 135 ಸ್ಥಾನಗಳಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ನಾನು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ’ ಎಂದು ಉದ್ಧವ್ ಹೇಳಿದರು.
ಬಿಜೆಪಿ-ಶಿವಸೇನೆ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಮುಖ್ಯಮಂತ್ರಿ ‘ಶಿವಸೇನೆಯವರೇ ಆಗಿರುತ್ತಾರೆ’ ಎಂದು ಶನಿವಾರ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದರು.
‘ಪ್ರತಿಯೊಂದು ವಿಷಯಕ್ಕೂ ಬದಲಿಯಾದ ಮಾರ್ಗವಿರುತ್ತದೆ. ಒಂದು ಹಂತಕ್ಕಿಂತ ಮುಂದೆ ಸಾಗುವುದು ತಮ್ಮಿಂದ ಸಾಧ್ಯವಿಲ್ಲ ಎಂದು ನಾನು ಬಿಜೆಪಿಗೆ ಸ್ಪಷ್ಟಪಡಿಸಿದ್ದೇನೆ’ (ಸೀಟು ಹಂಚಿಕೆಯ ಸಂಖ್ಯೆಯ ವಿಚಾರದಲ್ಲಿ) ಎಂದು ಅವರು ತಿಳಿಸಿದರು.
ಅಸೆಂಬ್ಲಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಆಯ್ಕೆಯನ್ನು ಶಿವಸೇನೆ ಹೊಂದಿದೆಯೇ ಎಂದು ವರದಿಗಾರರು ಅವರನ್ನು ಪ್ರಶ್ನಿಸಿದಾಗ ಉದ್ಧವ್ ಈ ಮೇಲಿನಂತೆ ಉತ್ತರಿಸಿದರು.
ಆರ್‌ಪಿಐ (ಅಠಾವಳೆ) ಮತ್ತು ಸ್ವಾಭಿಮಾನಿ ಶೇತ್ಕರಿ ಸಂಘಟನೆ (ರಾಜು ಶೆಟ್ಟಿ) ಪಕ್ಷಗಳಿಗೆ ಸೀಟು ಹಂಚಿಕೆ ಮಾಡಿದ ನಂತರ ‘ಮಹಾಯುತಿ’ಯ ಎರಡು ಪ್ರಮುಖ ಪಕ್ಷಗಳು (ಬಿಜೆಪಿ, ಶಿವಸೇನೆ) ತಲಾ 135 ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ಪ್ರಸ್ತಾಪವನ್ನು ಮುಂದಿಡಲಾಗಿದೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ರವಿವಾರ ಹೇಳಿದ್ದರು.
2009ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿಗಳು ಅನುಕ್ರಮವಾಗಿ 169 ಮತ್ತು 119 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
‘ಸೀಟು ಹಂಚಿಕೆಯ ಕುರಿತಾದ ಮಾತುಕತೆಗಳು ಈಗಲೂ ಮುಂದುವರಿದಿವೆ. ಮೈತ್ರಿಯ ಕುರಿತು ಈಗಲೂ ನಿರ್ಧಾರ ಕೈಗೊಳ್ಳಬಹುದು. ಈ ಹಂತದಲ್ಲಿ ನಾನು ನಕಾರಾತ್ಮಕವಾಗಿ ಏನನ್ನೂ ಹೇಳುವುದಿಲ್ಲ’ ಎಂದು ಉದ್ಧವ್ ಠಾಕ್ರೆ ಹೇಳಿದರು.
‘ಮಾತುಕತೆಗಳು ಸ್ಥಗಿತಗೊಂಡಿವೆ. ಏಕಾಂಗಿಯಾಗಿ ಸ್ಪರ್ಧಿಸುವ ಕುರಿತು ಬಿಜೆಪಿ ಯೋಚಿಸುತ್ತಿದೆ ಎಂಬ ಮಾಧವ್ ಭಂಡಾರಿ ಅವರ ಹೇಳಿಕೆಗಳ ಕುರಿತು ನಾನೇನೂ ಹೇಳುವುದಿಲ್ಲ. ಚರ್ಚೆ ನಡೆಯುತ್ತಿಲ್ಲ ಎಂದು ಮಾತುಕತೆಯಲ್ಲಿ ಪಾಲ್ಗೊಳ್ಳದೇ ಇರುವ ವ್ಯಕ್ತಿಗಳು ಹೇಳುತ್ತಿರುವುದು ತಮಗೆ ಆಶ್ಚರ್ಯವನ್ನುಂಟು ಮಾಡಿದೆ’ ಎಂದು ಉದ್ಧವ್ ಹೇಳಿದರು.
