ಮಂಗಳೂರು, ಸೆ.29: ನೇತ್ರಾವತಿ ನದಿ ತಿರುವು ಯೋಜನೆಯ ಕುರಿತು ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆಯು ರವಿವಾರ ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ಜರಗಿತು.
ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತು ಬೋಳಂಗಡಿ ಮಸೀದಿ ಧರ್ಮಗುರು ಸೈಯದ್ ಯಹ್ಯಾ ತಂಙಳ್ ಆಶೀರ್ವಚನ ನೀಡಿದರು. ಸುಬ್ರಹ್ಮಣ್ಯ, ಒಡಿಯೂರು ಶ್ರೀ ಹೋರಾಟಕ್ಕೆ ಬೆಂಬಲ ಸೂಚಿಸಿ ಕಳುಹಿಸಿದ ಸಂದೇಶವನ್ನು ಸಭೆಯಲ್ಲಿ ವಾಚಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಯೋಜನೆ ಕುರಿತು ಅ.25ರೊಳಗೆ ದ.ಕ. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಭೆ ನಡೆಸದಿದ್ದರೆ ನ.1ರಂದು ಉಗ್ರ ಸ್ವರೂಪದ ಚಳವಳಿ ಆರಂಭಿಸಲು ನಿರ್ಧರಿಸಲಾಯಿತು. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ‘ಯೋಜನೆ ಅಗತ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹಿರಿಯ ಕಾನೂನು ತಜ್ಞ ಉದಯ ಹೊಳ್ಳ ಹಾಗೂ ಅಶೋಕ್ ಹಾರ್ನಳ್ಳಿಯ ಸಲಹೆಯಂತೆ ಚೆನ್ನೈಯ ಗ್ರೀನ್ ಟ್ರಿಬ್ಯುನಲ್ನಲ್ಲಿ ಕಾನೂನು ಹೋರಾಟ ಮುಂದುವರಿಸಲು ತೀರ್ಮಾನಿಸಲಾಗಿದೆ. ಹೋರಾಟದಿಂದ ರಾಜಕೀಯವಾಗಿ ತನಗೆ ನಷ್ಟವಾಗಿರಬಹುದು. ಆದರೆ ಸಮಾಜದ ದೃಷ್ಟಿಯಿಂದ ನದಿ ಉಳಿಸುವ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ. ಇಂದಿಗೂ ಜಿಲ್ಲೆಯ ಬಹುತೇಕ ಜನರಿಗೆ ಸರಕಾರದ ನದಿ ತಿರುಗಿಸುವ ಯೋಜನೆ ಬಗ್ಗೆ ಜಾಗೃತಿ ಮೂಡಿಲ್ಲ. ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಯಬೇಕು’ ಎಂದರು.
ಕರಾವಳಿಯ ವಿವಿಧ ಸ್ವಾಮೀಜಿ, ಮುಸ್ಲಿಮ್ ಧರ್ಮಗುರು, ಮಂಗಳೂರು ಧರ್ಮಪ್ರಾಂತದ ಬಿಷಪ್ರಿಂದ ಬೆಂಬಲದ ಭರವಸೆ ದೊರೆತಿದೆ. ಜಿಲ್ಲೆಯ ಜೀವನದಿಯನ್ನು ಉಳಿಸಲು ಜಾತಿ, ಮತ, ರಾಜಕೀಯ ವ್ಯತ್ಯಾಸ ವಿಲ್ಲದೆ ಹೋರಾಟ ನಡೆಸಬೇಕು ಎಂದು ಪರಿಸರ ಹೋರಾಟಗಾರ ಡಾ. ನಿರಂಜನ ರೈ ಸಲಹೆ ನೀಡಿದರು.
ಯೋಜನೆಯ ಕಾಮಗಾರಿ ನಡೆಸಲು ಸಕಲೇಶಪುರದ ಜನತೆ ಅವಕಾಶ ನೀಡುತ್ತಿಲ್ಲ. ಆದರೆ ಬಯಲು ಸೀಮೆಯಲ್ಲಿ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆಯಿಂದ ನೇರವಾಗಿ ತೊಂದರೆಗೆ ಒಳಗಾಗುವ ಜನರ ಸಭೆ ನಡೆಸದೆ ಸರಕಾರ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವುದು ದುರಂತ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಅಭಿಪ್ರಾಯಪಟ್ಟರು. ಯೋಜನೆಯನ್ನು ವಿರೋಧಿಸುವ ಜಿಲ್ಲೆಯ ವಿವಿಧ ಸಂಘಟನೆಗಳು ಪ್ರಾದೇಶಿಕ ಮಟ್ಟದಲ್ಲಿ ಹೋರಾಟ ನಡೆಸಬೇಕು. ಬಳಿಕ ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯಕ್ರಮ ಸಂಘಟಿಸಬೇಕು. ಮೊದಲ ಹಂತದಲ್ಲಿ ಅಡ್ಯಾರ್ ಕಣ್ಣೂರಿನಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪಾದಯಾತ್ರೆ ಕೈಗೊಳ್ಳಬಹುದು ಎಂದರು.
ಪ್ರಮುಖ ರಾಜಕೀಯ ಪಕ್ಷಗಳ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಈಗಾ ಗಲೇ ಕೆಲವರು ಯೋಜನೆಗೆ ಪರೋಕ್ಷ, ಇನ್ನು ಕೆಲವರು ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಚಳವಳಿ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಮುಂದುವರಿಯಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಎಂ.ಆರ್. ವಾಸುದೇವ ಅಭಿಪ್ರಾಯ ಪಟ್ಟರು.
ಸಹ್ಯಾದ್ರಿ ಸಂರಕ್ಷಣಾ ಸಂಚಯ ವತಿಯಿಂದ ಅ. 2 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕಲಾವಿದ ದಿನೇಶ್ ಹೊಳ್ಳ ಹೇಳಿದರು. ಉನ್ನತ ಸಮಿತಿ ಭೇಟಿ
ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಪರಿಸರ ಸಂಬಂಧಿ ಕಾಯ್ದೆಗಳ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದ ನಿವೃತ್ತ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ಎಸ್. ಆರ್. ಸುಬ್ರಹ್ಮಣ್ಯನ್ ನೇತೃತ್ವದ ಕೇಂದ್ರ ಉನ್ನತ ಮಟ್ಟದ ಸಮಿತಿ ಸದಸ್ಯರನ್ನು ಜಿಲ್ಲೆಯ ಪರಿಸರ ಹೋರಾಟಗಾರರು ಭೇಟಿಯಾಗಿ ಮನವಿ ಸಲ್ಲಿಸಿದರು.