ಮಂಗಳೂರು, ಸೆ. 22: ಕರಾವಳಿಯಾದ್ಯಂತ ರಕ್ಷಣಾ ಕಾರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕರಾವಳಿ ರಕ್ಷಣಾ ಪಡೆಗೆ ಮಂಜೂರಾಗಿದ್ದ ಲಂಡನ್ ನಿರ್ಮಿತ ಹೋವರ್‌ಕ್ರಾಫ್ಟ್ ಏರ್‌ಕುಶನ್- 916 ಇಂದು ಪಣಂಬೂರು ಕಡಲ ಕಿನಾರೆಗೆ ಆಗಮಿಸಿದೆ. ಮುಂಬೈನಿಂದ ಸೆ.18ರಂದು ಹೊರಟ ಈ ಹೋವರ್‌ಕ್ರಾಫ್ಟ್ -196 ಇಂದು ಮಧ್ಯಾಹ್ನ 11:30ರ ವೇಳೆಗೆ ಕರಾವಳಿ ರಕ್ಷಣಾ ಪಡೆಯ ಪಣಂಬೂರು ಕಚೇರಿ ಸಮೀಪ ಸಮುದ್ರದ ದಡ ಸೇರಿದ್ದು, ಮಂಗಳೂರಿನ ಸಮುದ್ರ ಕಿನಾರೆಯ ಮೂಲಕ ಕಾರ್ಯಾ ಚರಣೆಯಲ್ಲಿ ತೊಡಗಲಿದೆ.
320 ಕಿ.ಮೀ. ಉದ್ದದ ಕರ್ನಾಟಕ ಕರಾವಳಿಯುದ್ದಕ್ಕೂ ಕಣ್ಗಾವಲು ಕಾರ್ಯಾಚರಣೆಗಳಲ್ಲಿ ಈ ಹೋವರ್‌ಕ್ರಾಫ್ಟ್ ತೊಡ ಗಲಿದೆ. ಈ ಕ್ರಾಫ್ಟ್ ನಿಲುಗಡೆ, ನಿರ್ವಹಣೆ ಮಾಡುವ ಪ್ರದೇಶಕ್ಕೆ ಸುಸಜ್ಜಿತ ‘ಹೋವರ್ ಪೋರ್ಟ್’ನ ಅಗತ್ಯವಿದೆ. ಆದರೆ ಸದ್ಯ ಮಂಗಳೂರಿನಲ್ಲಿ ಹೋವರ್ ಪೋರ್ಟ್ ಇಲ್ಲದಿರುವ ಕಾರಣ ತನ್ನ ಕಾರ್ಯಾಚರಣೆಯ ಬಳಿಕ ಇದು ಪಣಂಬೂರು ಕಡಲ ಕಿನಾರೆಯ ಕರಾವಳಿ ರಕ್ಷಣಾ ಪಡೆಯ ಕಚೇರಿ ಸಮೀಪದ ಸಮುದ್ರದ ಮರಳ ಮೇಲೆ ಲಂಗರು ಹಾಕಲಿದೆ.
ಫೆಬ್ರವರಿಯಲ್ಲಿ ಮುಂಬೈ, ಕಾರವಾರ ಮೂಲಕ ಬಂದಿದ್ದ ಪ್ರಾಯೋಗಿಕ ಹೋವರ್‌ಕ್ರಾಫ್ ಕರ್ನಾಟಕ ಕರಾವಳಿಯ ಸಮುದ್ರ ಹಾಗೂ ಸಮುದ್ರ ದಂಡೆಯಲ್ಲಿ ಸಂಚಾರ ಬಗ್ಗೆ ಸರ್ವೇ ನಡೆಸಿತ್ತು. ಭಾರತೀಯ ಕರಾವಳಿ ರಕ್ಷಣಾ ಪಡೆಯಲ್ಲಿ ಸದ್ಯ 15 ಹಾವರ್ ಕ್ರಾಫ್ಟ್ ವೆಹಿಕಲ್‌ಗಳಿದ್ದು, ಮಂಗಳೂರಿಗೆ ಆಗಮಿಸಿರುವ ಈ ಹೋವರ್ ಕ್ರಾಫ್ಟ್ 16ನೆಯದ್ದಾಗಿದೆ. ಈ ಕ್ರಾಫ್ಟ್ ಸುಸಜ್ಜಿತ ಸಂವಹನ ಮತ್ತು ಸಂಚಾರ ಸಲಕರಣೆಗಳನ್ನು ಹೊಂದಿರುವುದರಿಂದ ವಿಶೇಷ ಭದ್ರತಾ ವ್ಯವಸ್ಥೆಯೂ ಇದಕ್ಕೆ ಅಗತ್ಯವಾಗಿದೆ. ಹಾಗಾಗಿ ಇದಕ್ಕಾಗಿ ರಚಿಸಲಾಗುವ ಹೋವರ್ ಪೋರ್ಟ್ ಕೂಡಾ ಅತ್ಯಂತ ಸುರಕ್ಷಿತ ತಾಣವಾಗಿರಬೇಕು. ತಣ್ಣೀರುಬಾವಿಯಲ್ಲಿ 15 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತ ಹೋವರ್‌ಪೋರ್ಟ್ ರಚನೆಯಾಗಲಿದೆ. ಈ ಸಂಬಂಧ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ಹಾಗೂ ಡಿಐಜಿ ರಾಜಮಣಿ ಶರ್ಮ ತಿಳಿಸಿದ್ದಾರೆ.
