ಕರ್ನಾಟಕ

ಪುನಃ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ : ಇನ್ನೂ 5 ದಿನ ಜಯಾಗೆ ಜೈಲೇ ಗತಿ

Pinterest LinkedIn Tumblr

jayalalitha-in-jail

ಬೆಂಗಳೂರು, ಅ.1: ಆಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪುನಃ ಸೋಮವಾರಕ್ಕೆ ಮುಂದೂಡಿದೆ. ಇದರಿಂದಾಗಿ ಜಯಲಲಿತಾ ಮತ್ತು ಅವರ ಆಪ್ತರು ದಸರಾ ಹಬ್ಬವನ್ನು ಪರಪ್ಪನ ಅಗ್ರಹಾರದಲ್ಲೇ ಆಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಜಯಲಲಿತಾ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಮೇಲ್ಮನವಿಯನ್ನು ಇಂದು ರಜಾಕಾಲದ ವಿಶೇಷ ಪೀಠ ನ್ಯಾಯಾಲಯದ ನ್ಯಾಯಮೂರ್ತಿ ರತ್ನಕಲಾ ಅವರು ಕೈಗೆತ್ತಿಕೊಂಡರು. ಅರ್ಜಿಯ ಸಂಪೂರ್ಣ ಪರಿಶೀಲನೆ ನಡೆಯಬೇಕಾದ ಅಗತ್ಯವಿದೆ. ಹೀಗಾಗಿ ಇದನ್ನು ರಜಾ ಕಾಲ ಪೀಠದ ನ್ಯಾಯಾಲಯದಿಂದ ವಿಚಾರಣೆ ನಡೆಸುವ ಬದಲು ಸಾಮಾನ್ಯ ಪೀಠದಿಂದ ನಡೆಸಬೇಕೆಂದು ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿದರು.

ಸೋಮವಾರ ಬಕ್ರೀದ್ ಹಬ್ಬ ಇರುವುದರಿಂದ ನ್ಯಾಯಾಲಯಕ್ಕೆ ಈವರೆಗೂ ರಜೆ ಘೋಷಣೆಯಾಗಿಲ್ಲ. ಒಂದು ವೇಳೆ ಅಂದು ನ್ಯಾಯಾಲಯಕ್ಕೆ ರಜೆ ಘೋಷಣೆಯಾದರೆ ಮಂಗಳವಾರ ಅರ್ಜಿ ವಿಚಾರಣೆ ನಡೆಯಲಿದೆ. ಕೇವಲ 10 ನಿಮಿಷದೊಳಗೆ ಅರ್ಜಿ ವಿಚಾರಣೆಯನ್ನು ಮುಗಿಸಿದ ನ್ಯಾಯಮೂರ್ತಿ ರತ್ನಕಲಾ ಅವರು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ ಎಂಬ ಮೂಲ ಪ್ರಶ್ನೆಯನ್ನು ಮುಂದಿಟ್ಟರು. ಇದಕ್ಕೆ ಆಕ್ಷೇಪವ್ಯಕ್ತಪಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಭವಾನಿಸಿಂಗ್ ಅವರು ರಜಾಕಾಲ ಪೀಠದ ನ್ಯಾಯಾಲಯದಲ್ಲಿ ಪ್ರಮುಖ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ. ಇದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದರು.

ಆದರೆ ಇದಕ್ಕೆ ಜಯಲಲಿತಾ ಪರ ವಕೀಲರಾದ ರಾಮ್‍ಜೆಠ್ಮಲಾನಿ ಅವರು ಈ ಹಿಂದೆ ಪ್ರಮುಖ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ತಮ್ಮ ಕಕ್ಷಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಕೋರಿದರು.ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಈ ಸಂದರ್ಭದಲ್ಲಿ ರಜಾಕಾಲ ಪೀಠದಿಂದ ವಿಚಾರಣೆ ನಡೆಸುವುದು ಸೂಕ್ತವಲ್ಲ. ಸಾಮಾನ್ಯ ಪೀಠದಿಂದಲೇ ವಿಚಾರಣೆ ನಡೆಸಬೇಕೆಂದು ಅರ್ಜಿಯನ್ನು ಮುಂದೂಡಿದರು.

