ತುಮಕೂರು, ಸೆ.24: ಆಂಧ್ರ ರಾಜ್ಯದ ವಿಭಜನೆಯ ನಂತರ ಕೇಂದ್ರ ಸರಕಾರ ತೆಲಗಾಂಣ ಮತ್ತು ಸೀಮಾಂದ್ರ ರಾಜ್ಯಗಳಿಗೆ ಘೋಷಣೆ ಮಾಡಿರುವ ವಿಶೇಷ ಕೈಗಾರಿಕಾ ಪ್ಯಾಕೇಜನ್ನು ಕರ್ನಾಟಕ ರಾಜ್ಯಕ್ಕೂ ನೀಡಬೇಕು ಎಂದು ಪ್ರಧಾನಿ ನರೇಂದ್ರಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ತುಮಕೂರು ತಾಲೂಕು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರದ ಆಹಾರ ಸಂಸ್ಕರಣಾ ಇಲಾಖೆ, ಫ್ಯೂಚರ್ ಗ್ರೂಪ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಇಂಡಿಯಾ ಫುಡ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೈದ್ರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಬೇಕು, ಕರ್ನಾಟಕ ಆಂಧ್ರ ಪ್ರದೇಶ ಪಕ್ಕದ ರಾಜ್ಯವಾಗಿದ್ದು, ಆಂಧ್ರಕ್ಕೆ ನೀಡಿದ ಮಾದರಿಯಲ್ಲಿ ನಮ್ಮ ರಾಜ್ಯಕ್ಕೂ ವಿಶೇಷ ಯೋಜನೆ ನೀಡಬೇಕು ಎಂದರು.
ದೇಶದ ಮೊದಲ ಫುಡ್‌ಪಾರ್ಕ್ ಕರ್ನಾಟಕದಲ್ಲಿ ಆರಂಭವಾಗಿರುವುದು ಸಂತೋಷದ ವಿಷಯ. ಈ ಬಗ್ಗೆ ಪ್ರಧಾನಮಂತ್ರಿಗೆ ಅಭಿನಂದನೆ ತಿಳಿಸಿದ್ದು, ದೇಶದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಶೇ.7ರಷ್ಟು, ತೋಟಗಾರಿಕಾ ಉತ್ಪಾದನೆಯಲ್ಲಿ ಶೇ.15ರಷ್ಟು, ತರಕಾರಿ ಉತ್ಪಾದನೆಯಲ್ಲಿ ಶೇ.10 ಕರ್ನಾಟಕದಲ್ಲೇ ಉತ್ಪಾದನೆಯಾಗುತ್ತಿದೆ. ಇರದಲ್ಲಿ ಮೌಲ್ಯವರ್ಧನೆಯಾಗುತ್ತಿರುವುದು ಶೇ.7ರಷ್ಟು ಮಾತ್ರ, ಸುಮಾರು 25ರಿಂದ30ರಷ್ಟು ವ್ಯರ್ಥವಾಗುತ್ತಿರುವುದು ಕಳವಳಕಾರಿ ವಿಷಯ. ಆಹಾರ ವ್ಯರ್ಥವಾಗುವುದನ್ನು ತಡೆಗಟ್ಟುವುದು ಸರಕಾರದ ಜವಾಬ್ದಾರಿ. ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಣೆ ಮಾಡುವುದರ ಜೊತೆಗೆ ಮಾರುಕಟ್ಟೆ ವ್ಯಾಪ್ತಿಯೂ ಹೆಚ್ಚಾಗಬೇಕು. ರೈತರಿಗೆ ಉತ್ತಮ ಬೆಂಬಲ ದೊರೆಯಬೇಕು. ಈ ನಿಟ್ಟಿನಲ್ಲಿ ಫುಡ್‌ಪಾರ್ಕ್ ನಿಮಾರ್ಣಗೊಳ್ಳುತ್ತಿದೆ ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ ಆರಂಭವಾಗುತ್ತಿರುವ ಫುಡ್‌ಪಾರ್ಕ್‌ಗೆ ರಾಜ್ಯ ಸರಕಾರ ಕಡಿಮೆ ದರದಲ್ಲಿ ಭೂಮಿ, ನೀರು, ರಸ್ತೆ, ವಿದ್ಯುತ್, ತೆರಿಗೆ ವಿನಾಯಿತಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿದೆ. ಕೇಂದ್ರ ಸರಕಾರ ಅನುದಾನ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಮೆಗಾ ಫುಡ್ ಪಾರ್ಕ್ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಮಾವು, ಶೇಂಗಾ, ತೆಂಗು, ಅಡಿಕೆ, ರಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ. ರೈತರ ಆರ್ಥಿಕ ಪರಿಸ್ಥಿತಿ ಬದಲಾಗಬೇಕು. ರಾಜ್ಯ ಸರಕಾರ ಕೃಷಿ ಅಭಿವೃದ್ಧಿಯ ದೃಷ್ಟಿಯಿಂದ 2011ರಲ್ಲಿ ಹೊಸ ಕೃಷಿ ನೀತಿ ಜಾರಿಗೆ ತಂದಿದೆ. ಈ ಸಾಲಿನಲ್ಲಿ ಕೃಷಿ ಮತ್ತು ಕೈಗಾರಿಕಾ ನೀತಿಯನ್ನು ಜಾರಿಗೆ ತರುವ ಮೂಲಕ ಕೈಗಾರಿಕೆ ಸ್ಥಾಪನೆಗೆ ಆಗುತ್ತಿರುವ ವಿಳಂಬ ತಪ್ಪಿಸಲಾಗುವುದು ಎಂದರು.
ವಿಶ್ವ ಹೂಡಿಕೆ ತಾಣ: ವಿಶ್ವದ ಅನೇಕ ದೇಶಗಳು ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಉದ್ಯೋಗ ಸೃಷ್ಟಿ: ಫುರ್ಡ್ ಪಾರ್ಕ್ ನಿರ್ಮಾಣದಿಂದ ಸುಮಾರು 6,000 ರೈತರಿಗೆ ನೇರ ಉದ್ಯೋಗ, 25 ಸಾವಿರ ರೈತರಿಗೆ ಪರೋಕ್ಷ ಉದ್ಯೋಗ ಸೇರಿದಂತೆ ಒಟ್ಟು 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯ ಸರಕಾರ ಅಭಿವೃದ್ಧಿಗೆ ಪೂರಕವಾದ ಹೊಸ ಕೈಗಾರಿಕಾ ನೀತಿಯನ್ನು ಸದ್ಯದಲ್ಲೇ ಜಾರಿ ಮಾಡಲಿದೆ. ರಾಷ್ಟ್ರೀಯ ಹೂಡಿಕೆ ವಲಯವನ್ನು (ನಿಮ್ಜ್) ಕೇಂದ್ರ ಸರಕಾರ ಘೋಷಣೆ ಮಾಡಿದ್ದು, ಕೈಗಾರಿಕೆಗಳ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಿದ್ಧವಿದೆ. ಎಲ್ಲ ರೀತಿಯ ಸಹಕಾರ, ಮಂಜೂರಾತಿಗಳನ್ನು ಕೇಂದ್ರ ಸರಕಾರ ನೀಡಬೇಕು ಎಂದು ಒತ್ತಾಯಿಸಿದರು.
ಚೆನೈ-ಬೆಂಗಳೂರು-ಮುಂಬೈ ಹೈವೇ ಕಾರಿಡಾರ್ ವಿಸ್ತೃತ ವರದಿ ಮಾರ್ಚ್ ಅಂತ್ಯದೊಳಗೆ ಸಿದ್ಧವಾಗಲಿದೆ. ಜಪಾನ್, ಇಂಗ್ಲೆಂಡ್ ಸೇರಿದಂತೆ ವಿಶ್ವದ ಅನೇಕ ದೇಶಗಳು ಹೂಡಿಕೆ ಮುಂದಾಗಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.