ಮನೋರಂಜನೆ

ಮಹಿಳೆಯರ ಬ್ಯಾಡ್ಮಿಂಟನ್: ಭಾರತಕ್ಕೆ ಐತಿಹಾಸಿಕ ಕಂಚು

Pinterest LinkedIn Tumblr

haaaa

ಇಂಚೋನ್, ಸೆ.21: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಬ್ಯಾಡ್ಮಿಂಟನ್ ತಂಡ ಕಂಚು ಗೆಲ್ಲುವ ಮೂಲಕ 28 ವರ್ಷಗಳ ಬಳಿಕ ಭಾರತಕ್ಕೆ ಮೊದಲ ಪದಕ ಸಿಕ್ಕಿದೆ. ಇದು ಮಹಿಳಾ ತಂಡಕ್ಕೆ ಮೊದಲ ಪದಕವಾಗಿದೆ.

ದಿನದ ಕೊನೆಯಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ತಂಡ ಕಂಚು ಪಡೆಯಿತು. ಪುರುಷರ ತಂಡ 10 ಮೀಟರ್ ಏರ್‌ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಪಡೆಯುವ ಮೂಲಕ ಭಾರತದ ಖಾತೆಗೆ ಮೊದಲ ಪದಕ ಜಮೆಯಾಗಿತ್ತು.ಒಟ್ಟು ಎರಡು ಕಂಚು ಪದಕದೊಂದಿಗೆ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಎರಡನೆ ದಿನವನ್ನು ಕೊನೆಗೊಳಿಸಿತು. ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮಹಿಳೆಯರ ತಂಡ ದಕ್ಷಿಣ ಕೊರಿಯಾ ವಿರುದ್ಧ 1-3 ಅಂತರದಲ್ಲಿ ಸೋಲು ಅನುಭವಿಸಿ ಕಂಚಿನ ಪದಕ ಪಡೆಯಿತು.

1986ರಲ್ಲಿ ಸಿಯೋಲ್‌ನಲ್ಲಿ ಭಾರತದ ಪುರುಷರ ತಂಡ ಕಂಚು ಜಯಿಸಿತ್ತು. ಬಳಿಕ ಭಾರತ ಪದಕ ಜಯಿಸಿರಲಿಲ್ಲ. ಮಹಿಳೆಯರ ತಂಡ ಇದೇ ಮೊದಲ ಬಾರಿ ಪದಕ ಪಡೆದಿದೆ.ಪುರುಷರ ತಂಡ ಈ ವರೆಗೆ ನಡೆದಿರುವ ಏಷ್ಯನ್ ಗೇಮ್ಸ್‌ನಲ್ಲಿ 7 ಕಂಚು ಪದಕ ಪಡೆದಿತ್ತು.

ಇಂದು ನಡೆದ ಮೊದಲ ಪಂದ್ಯದಲ್ಲಿ ಭಾರತದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಕೊರಿಯಾದ ವರ್ಲ್ಡ್ ನಂ.4 ಆಟಗಾರ್ತಿ ಸುಂಗ್ ಜಿಹ್ಯೂನ್ ವಿರುದ್ಧ 21-12, 10-21, 21-09 ಅಂತರದಿಂದ ಜಯ ಗಳಿಸಿ ಪದಕದ ಭರವಸೆ ಮೂಡಿಸಿದ್ದರು. 56 ನಿಮಿಷಗಳ ಹಣಾಹಣೆಯಲ್ಲಿ ಸೈನಾ ಕಠಿಣ ಸವಾಲನ್ನು ಎದುರಿಸಿದ್ದರೂ ಗೆಲುವಿನ ನಗೆ ಬೀರಿದ್ದರು. ಬಳಿಕ ನಡೆದ ಮೂರು ಪಂದ್ಯಗಳಲ್ಲೂ ಭಾರತ ಸೋಲು ಅನುಭವಿಸಿತು.

ಎರಡನೆ ಪಂದ್ಯದಲ್ಲಿ ಭಾರತದ ಪಿ.ವಿ.ಸಿಂಧು ದಕ್ಷಿಣ ಕೊರಿಯಾದ ನಂ.6 ಬೇ ಯೆನೊಂಜೊ ವಿರುದ್ಧ 21-14, 18-21, 21-13 ಅಂತರದಲ್ಲಿ ಸೋಲು ಅನುಭವಿಸಿದರು.

ಡಬಲ್ಸ್‌ನಲ್ಲಿ ಕೊರಿಯಾದ ಕಿಮ್ ಸೊಯೆಂಗ್ ಮತ್ತು ಚಾಂಗ್ ಯೆನಾ ವಿರುದ್ಧ ಪ್ರದ್ನಾ ಗಾದ್ರೆ ಮತ್ತು ಎನ್.ಸಿಕ್ಕಿ ರೆಡ್ಡಿ 16-21, 17-21 ಅಂತರದಲ್ಲಿ ಸೋಲು ಅನುಭವಿಸಿದರು.

ಸಿಂಗಲ್ಸ್‌ನಲ್ಲಿ ಪಿ.ಸಿ ತುಳಸಿ ವಿರುದ್ಧ ಕೊರಿಯಾದ ಕಿಮ್ ಹ್ಯೊಮಿನ್ 21-12, 21-18 ಅಂತರದಲ್ಲಿ ಗೆಲುವು ಸಾಧಿಸಿ ಕೊರಿಯಾಕ್ಕೆ 3-1 ಗೆಲುವಿನೊಂದಿಗೆ ಫೈನಲ್ ತಲುಪಲು ನೆರವಾದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಜಪಾನ್ ತಂಡ ಚೀನಾ ವಿರುದ್ಧ 1-3 ಅಂತರದೊಂದಿಗೆ ಸೋಲುವುದರೊಂದಿಗೆ ಭಾರತದ ಜೊತೆ ಕಂಚು ಪದಕವನ್ನು ಹಂಚಿಕೊಂಡಿತು.

Write A Comment