ರಾಷ್ಟ್ರೀಯ

ನಕ್ಸಲ್ ನಾಯಕ ಗಣಪತಿಯ ತಲೆಗೆ ರೂ. 2.67 ಕೋಟಿ ಬಹುಮಾನ

Pinterest LinkedIn Tumblr

Naxal22

ಹೊಸದಿಲ್ಲಿ, ಸೆ.16: ಸಿಪಿಐ (ಮಾವೊ) ಮುಖ್ಯಸ್ಥ ಮುಪಲ್ಲ ಲಕ್ಷ್ಮಣ ರಾಮ್ ಅಲಿಯಾಸ್ ಗಣಪತಿಯ ತಲೆಗೆ ಅನೇಕ ರಾಜ್ಯಗಳು ಬಹುಮಾನದ ಮೊತ್ತ ಏರಿಸಿವೆ. ಇದರಿಂದಾಗಿ ಆತನ ತಲೆ ರೂ. 2.67 ಕೋಟಿ ಬೆಲೆ ಬಾಳುವುದಾಗಿದ್ದು, ಭಾರತದಲ್ಲಿ ಪೊಲೀಸರಿಗೆ ಅತ್ಯಂತ ಬೇಕಾದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದಾನೆ. ವಾಸ್ತವವಾಗಿ ಮಾವೊವಾದಿಗಳ ಕೇಂದ್ರೀಯ ಸಮಿತಿಯ ಎಲ್ಲ ಸದಸ್ಯರ ತಲೆಗಳಿಗೆ ಒಟ್ಟು ರೂ. 21 ಕೋಟಿಗೂ ಹೆಚ್ಚೂ ಬಹುಮಾನ ಘೋಷಿಸಲಾಗಿದೆ. ಈ ಮೂಲಕ ಸಿಪಿಎಂ(ಮಾವೊ) ಸಂಘಟನೆ ಸುಳಿವಿಗಾಗಿ ಅತಿ ಗರಿಷ್ಠ ಬಹುಮಾನ ಘೋಷಿಲ್ಪಟ್ಟ ಸಂಘಟನೆಯೆನಿಸಿದೆ.

ಗಣಪತಿಯ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸುವುದಕ್ಕೆ ಆತನ ತಲೆಗೆ ಬಹುಮಾನದ ಮೊತ್ತವನ್ನು ಇನ್ನೂ ಹೆಚ್ಚಿಸುವಂತೆ ರಾಷ್ಟ್ರೀಯ ತನಿಖೆ ಸಂಸ್ಥೆಗೆ (ಎಸ್‌ಐಎ) ಸೂಚಿಸುವ ಯೋಜನೆಯನ್ನು ಸರಕಾರ ಹೊಂದಿದೆಯೆಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರಕೃತ ಗಣಪತಿಯ ತಲೆಗೆ ಎಸ್‌ಐಎ ರೂ. 15 ಲಕ್ಷ ಬಹುಮಾನ ಘೋಷಿಸಿದೆ.

ಗಣಪತಿಯನ್ನು ಬಂಧಿಸಲು ಕಳೆದ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ರೂ. 1 ಕೋಟಿ ಬಹುಮಾನ ಘೋಷಿಸುವುದರೊಂದಿಗೆ ಆತನ ತಲೆಗೆ ಬಹುಮಾನ ಮೊತ್ತ ಭಾರೀ ಪ್ರಮಾಣದಲ್ಲಿ ಏರಿದೆ. ಛತ್ತೀಸ್‌ಗಡವು ಆತನನ್ನು ಬಂಧಿಸಿದ ಯಾರಿಗೇ ಆಗಲಿ ರೂ. 1 ಕೋಟಿ ಬಹುಮಾನದ ಆಶ್ವಾಸನೆ ನೀಡಿದೆ. ಇತರ ನಕ್ಸಲ್ ಪೀಡಿತ ರಾಜ್ಯಗಳ ಬಹುಮಾನದ ಮೊತ್ತವನ್ನು ಸೇರಿಸಿದಲ್ಲಿ ಅದು ರೂ. 2.67 ಕೋಟಿ ಗೇರುತ್ತದೆಯೆಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.

ಮಹಾರಾಷ್ಟ್ರದ ಬಹುಮಾನ ಘೋಷಣೆ ಮಾವೊವಾದಿಗಳ ತಲೆಗಳಿಗೆ ಅತ್ಯಧಿಕ ಬೆಲೆಯನ್ನು ತಂದಿದೆ. ನಕ್ಸಲೀಯರ ಗುಂಪಿನ ಪಾಲಿಟ್ ಬ್ಯೂರೊ ಹಾಗೂ ಕೇಂದ್ರೀಯ ಮಂಡಳಿಗಳ ಯಾವನೇ ಸದಸ್ಯನ ಬಂಧನಕ್ಕೆ ಅನುಕೂಲವಾಗುವ ಮಾಹಿತಿ ನೀಡಿದವರಿಗೆ ಅದು ಇತ್ತೀಚೆಗೆ ರೂ. 60 ಲಕ್ಷ ಕೊಡುವ ಘೋಷಣೆ ಮಾಡಿದೆ.

ಗಣಪತಿ ಛತ್ತೀಸ್‌ಗಡದ ಬಸ್ತಾರ್ ಪ್ರದೇಶದ ಅಭುಜ್ ಮಾಡ್ ಅರಣ್ಯದಿಂದ ಕಾರ್ಯಾಚರಿಸುತ್ತಿದ್ದಾನೆನ್ನಲಾಗಿದ್ದು, ಇತರ ಪಾಲಿಟ್ ಬ್ಯೂರೊ ಹಾಗೂ ಕೇಂದ್ರೀಯ ಮಂಡಳಿಗಳ ಸದಸ್ಯರು ಛತ್ತೀಸ್‌ಗಡ, ಮಹಾರಾಷ್ಟ್ರ, ಒಡಿಶಾ, ಬಿಹಾರ ಹಾಗೂ ಜಾರ್ಖಂಡ್‌ಗಳ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಹರಡಿದ್ದಾರೆ.

ಗಣಪತಿ ಸಹಿತ ಇವರಲ್ಲಿ ಯಾವನೇ ಸದಸ್ಯ ಶರಣಾಗತನಾದಲ್ಲಿ, ಆತನ ತಲೆಗೆ ಘೋಷಿಸಲಾಗಿರುವ ಬಹುಮಾನವನ್ನು ಅವನಿಗೇ ನೀಡಲಾಗುವುದೆಂದು ಸಚಿವಾಲಯದ ಮೂಲಗಳು ಹೇಳಿವೆ.
ಈ ಕ್ರಮವು ದೇಶದಲ್ಲಿ ಎಡಪಂಥೀಯ ಉಗ್ರವಾದದ ಬಗ್ಗೆ ನೀತಿಯನ್ನು ಪರಿಷ್ಕರಿಸುವ ಸಹಕಾರದ ಚಿಂತನೆಯ ಭಾಗವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದೃಢವಾಗಿ ಹಾಗೂ ಸಶಸ್ತ್ರ ಕಾರ್ಯಾಚರಣೆಯ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಧ್ರುವೀಕರಿಸುವ ನಿರೀಕ್ಷೆಯಿದೆ.

ಹಿಂಸೆಯನ್ನು ತೊರೆದರೆ ಮಾವೊವಾದಿಗಳೊಂದಿಗೆ ಸರಕಾರ ಮಾತುಕತೆಗೆ ಸಿದ್ಧವೆಂದು ಇತ್ತೀಚೆಗೆ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದರು.

Write A Comment