ಆಕ್ಷೇಪಣೆಗೆ ಸಿದ್ಧ: ಅರ್ಜಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಾರಿ ವಿಶೇಷ ಅಭಿಯೋಜಕ ಭವಾನಿ ಸಿಂಗ್ ಅವರು ನ್ಯಾಯಾಲಯಕ್ಕೆ ನಾನು ಆಕ್ಷೇಪಣೆ ಸಲ್ಲಿಸಲು ಸಿದ್ಧನಿದ್ದೇನೆ. ಜಯಲಲಿತಾ ಅವರಿಗೆ ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ಸರ್ಕಾರ ನನ್ನನ್ನೇ ಮುಂದುವರೆಸಲು ತೀರ್ಮಾನಿಸಿದ್ದು, ಜಯಲಲಿತಾಗೆ ಜಾಮೀನು ನೀಡದಂತೆ ವಾದ ಮಂಡಿಸಲಾಗುವುದು. ರಜಾಪೀಠದಲ್ಲಿ ವಿಚಾರಣೆ ನಡೆಸಬಾರದೆಂದು ಮನವರಿಕೆ ಮಾಡಿಕೊಟ್ಟಿದ್ದನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದು ಹೇಳಿದರು. ನಿನ್ನೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ನ್ಯಾಯಮೂರ್ತಿ ರತ್ನಕಲಾ ನೇತೃತ್ವದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಮೊದಲು ಅಕ್ಟೋಬರ್ 5 ರ ಸೋಮವಾರಕ್ಕೆ ಮುಂದೂಡಿತ್ತಾದರೂ ಮಧ್ಯಾಹ್ನದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಯಾ ಪ್ರಕರಣವನ್ನು ಇಂದಿಗೆ ನಿಗದಿ ಪಡಿಸಲಾಗಿತ್ತು.

ಸರ್ಕಾರದ ಪರವಾಗಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಿಲ್ಲ.ಈ ಕುರಿತು ಅಧಿಸೂಚನೆ ಹೊರಡಿಸಿಲ.್ಲಸರ್ಕಾರಿ ವಕೀಲರೇ ನೇಮಕಗೊಂಡಿಲ್ಲ ಎಂದರೆ ವಿಚಾರಣೆ ಮಾಡುವುದು ಹೇಗೆ?ಎಂದು ಪ್ರಶ್ನಿಸಿ ನ್ಯಾಯಪೀಠ ಮೊದಲು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು. ಆದರೆ ಸರ್ಕಾರದ ಪರ ವಕಾಲತು ವಹಿಸಲು ನ್ಯಾಯವಾದಿ ಭವಾನಿಸಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಜಯಲಲಿತಾ ಪರ ವಕೀಲ ರಾಮ್‍ಜೇಠ್ಮಲಾನಿ ಮತ್ತಿತರ ಅಪರಾಧಿಗಳ ಪರ ವಕೀಲರು ನ್ಯಾಯಾಲಯದ ರಿಜಿಸ್ಟ್ರಾರ್ ದೇಸಾಯಿ ಅವರನ್ನು ಸಂಪರ್ಕಿಸಿದರು.ಸರ್ಕಾರ ತನ್ನ ಪರವಾಗಿ ವಕೀಲರನ್ನು ನೇಮಕ ಮಾಡಿದೆ ಎಂಬ ವಿವರವನ್ನು ರಿಜಿಸ್ಟ್ರಾರ್ ಅವರು ಮುಖ್ಯ ನ್ಯಾಯಮೂರ್ತಿ ವಘೇಲಾ ಅವರಿಗೆ ದೂರವಾಣಿಯ ಮೂಲಕ ತಿಳಿಸಿದರು. ನಂತರ ಅವರ ಆದೇಶದ ಮೇರೆಗೆ ಹೈಕೋರ್ಟ್‍ನ ರಿಜಿಸ್ಟ್ರಾರ್ ಇಂದಿಗೆ ವಿಚಾರಣೆಯನ್ನು ನಿಗದಿಗೊಳಿಸಿದ್ದರು.

ಈ ಮಧ್ಯೆ ಜಯಲಲಿತಾ ಅವರ ಜತೆ ಜೈಲು ಸೇರಿರುವ ಶಶಿಕಲಾ ಅವರ ಪರವಾಗಿ ನ್ಯಾಯವಾದಿ ವಿದ್ಯಾಸಾಗರ್ ಅವರು ವಕಾಲತ್ತು ಮಾಡಿದರಾದರೆ, ಸುಧಾಕರ್ ಅವರ ಪರವಾಗಿ ಮೂರ್ತಿರಾವ್ ಹಾಗೂ ಇಳವರಸಿ ಪರವಾಗಿ ಹಶ್ಮತ್ ಪಾಷಾ ಅವರು ವಾದ ಮಾಡಲು ಹಾಜರಾಗಿದ್ದರು.

ಅಮ್ಮ ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು, ಅ.1: ಮತ್ತದೇ ದುಃಖ, ದುಗುಡ, ದುಮ್ಮಾನ, ಒಳಗೊಳಗೇ ನೋವು, ಸಂಕಟ… ಹೇಳಿಕೊಳ್ಳಲಾಗದೆ ಕೈ ಕೈ ಹಿಚುಕಿಕೊಂಡರು. ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‍ನಲ್ಲಿ ಕಂಡು ಬಂದ ದೃಶ್ಯಾವಳಿಗಳು. ಇಂದು ಬೆಳಗ್ಗೆ ಅರ್ಜಿ ವಿಚಾರಣೆ 10 ಗಂಟೆಗೆ ನಡೆಯಲಿದೆ ಎಂಬ ಹಿನ್ನೆಲೆಯಲ್ಲಿ ಹೈಕೋರ್ಟ್ ಆವರಣದ ಸುತ್ತ ಎಲ್ಲಿ ನೋಡಿದರೂ ವಕೀಲರು, ಅಮ್ಮ ಬೆಂಬಲಿಗರು, ದೌಡಾಯಿಸಿದರು.

ಪ್ರತಿಯೊಬ್ಬರ ಬಾಯಲ್ಲೂ ಇಂದು ಜಯಲಲಿತಾಗೆ ಜಾಮೀನು ಸಿಕ್ಕೇಸಿಗುತ್ತದೆ, ಸಂಜೆಯೊಳಗೆ ಅಮ್ಮ ಬಿಡುಗಡೆಯಾಗಿ ಅವರ ದರ್ಶನ ಭಾಗ್ಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ತಮಿಳುನಾಡಿನಿಂದ ಭಾರೀ ಸಂಖ್ಯೆಯ ವಕೀಲರು ಹೈಕೋರ್ಟ್ ಆವರಣಕ್ಕೆ ದಾಂಗುಡಿ ಇಟ್ಟಿದ್ದರು. ಜೊತೆಗೆ ಅಮ್ಮ ಬೆಂಬಲಿಗರೂ ಕೂಡ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಬೆಳಗ್ಗೆ 10 ಗಂಟೆಗೆ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಒಂದು ಕ್ಷಣ ಇಡೀ ಹೈಕೋರ್ಟ್ ಆವರಣದಲ್ಲಿ ಕುತೂಹಲ ಕೆರಳಿಸಿತ್ತು. ಕೇವಲ 10 ನಿಮಿಷದಲ್ಲಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ರತ್ನಕಲಾ ಅವರು ಸೋಮವಾರಕ್ಕೆ ವಿಚಾರಣೆ ಮುಂದೂಡುತ್ತಿದ್ದಂತೆ ಎಲ್ಲೆಡೆ ನೀರವ ಮೌನ ಆವರಿಸಿತು. ರಜಾ ಕಾಲದ ಪೀಠದಲ್ಲಿ ಅರ್ಜಿಯನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ, ಇದನ್ನು ಸಾಮಾನ್ಯ ಪೀಠದಲ್ಲಿ ನಡೆಸುವುದು ಸೂಕ್ತ ಎಂದು ನ್ಯಾಯಾಧೀಶರು ಅರ್ಜಿಯನ್ನು ಮುಂದೂಡಿದ ಸುದ್ದಿ ಹಬ್ಬುತ್ತಿದ್ದಂತೆ ಎಲ್ಲರ ಮೊಗದಲ್ಲೂ ನಿರಾಸೆಭಾವ ಎದ್ದು ಕಾಣುತ್ತಿತ್ತು.

