ಉಡುಪಿ: ಹತ್ತು ದಿನಗಳ ಹಿಂದೆ ವೃದ್ಧರೊಬ್ಬರು ಮೃತಪಟ್ಟಿದ್ದು, ಅದು ಅವರ ಮಗನೇ ಕೊಲೆ ಮಾಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾರ್ಶ್ವವಾಯು ಪೀಡಿತರಾಗಿ ಮನೆಯಲ್ಲಿದ್ದ ವಾಸು ನಾಯ್ಕ (75) ಮೃತಪಟ್ಟವರು. ಅವರ ಆರೈಕೆ ಮಾಡಲಾಗದೆ ಮಗ ಪ್ರಕಾಶನೇ ಕೊಲೆ ಮಾಡಿ ಶವ ಹೂತು ಹಾಕಿದ್ದಾನೆ ಎಂದು ಚೇರ್ಕಾಡಿ ಗ್ರಾಮದ ಕನ್ನಾರು ಪ್ರಸನ್ನಿ ಎಂಬಾಕೆ ದೂರು ನೀಡಿದ್ದಾರೆ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಸು ನಾಯ್ಕ ಅವರ ನಾಲ್ಕನೇ ಮಗನಾದ ಪ್ರಕಾಶ ಮತ್ತು ತಂದೆ ವಾಸು ನಾಯ್ಕರ ಪತ್ನಿಯ ಮರಣಾನಂತರ ಚೇರ್ಕಾಡಿಯ ಈ ಮನೆಯಲ್ಲಿ ವಾಸಿಸುತ್ತಿದ್ದರು. ವಿವಾಹಿತನಾದ ಪ್ರಕಾಶನ ಪತ್ನಿ ತವರಿಗೆ ಹೋಗಿದ್ದ ವೇಳೆ ಪ್ರಕಾಶ ಮತ್ತು ತಂದೆ ವಾಸು ನಾಯ್ಕ ಇಬ್ಬರೇ ಇದ್ದರು ಎನ್ನಲಾಗಿದೆ.
ಅ.2 ಗುರುವಾರ (ಇಂದು) ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸುವ ಬಗ್ಗೆ ಮಾಹಿತಿಯಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್, ಠಾಣಾ ಉಪನಿರೀಕ್ಷಕ ಗಿರೀಶ್ ಕುಮಾರ್ ಎಸ್. ಮತ್ತಿತರರು ಭೇಟಿ ನೀಡಿದ್ದಾರೆ.
ಈ ಕುರಿತು ಮೃತರ ಪುತ್ರಿ ಪ್ರಸನ್ನಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.