ಗೋರಖ್ಪುರ್, ಅ.1: ಎರಡು ಪ್ರಯಾಣಿಕರ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು 14 ಮಂದಿ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಾಯಾಳುಗಳ ಪೈಕಿ 12 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಬಹುದೆಂಬ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖ್ನೋದಿಂದ 270 ಕಿ.ಮೀ.ದೂರದಲ್ಲಿರುವ ಕೋರಖ್ಪುರ ಪಟ್ಟಣದ ಬಳಿ ನಿನ್ನೆ ರಾತ್ರಿ 10.45ರ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ವಾರಣಾಸಿಯಿಂದ ಗೋರಖ್ಪುರಕ್ಕೆ ಆಗಮಿಸುತ್ತಿದ್ದ ಕ್ರಿಷಕ್ ಎಕ್ಸ್ಪ್ರೆಸ್ ರೈಲು ಬರೌನಿ ಎಕ್ಸ್ಪ್ರೆಸ್ ರೈಲು ಹಿಂದಿನಿಂದ ಅತ್ಯಂತ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಕ್ಷಿಷಕ್ ಎಕ್ಸ್ಪ್ರೆಸ್ನ ಮೂರು ಬೋಗಿಗಳು ಹಾರಿ ಹಳಿಯಿಂದ ಕೆಳಕ್ಕೆ ಬಿದ್ದವು. ಇದರಿಂದಾಗಿ ಈ ಸಾವುನೋವುಗಳು ಸಂಭವಿಸಿವೆ. ಸಿಗ್ನಲ್ಗಳನ್ನು ಗಮನಿಸದೆ ರೈಲು ಓಡಿಸಿದ ಕ್ರಿಷಕ್ ಎಕ್ಸ್ಪ್ರೆಸ್ನ ಚಾಲಕರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ವಕ್ತಾರ ಅನಿಲ್ ಸಕ್ಸೇನಾ ಹೇಳಿದ್ದಾರೆ. ಪರಿಹಾರ ಕಾರ್ಯಾಚರಣೆ ಭರದಿಂದ ನಡೆದಿದ್ದು, ಎಲ್ಲಾ ಗಾಯಾಳುಗಳನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಳಗೆ ಬಿದ್ದ ಬೋಗಿಗಳನ್ನು ಪ್ರತ್ಯೇಕಿಸಲಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಗಳು, ಪೆÇಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಸಾರ್ವಜನಿಕರು ಕೂಡ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಗೋರಖ್ಪುರ-ವಾರಣಾಸಿ ನಡುವೆ 7 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಪಘಾತಕ್ಕೀಡಾಗಿರುವ ರೈಲುಗಳ ಪ್ರಯಾಣಿಕರನ್ನು ಅವರವರ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ:
ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ಪರಿಹಾರ, ಮೃತರ ಕುಟುಂಬಗಳಿಗೆ ತಲಾ 50 ಸಾವಿರ ರೂ. ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ರೂ. ಪರಿಹಾರ ಘೋಷಿಸಿದೆ. ಪ್ರಯಾಣಿಕರ ಬಂಧು ಬಳಗದವರಿಗಾಗಿ ಮಾಹಿತಿ ಪಡೆಯಲು ಇಲಾಖೆ ಸಹಾಯವಾಣಿ ತೆರೆದಿದ್ದು, ದೂ.ಸಂ. ಲಕ್ನೋ-05222233042. ಗೋರಖ್ಪುರ-05512203265, ಛಾಪ್ರಾ-09771443941 ಸಂಪರ್ಕಿಸಬಹುದು.