ಮಂಗಳೂರು: ಸೆ. 29: ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ವತಿಯಿಂದ ಜಾಗತಿಕ ಹೃದಯ ದಿನಾಚರಣೆ ಪ್ರಯುಕ್ತ ರವಿವಾರ ‘ಹೃದಯ ನಡಿಗೆ’ಕಾರ್ಯಕ್ರಮ ಜರಗಿತು.
ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆವರಣದಿಂದ ಬೆಳಗ್ಗೆ 7.45ಕ್ಕೆ ಆರಂಭವಾದ ನಡಿಗೆ ಪಂಪ್‌ವೆಲ್ ಮೂಲಕ ಫಾದರ್ ಮುಲ್ಲರ್‍ಸ್ ಜಂಕ್ಷನ್‌ಗೆ ಬಂದು ಅಲ್ಲಿಂದ ಬೆಂದೂರ್‌ವೆಲ್ ಜಂಕ್ಷನ್‌ಗೆ ಚಲಿಸಿ ಸುಮಾರು 1.5 ಕಿ.ಮೀ. ದೂರವನ್ನು ಕ್ರಮಿಸಿ ಮರಳಿ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆವರಣದಲ್ಲಿ ಕೊನೆಗೂಂಡಿತ್ತು.
ಇಂಡಿಯಾನ ಆಸ್ಪತ್ರೆ ಹಾಗೂ ಹೃದಯಾಲಯದಲ್ಲಿ ಕಳೆದ 2 ವರ್ಷಗಳಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ಪಡೆದ ನೂರಾರು ಮಂದಿ ಹಾಗೂ ಹೃದಯ ರೋಗಿಗಳು, ಸಾರ್ವಜನಿಕರು ಸೇರಿದಂತೆ ‘ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಮಂದಿ ಒಂದೂವರೆ ಕಿ.ಮೀ.ನಷ್ಟು ದೂರ ಹೃದಯದ ಕುರಿತ ಜಾಗೃತಿ ಮೂಡಿಸುವ ಘೋಷಣೆ ಕೂಗುತ್ತ ಸಾಗುವ ದೃಶ್ಯಕ್ಕೆ ಇಡೀ ಮಂಗಳೂರು ನಗರ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಆಡಳಿತ ನಿರ್ದೇಶಕರೂ ಮುಖ್ಯ ಹೃದಯ ತಜ್ಞರೂ ಆಗಿರುವ ಡಾ. ಯೂಸೆಫ್ ಕುಂಬ್ಳೆಯವರು ಮಾತನಾಡಿ, ‘ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಇಂತಹ ಸಾರ್ವಜನಿಕ ಎಚ್ಚರಿಕೆ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತದೆ. ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದ ಸಾವಿರಕ್ಕೂ ಮಿಕ್ಕ ‘ಹೃದಯವಂತ’ರು ಇಂದೀಗ ಸಹಜ ಹಾಗೂ ಆರೋಗ್ಯವಂತ ಬದುಕನ್ನು ಬದುಕುತ್ತಿದ್ದಾರೆ. ಅವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನಡಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಈ ಸಂದೇಶವು ರಾಜ್ಯವ್ಯಾಪಿಯಾಗಿ ಪ್ರಸಾರಗೊಂಡಿದೆ ಎಂದರು.
ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯದ ಅಧ್ಯಕ್ಷರಾಗಿರುವ ಡಾ. ಅಲಿ ಕುಂಬ್ಳೆಯವರು ಮಾತನಾಡಿ, ‘ಸಮಾಜದ ಸೇವೆ ಮಾಡುವುದಕ್ಕೆ ನಮಗೆ ದೊರಕಿದ ಅಪೂರ್ವ ಸಂದರ್ಭವಿದು. ನಮ್ಮ ಉದ್ದೇಶ ಹಾಗೂ ದರ್ಶನ ಕೂಡ ಹೃದಯ ರೋಗಿಗಳ ಸೇವೆಯೇ ಆಗಿದೆ’ ಎಂದರು. ಈ ನಿಟ್ಟಿನಲ್ಲಿ ಜಾಗತಿಕ ಹೃದಯ ದಿನಾಚರಣೆಯ ಅಂಗವಾಗಿ ದಿ.29.9.2014ರಿಂದ ಮುಂದಿನ ಮೂವತ್ತು ದಿನಗಳ ತನಕ ವಿಶೇಷ ಹೃದಯ ತಪಾಸಣಾ ಪ್ಯಾಕೇಜನ್ನು ಇಂಡಿಯಾನಾ ಆಸ್ಪತ್ರೆ ಹಾಗೂ ಹೃದಯಾಲಯವು ಘೋಷಿಸಿದೆ ಎಂದರು.