ಮೈಸೂರು, ಅ.1: ವಿಜಯದಶಮಿ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿ ಹಿನ್ನಲೆಯಲ್ಲಿ ಅರ್ಜುನ ನೇತೃತ್ವದ 11 ಆನೆಗಳು ಇಂದು ವಿಶೇಷ ತಾಲೀಮು ನಡೆಸಿದವು. ಅರಮನೆಯ ವರಹಾಸ್ವಾಮಿ ದ್ವಾರದಿಂದ ಬಲರಾಮದ್ವಾರದವರೆಗೂ ತಾಲೀಮು ನಡೆಸಿದ ಗಜಪಡೆ ನಾಯಕ ಅರ್ಜುನ ಮರದ ಹೌಡ ಹೊತ್ತು ಸಾಗಿದರೆ ಅದರ ಅಕ್ಕಪಕ್ಕ ಇತರೆ ಆನೆಗಳು ಸಾಥ್ ನೀಡಿದವು. ಎರಡು ಬಾರಿ ರಿಹರ್ಸಲ್ ಮಾಡಿ ಎಲ್ಲೆಲ್ಲಿ ನಿಲ್ಲಬೇಕು. ಎಂಬೆಲ್ಲ ತರಬೇತಿ ನೀಡಲಾಯಿತು. ಗಜಪಡೆಯ ಗಜೇಂದ್ರ ಮತ್ತು ಶ್ರೀರಾಮ ಅರಮನೆ ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದರೆ, ವಿಕ್ರಮ ಆನೆ ಚಾಮರಾಜನಗರದಲ್ಲಿ ನಡೆಯುತ್ತಿರುವ ವಿಶೇಷ ದಸರಾಕ್ಕೆ ತೆರಳಿದ್ದರಿಂದ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ. ಇದೇ ವೇಳೆ ವಿವಿಧ ಪೊಲೀಸ್ಪಡೆಗಳು ಪೆರೇಡ್ ನಡೆಸಿ ಡಿಸಿಪಿ ಶಿವಣ್ಣ ಅವರಿಗೆ ಗೌರವ ವಂದನೆ ಸಲ್ಲಿಸಿದವು.
ಅರಮನೆ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆ ಬಳಿ ಬಂದು ಆನೆಗಳು ಹಾಗೂ ಪೊಲೀಸ್ ಪಡೆ ಗೌರವ ವಂದನೆ ಸಲ್ಲಿಸಿ ಮುನ್ನಡೆದವು.
ವಿಶೇಷ ಆಸನ ವ್ಯವಸ್ಥೆ: ವಿಜಯದಶಮಿ ಅಂಗವಾಗಿ ಅರಮನೆ ಆವರಣಧಲ್ಲಿ ಗೋಲ್ಡ್ ಕಾರ್ಡ್ ಪಡೆದವರು ಗಣ್ಯರು, ಪಾಸ್ ಹೊಂದಿರುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಎರಡು ದಿನಗಳಿಂದ ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು ನಾಳೆ ವೇಳೆಗೆ ಪೂರ್ಣಗೊಳ್ಳಲಿದೆ. ಗೋಲ್ಡ್ ಕಾರ್ಡ್ ಪಡೆದವರಿಗೆ ಅತಿ ಸಮೀಪದಿಂದ ಜಂಬೂ ಸವಾರಿ ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ರಾಜಕಾರಣಿಗಳು ಮತ್ತು ಅವರ ಕುಟುಂಬ ವಿದೇಶಿಗರಿಗೆ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ.