ಮಂಗಳೂರು, ಸೆ.29: ಪರಿಸರಕ್ಕೆ ಯಾವ ರೀತಿಯಲ್ಲೂ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದಾಗಿದೆ. ಈ ನಿಟ್ಟಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಯೋಜನೆಯನ್ನು ರೂಪಿಸುವಂತೆ ಹಾಗೂ ಕಾಲಕಾಲಕ್ಕೆ ಸುಪ್ರೀಂ ಕೋರ್ಟ್ ನೀಡಿದ ಆದೇಶಗಳನ್ನು ಉಲ್ಲೇಖಿಸಿ ಸರಕಾರಕ್ಕೆ ಉನ್ನತ ಮಟ್ಟದ ಸಮಿತಿಯಿಂದ ಸೂಕ್ತ ವರದಿ ನೀಡಲಾಗುವುದು ಎಂದು ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ನೇಮಿಸಿದ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಸರಕಾರದ ಮಾಜಿ ಸಚಿವ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್.ಸುಬ್ರಹ್ಮಣ್ಯನ್ ಹೇಳಿದ್ದಾರೆ.
ಪರಿಸರ ಸಂರಕ್ಷಣಾ ಕಾಯ್ದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಜಲಮಾಲಿನ್ಯ, ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿ ಬೇಕು. ಆದರೆ ಪರಿಸರಕ್ಕೆ ಹಾನಿ ಮಾಡಿ ಅಭಿವೃದ್ಧಿ ಮಾಡಿದರೆ ಏನನ್ನೂ ಸಾಧಿಸಿ ದಂತಾಗುವುದಿಲ್ಲ. ಸಮಸ್ಯೆಗಿಂತಲೂ ಅದನ್ನು ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ನೀಡಬಹುದು ಎಂದು ಸುಬ್ರಹ್ಮಣ್ಯನ್ ತಿಳಿಸಿದರು.
ಸುರತ್ಕಲ್ ಸಮೀಪದ ಎಂಆರ್ಪಿಎಲ್ ಕಂಪೆನಿಯಿಂದ ಆಸುಪಾಸಿನ ಗ್ರಾಮಸ್ಥರು ತೊಂದ ರೆಗೀಡಾಗಿದ್ದಾರೆ. ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲಮಾಲಿನ್ಯದಿಂದ ಜನರು ರೋಸಿ ಹೋಗಿದ್ದಾರೆ. ಈ ಬಗ್ಗೆ ಹಲವು ಬಾರಿ ದೂರು ನೀಡಿ ದರೂ ಪ್ರಯೋಜನವಾಗಿಲ್ಲ ಎಂದು ಜೋಕಟ್ಟೆಯ ಬಿ.ಎಸ್.ಹುಸೈನ್ ಎಂಬವರು ದೂರಿದರು.
ಪರಿಸರಕ್ಕೆ ಹಾನಿಯಾಗುವ ಕೈಗಾರಿಕೆಗಳ ಕುರಿತು ಪ್ರಯೋಗಾಲಯ ಸ್ಥಾಪಿಸಿ ಎಂದು ಕಳೆದ 20 ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಅದಿನ್ನೂ ಸ್ಥಾಪನೆಯಾಗಿಲ್ಲ ಎಂದು ಸುರೇಶ್ ಶೆಟ್ಟಿ ಆರೋಪಿಸಿದರು.
ಪರಿಸರ ಹಾನಿ ಕುರಿತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ರಸ್ತೆಯ ಇಕ್ಕೆಡೆಗಳಲ್ಲಿ ತ್ಯಾಜ್ಯಗಳನ್ನು ಎಸೆಯುವ ಮೂಲಕ ಪರಿಸರಕ್ಕೆ ಹಾನಿ ಮಾಡಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕಾದ ಸರಕಾರಿ ಅಧಿಕಾರಿಗಳು ವೌನ ತಾಳಿದ್ದಾರೆ ಎಂದು ಸಭೆ ಯಲ್ಲಿ ಹಾಜರಿದ್ದ ಹಲವರು ಸಮಿತಿಯ ಗಮನ ಸೆಳೆದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಸಮಿತಿಯ ಸದಸ್ಯ ಕಾರ್ಯದರ್ಶಿ ವಸುಮಿತ್ರ, ಸಲಹೆಗಾರ ಆರ್.ಎಲ್.ನಾರಾಯಣನ್, ಸದಸ್ಯರಾದ ಡಾ.ರವೀಂದ್ರ ಎಚ್. ದೊಲೊಕಿಯ, ನಿವೃತ್ತ ನ್ಯಾಯಾಧೀಶ ಆರ್.ಎಲ್. ಶ್ರೀವಾಸ್ತವ, ಕೆ.ಎನ್.ಭಟ್, ವಿಶ್ವನಾಥ ಸಿನ್ಹ, ಹಾರ್ದಿಕ ಶಾ, ಬಿ.ಕೆ.ಸಿಂಗ್, ಡಾ.ಆರ್.ಕೆ. ಅಗರ್ವಾಲ್, ಅಂಚೆ ಇಲಾಖೆಯ ಅಧೀಕ್ಷಕ ಕೆ.ಎ.ದೇವರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಉಪಸ್ಥಿತರಿದ್ದರು.