ಬೆಂಗಳೂರು, ಸೆ.29: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ಜೈಲೂಟ ತಿರಸ್ಕರಿಸುತ್ತಿರುವುದು ಜೈಲು ಅಧಿಕಾರಿಗಳ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶನಿವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಜೆ.ಜಯಲಲಿತಾ, ಭಾನುವಾರ ಬೆಳಗ್ಗೆ ಜೈಲು ಅಧಿಕಾರಿಗಳು ಪೂರೈಸಿದ ಪಲಾವ್ ಅನ್ನು ನಿರಾಕರಿಸಿ, ತಮ್ಮ ಆಪ್ತ ಸಹಾಯಕ ವೀರ ಪೆರುಮಾಳ್ ತಂದುಕೊಟ್ಟಿದ್ದ ಇಡ್ಲಿ-ಸಾಂಬಾರ್ ಮಾತ್ರ ಸೇವಿಸಿದ್ದರು. ನಂತರ ರಾತ್ರಿ ಪೂರೈಸಿದ ಊಟವನ್ನು ನಿರಾಕರಿಸಿ ಫಲಾಹಾರಕ್ಕೆ ಮೊರೆ ಹೋಗಿದ್ದರು. ಜೆ.ಜಯಲಲಿತಾ ಅವರು ಬೆನ್ನು ನೋವು, ರಕ್ತದೊತ್ತಡ , ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅವರು ನಿಯಮಿತವಾಗಿ ಆಹಾರ ಸೇವಿಸುವುದು ಅನಿವಾರ್ಯವಾಗಿದೆ.
ಒಂದೊಮ್ಮೆ ನಿಯಮಿತವಾಗಿ ಆಹಾರ ಸೇವನೆ ಮಾಡದಿದ್ದರೆ, ಅವರ ಆರೋಗ್ಯದಲ್ಲಿ ಏರುಪೇರಾಗುವ ಎಲ್ಲ ಸಾಧ್ಯತೆಗಳಿದ್ದು, ಅವರು ಜೈಲೂಟ ನಿರಾಕರಿಸುತ್ತಿರುವುದರಿಂದ ಜೈಲು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
ಈ ನಡುವೆ ಜಯಲಲಿತಾ ಅವರ ಆಪ್ತರು ಮನೆಯ ಊಟವನ್ನು ಜಯಲಲಿತಾಗೆ ಪೂರೈಸಲು ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದು, ಜೈಲು ನಿಯಮಾವಳಿಗಳ ಪ್ರಕಾರ ಅದಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಜೈಲು ಅಧಿಕಾರಿಗಳು ಅವರ ಮನವಿಯನ್ನು ನಯವಾಗಿ ತಿರಸ್ಕರಿಸುತ್ತಿದ್ದಾರೆ. ಆದರೆ, ಜಯಲಲಿತಾ ಅವರು ಜೈಲೂಟ ನಿರಾಕರಿಸಿ, ಫಲಾಹಾರದ ಮೊರೆ ಹೋಗಿರುವುದರಿಂದ ಜೈಲು ಅಧಿಕಾರಿಗಳು ಹೊಸದೊಂದು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಜಯಲಲಿತಾ ಅವರು ಗಣ್ಯ ಖೈದಿಯಾಗಿದ್ದು, ಅವರ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಜೈಲು ಅಧಿಕಾರಿಗಳ ಮೇಲಿದ್ದು, ಜಯಲಲಿತಾ ಅವರು ಜೈಲೂಟ ನಿರಾಕರಿಸುತ್ತಿರುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.
ಜಯಲಲಿತಾ ಅವರ ಭದ್ರತೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ಈಗಾಗಲೇ ವಿಶೇಷ ಕೊಠಡಿಗೆ ವರ್ಗಾಯಿಸಲಾಗಿದ್ದು, ಅವರೊಂದಿಗೆ ಸಹಖೈದಿಗಳಾದ ಶಶಿಕಲಾ ಹಾಗೂ ಇಳವರಸಿ ಅವರನ್ನೂ ಅದೇ ಕೊಠಡಿಯಲ್ಲಿ ಇಡಲಾಗಿದೆ. ಈ ನಡುವೆ ತಮಿಳುನಾಡಿನ ರಾಜ್ಯಸಭಾ ಸದಸ್ಯೆ ಶಶಿಕಲಾ ಅವರು ಜಯಲಲಿತಾ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಬಂದೀಖಾನೆಗೆ ಇಂದು ದೌಡಾಯಿಸಿ ಬಂದರು. ಆದರೆ, ಜಯಲಲಿತಾ ಅವರನ್ನು ಭೇಟಿ ಮಾಡಲು ಅನುಮತಿ ಪತ್ರ ಇಲ್ಲದ ಕಾರಣ ಜೈಲು ಅಧಿಕಾರಿಗಳು ಜಯಲಲಿತಾ ಭೇಟಿಗೆ ಅವಕಾಶ ಕೊಡಲು ನಿರಾಕರಿಸಿದರು.
ಈ ಸಂದರ್ಭದಲ್ಲಿ ಕ್ರೋಧಗೊಂಡ ಶಶಿಕಲಾ, ಜೈಲು ಅಧಿಕಾರಿಗಳೊಂದಿಗೆ ವಾಗ್ಯುದ್ಧಕ್ಕೆ ಇಳಿದರು. ಕೂಡಲೇ ಮಧ್ಯಪ್ರವೇಶಿಸಿದ ಹಿರಿಯ ಪೆÇಲೀಸ್ ಅಧಿಕಾರಿಗಳು, ಅನುಮತಿ ಪತ್ರ ಇಲ್ಲದೆ ಜಯಲಲಿತಾ ಅವರ ಭೇಟಿಗೆ ಅವಕಾಶ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಅವರು ಗತ್ಯಂತರವಿಲ್ಲದೆ ತಮಿಳುನಾಡಿಗೆ ಮರಳಿದರು.