ಉಳ್ಳಾಲ, ಸೆ. 30: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಹೃದಯ ಭಾಗದಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ ಹೆಸರಾಂತ ಹಿಂದುಸ್ಥಾನ್ ಬಿಲ್ಡರ್ಸ್ ಗೆ ಸೇರಿದ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದ ಕಚೇರಿಯ ಗಾಜುಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೈಕ್ನಲ್ಲಿ ಬಂದ ಅಪರಿಚಿತರು ಮರದ ತುಂಡುಗಳಿಂದ ಕಚೇರಿಯ ಎದುರು ಭಾಗದ ಗ್ಲಾಸ್ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಘಟನೆ ನಡೆದಾಗ ಒಬ್ಬಾತ ಬೈಕ್ನಲ್ಲೇ ಕುಳಿತುಕೊಂಡಿದ್ದು, ಇಬ್ಬರು ಮರದ ತುಂಡುಗಳಿಂದ ಗ್ಲಾಸ್ಗಳನ್ನು ಪುಡಿ ಮಾಡಿ ಕೃತ್ಯವೆಸಗಿದ್ದಾರೆ. ಧ್ವಂಸ ಗೊಳಿಸಿದ ಕ್ಷಣ ಮಾತ್ರದಲ್ಲಿ ಮೂವರು ಅಪರಿಚಿತರು ತಾವು ಬಂದಿದ್ದ ಬಿಳಿ ಬಣ್ಣದ ಬೈಕ್ನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಫ್ತಾ ವಸೂಲಿಗಾಗಿ ದುಷ್ಕರ್ಮಿಗಳು ಈ ದಾಂಧಲೆ ನಡೆಸಿರಬೇಕೆಂದು ಶಂಕಿಸಲಾಗಿದೆ.ಆದರೆ ಪ್ರಕರಣದ ಬಗ್ಗೆ ಸ್ಪಷ್ಟ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.