ನ್ಯಾಯಾಂಗ ವಿರುದ್ಧ ಮಾತನಾಡಿದರೆ, ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ಕಾರಣಕ್ಕಾಗಿ ಯಾರೊಬ್ಬರೂ ತಮ್ಮ ನೋವನ್ನು ವ್ಯಕ್ತಪಡಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಎಲ್ಲರ ಬಾಯಲ್ಲೂ ಗೊಣಗಾಟದ ಮಾತುಗಳೇ ಕೇಳುತ್ತಿದ್ದವು. ಅಮ್ಮನಿಗೆ ಇಂದು ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿದ್ದು, ನಮಗೆ ನಿರಾಸೆ ತಂದಿದೆ ಎಂದು ಎಐಎಡಿಎಂಕೆ ಕಾರ್ಯಕರ್ತನೊಬ್ಬ ನೋವು ತೋಡಿಕೊಂಡ. ಇದೇ ರೀತಿ ಹೈಕೋರ್ಟ್ ಆವರಣದಲ್ಲಿ ಜಮಾಯಿಸಿದ್ದ ವಕೀಲರು ಮತ್ತು ಬೆಂಬಲಿಗರಲ್ಲೂ ಇದೇ ಮನಸ್ಥಿತಿ ಇತ್ತು. ಇತ್ತ ಪರಪ್ಪನ ಅಗ್ರಹಾರದಲ್ಲೂ ವಿಚಾರಣೆ ಮುಂದೂಡಿರುವುದನ್ನು ವಿರೋಧಿಸಿ ಎಐಎಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಭಾರೀ ಭದ್ರತೆ: ಜಯಲಲಿತಾ ಅರ್ಜಿ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಸುತ್ತಮುತ್ತ ಭಾರೀ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಆವರಣದೊಳಗೆ ಪ್ರವೇಶಿಸುವವರನ್ನು ಪೆÇಲೀಸರು ತಪಾಸಣೆ ನಡೆಸಿ ಒಳ ಬಿಡುತ್ತಿದ್ದರು. ವಕೀಲರು ಕೂಡ ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ತೋರಿಸಿ ಒಳ ಹೋಗಬೇಕಾಗಿತ್ತು. ಮುನ್ನಚ್ಚರಿಕಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆವರಣ ಸುತ್ತಮುತ್ತ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರ ಪೆÇಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆಗಮಿಸಿ ಭದ್ರತಾ ಉಸ್ತುವಾರಿ ಪರಿಶೀಲಿಸಿದರು.

ಮಾಧ್ಯಮಗಳ ದಂಡು: ಜಯಲಲಿತಾ ಅರ್ಜಿ ವಿಚಾರಣೆ ನಡೆದ ಹಿನ್ನೆಲೆಯಲ್ಲಿ ಹೈಕೋರ್ಟ್ ಆವರಣದಲ್ಲಿ ಇಂದೂ ಕೂಡ ಮಾಧ್ಯಮಗಳ ದಂಡೇ ಆಗಮಿಸಿತ್ತು. ಅದರಲ್ಲೂ ದೃಶ್ಯ ಮಾಧ್ಯಮಗಳು ನೇರಪ್ರಸಾರ ಮಾಡಲು ಓಬಿ ವ್ಯಾನ್‍ಗಳನ್ನು ಸಾಲುಗಟ್ಟಿ ನಿಲ್ಲಿಸಿದ್ದರು.

ಯಾವಾಗ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಮಾಧ್ಯಮದವರೂ ಕೂಡ ಹತಾಶೆಯಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಯಲ್ಲಿ ಹಿಂತಿರುಗಿದರು.

1 Comment

Write A Comment