ಗಸ್ತಿನ ಜತೆಯಲ್ಲೇ ಈ ಹೋವರ್‌ಕ್ರಾಫ್ಟ್, ರಕ್ಷಣಾ ಕಾರ್ಯ, ಸಮುದ್ರದಲ್ಲಿ ನಾಪತ್ತೆಯಾಗುವ ಮೀನುಗಾರರ ಪತ್ತೆ ಹಾಗೂ ರಕ್ಷಣೆ, ಕಡಲ ಸಂಪತ್ತಿನ ರಕ್ಷಣೆ, ಸಮುದ್ರ ಮೂಲಕ ಕಳ್ಳ ಸಾಗಾಟಗಾರರ ಮೇಲೆ ಕಣ್ಗಾವಲು ಮೊದಲಾದ ರಕ್ಷಣಾ ಕಾರ್ಯದಲ್ಲಿ ದಿನದ 24 ಗಂಟೆಯೂ ತೊಡಗುವ ಕ್ಷಮತೆಯನ್ನು ಹೊಂದಿದೆ. 31 ಟನ್ ತೂಕದ ಈ ಹೋವರ್‌ಕ್ರಾಫ್ಟ್ 21 ಮೀಟರ್ ಉದ್ದವನ್ನು ಹೊಂದಿದೆ. ಸ್ಟನ್‌ಗನ್, ಪಿಸ್ತೂಲ್, ಸಣ್ಣ ದೋಣಿ ಸೇರಿದಂತೆ ಶಸ್ತ್ರ ಸಜ್ಜಿತವಾದ ಇದು ರಾಡಾರ್, ಅತ್ಯಾಧುನಿಕ ಬೈನಾಕುಲ್ ವ್ಯವಸ್ಥೆಯನ್ನು ಹೊಂದಿದೆ. ಇದೀಗ ಹೋವರ್‌ಕ್ರಾಫ್ಟ್‌ನ ಆಗಮನ ರಕ್ಷಣಾ ಕಾರ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದರು.
ಈ ಹೋವರ್‌ಕ್ರಾಫ್ಟ್ ಸಮುದ್ರದಲ್ಲಿ ಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸಮುದ್ರ ದಂಡೆಯಲ್ಲಿ ಹಾಗೂ ನೆಲತಟ್ಟಾದ ಪ್ರದೇಶದಲ್ಲಿ ಚಲಿಸಬಲ್ಲದು. ಇದು ನೀರಿನ ಮೇಲಲ್ಲದೆ, ಭೂಮಿಯ ಮೇಲೂ 15 ಕಿ.ಮೀ. ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೋವರ್‌ಕ್ರಾಫ್ಟ್‌ನಲ್ಲಿ ಕ್ಯಾಪ್ಟನ್ ಸೇರಿದಂತೆ ಇಬ್ಬರು ಅಧಿಕಾರಿಗಳು ಹಾಗೂ 10 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಇವರೆಲ್ಲರೂ ತರಬೇತಿ ಪಡೆದವರಾಗಿದ್ದಾರೆ ಎಂದು ಹೋವರ್ ಕ್ರಾಫ್ಟ್ 196ರ ಕಮಾಂಡೆಂಟ್ ಗುಲ್‌ವಿಂದರ್ ಸಿಂಗ್ ತಿಳಿಸಿದರು.
ಒಂದು ತಿಂಗಳೊಳಗೆ ಮತ್ತೊಂದು ಹೋವರ್‌ಕ್ರಾಫ್ಟ್ -198 ಸೇರ್ಪಡೆ
ಸದ್ಯದಲ್ಲೇ ಕರಾವಳಿ ರಕ್ಷಣಾ ಪಡೆಗೆ ಒಂದು ತಿಂಗಳೊಳಗೆ ಮತ್ತೊಂದು ಹೋವರ್‌ಕ್ರಾಫ್ಟ್ -198 ಮತ್ತು ‘ಅಮರ್ತ್ಯ’ ಎಂಬ ವೇಗದ ಗಸ್ತು ಕ್ರಾಫ್ಟ್ ಮಂಗಳೂರು ಸಮುದ್ರದ ಮೂಲಕ ಕಾರ್ಯಾಚರಣೆಗೆ ಮುಂದಾಗಲಿವೆ. ಮುಂದಿನ ಮೂರು ತಿಂಗಳೊಳಗೆ ಇಂಟರ್‌ಸೆಪ್ಟರ್ ಕ್ರಾಫ್ಟ್ ಕೂಡಾ ಸೇರ್ಪಡೆಗೊಳ್ಳುವ ಮೂಲಕ ರಕ್ಷಣಾ ಕಾರ್ಯ ಮತ್ತಷ್ಟು ಬಲ ಪಡೆಯಲಿದೆ ಎಂದು ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ಹಾಗೂ ಡಿಐಜಿ ರಾಜಮಣಿ ಶರ್ಮ ತಿಳಿಸಿದ್ದಾರೆ.
ಕಮಾಂಡೆಂಟ್ ರಾಜೇಂದರ್ ಸಿಂಗ್ ಸಪಲ್, ಹೋವರ್‌ಕ್ರಾಪ್ಟ್-19ನ ಸಹಾಯಕ ಕಮಾಂಡೆಂಟ್ ಜೆ.ಎಸ್. ಡೆಲನ್ ಈ ಸಂದರ್ಭ ಉಪಸ್ಥಿತರಿದ್ದರು