ಎರಡೂ ಪಕ್ಷಗಳ ನಡುವಣ ಸಂಬಂಧ 25 ವರ್ಷಗಳಿಗೂ ಹಳೆಯದು. ಒಟ್ಟಿಗೆ ಹೋಗುವುದು ಬಿಜೆಪಿ-ಶಿವಸೇನೆ ಎರಡಕ್ಕೂ ಒಳ್ಳೆಯದು. ಕಾಂಗ್ರೆಸ್-ಎನ್‌ಸಿಪಿ ಸರಕಾರವನ್ನು ನಾವು ಕೆಳಗಿಳಿಸಿ ಮಹಾರಾಷ್ಟ್ರದ ಜನತೆಯನ್ನು ರಕ್ಷಿಸಬಹುದು ಎಂದು ಅವರು ನುಡಿದರು.
‘ಎಲ್ಲ ಹಿಂದೂತ್ವವಾದಿ ಶಕ್ತಿಗಳು ಒಗ್ಗೂಡಬೇಕು ಎಂಬುದು ನಮ್ಮ ಆಶಯ. ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷ ಮುಖ್ಯಮಂತ್ರಿ ಸ್ಥಾನ ಪಡೆಯಬೇಕು ಎಂದು ಬಿಜೆಪಿ ಹೇಳುತ್ತಿದೆ. ರಾಜ್ಯ ವಿಧಾನಸಭೆಯಲ್ಲಿ 171 ಸ್ಥಾನಗಳಲ್ಲಿ ಶಿವಸೇನೆ ಮತ್ತು 117 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಬೇಕು ಎಂಬ ನಿರ್ಧಾರವಾಗಿತ್ತು. ಇದನ್ನು ಬಿಜೆಪಿ ಮರೆತು ಬಿಡಬಾರದು. ಬಾಳಾ ಸಾಹೇಬ್ ಠಾಕ್ರೆ ಮಾಡಿರುವ ವ್ಯವಸ್ಥೆಯ ಒಂದು ಭಾಗವನ್ನು ಮಾತ್ರ ಹೇಗೆ ನೆನಪಿಟ್ಟುಕೊಳ್ಳುತ್ತೀರಿ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಈ ಬಾರಿ ಕೂಡ ನಾವು ಒಂದೇ ಕಡೆ ಇರುತ್ತೇವೆ ಎಂದು ಭಾವಿಸುತ್ತೇನೆ. 2-3 ದಿನಗಳಲ್ಲಿ ಮಾತುಕತೆಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 272 ಸ್ಥಾನಗಳನ್ನು ಪಡೆಯುವ ಗುರಿ ಹೊಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವುದು ನಮ್ಮ ಗುರಿಯಾಗಿದೆ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ’ ಎಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್‌ಡಿಎ ವಿಜಯಕ್ಕೆ ಶಿವಸೇನೆಯ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎಂದು ಅವರು ಹೇಳಿದರು.
‘ತಮಿಳುನಾಡು, ಪಂಜಾಬ್, ಒಡಿಶಾ ಮತ್ತು ಪಶ್ಚಿಮಬಂಗಾಳಗಳಲ್ಲಿ ಮೋದಿ ಹವಾ ನಡೆಯಿತೇ? ಮೈತ್ರಿಕೂಟ ದ ಪಾಲುದಾರರ ಮೇಲೆ ಫಲಿತಾಂಶಗಳು ಅವಲಂಬಿಸಿರುತ್ತವೆ. ನರೇಂದ್ರ ಮೋದಿ ಅವರು ನಮ್ಮ ಮೈತ್ರಿಕೂಟದ ಪ್ರಧಾನಿಯಾಗಿದ್ದರು’ ಎಂದು ಅವರು ಹೇಳಿದರು.