ಕರಾವಳಿ

ವಿದ್ಯಾರ್ಥಿನಿಗೆ ಲವ್ ಲೆಟರ್ ಕೊಟ್ಟ ಯು.ಪಿ. ಮೂಲದ ಯುವಕರು ಪೊಲೀಸ್‌ ಅತಿಥಿ..!

Pinterest LinkedIn Tumblr

arrest

ಉಡುಪಿ: ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಲವ್‌ ಲೆಟರ್ ನೀಡಿದ ಉತ್ತರ ಭಾರತ ಮೂಲದ ಯುವಕರಿಬ್ಬರಲ್ಲಿ ಓರ್ವ ಸಾರ್ವಜನಿಕರಿಂದ ಗೂಸ ತಿಂದು ಇನ್ನೋರ್ವ ಪೊಲೀಸರ ಅತಿಥಿಯಾದ ಘಟನೆ ಕಟಪಾಡಿಯಲ್ಲಿ ಬುಧವಾರ ನಡೆದಿದೆ.

ಕಟಪಾಡಿ ಅಗ್ರಹಾರ  ರಸ್ತೆ ಬಳಿಯಲ್ಲಿ ಈ ಘಟನೆ ನಡೆದಿದ್ದು, ಮರಕೆಲಸ ಮಾಡುವ ಉತ್ತರ ಪ್ರದೇಶ ಮೂಲದ ಸಾಜಬ್‌(24) ಮತ್ತು ಶೊಹೇಬ್‌(21) ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಉಡುಪಿಯ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯ ಮನೆ ಪಕ್ಕದಲ್ಲಿ ಬಾಡಿಗೆಗಿರುವ ಯುವಕರು, ಆಕೆ ಶಾಲೆಗೆ ಹೋಗುವ ಟೆಂಪೋಗೆ ಹತ್ತಿ ಕುಳಿತುಕೊಳ್ಳುತ್ತಿದ್ದಂತೆಯೇ ತಮ್ಮ ಕೈಯ್ಯಲ್ಲಿದ್ದ ಲೆಟರ್‌ನ್ನು ಯುವತಿಗೆ ನೀಡಲು ಮುಂದಾಗಿದ್ದಾರೆ, ಇದನ್ನು ಗಮನಿಸಿದ ಶಾಲಾ ವಾಹನ ಚಾಲಕ ಸಾರ್ವಜನಿಕರಿಗೆ ತಿಳಿಸಿದ್ದು ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಓರ್ವ ತಪ್ಪಿಸಿಕೊಂಡಿದ್ದು ಇನ್ನೊಬ್ಬನಿಗೆ ಸಾರ್ವಜನಿಕರು ತಪರಾಕಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಗೂಸಾ ತಿಂದ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೋರ್ವ ಯುವಕನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯ ತಾಯಿ ನೀಡಿರುವ ದೂರಿನಂತೆ ಇಬ್ಬರನ್ನೂ ವಶಪಡಿಸಿಕೊಂಡಿರುವ ಪೊಲೀಸರು ಫೋಕ್ಸೋ ಆಕ್ಟ್‌ನಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Write A Comment