ಕುಂದಾಪುರ: ಹಬ್ಬ-ಹರಿದಿನಗಳ ಆಚರಣೆಗೆ ಸರಕಾರ ಮಹತ್ವ ನೀಡುತ್ತಿದ್ದು, ಇದರ ಜೊತೆಗೆ ಮಕ್ಕಳ ಶೈಕಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಹಿಂದುಳಿದ ವರ್ಗ,ಅರ್ಥಿಕ ದುರ್ಬಲರ ಅಭಿವೃದ್ಧಿಗಾಗಿ ನೀಡುವ ಅನುದಾನಗಳು ಅರ್ಹರಿಗೆ ದೊರಕದೆ ಶ್ರೀಮಂತರ ಕೈಸೇರುತ್ತಿದ್ದು ನಮ್ಮ ಆಡಳಿತ ವ್ಯವಸ್ಥೆಗೆ ಅಭಿವೃದ್ಧಿಬೇಕಿಲ್ಲ ಎಂದು ಶಾಸಕ, ಉದ್ಯಮಿ ಅಶೋಕ ಖೇಣಿ ಹೇಳಿದರು.
ಅವರು ಅ.೨ರಂದು ಕೋಟ ಕಾರಂತ ಕಲಾಭವನದಲ್ಲಿ, ಕೋಟತಟ್ಟು ಗ್ರಾ.ಪಂ, ಡಾ.ಶಿವರಾಮ ಕಾರಂತ ಟ್ರಸ್ಟ್ ಮೊದಲಾದ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಎರಡನೇ ದಿನದ ಕಿರು ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರಂತ ಹುಟ್ಟೂರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಎಲ್ಲಾ ಗ್ರಾ.ಪಂಗಳಿಗೆ ಆದರ್ಶವಾಗಿದ್ದು, ನನ್ನ ವಿಧಾನಸಭಾ ವ್ಯಾಪ್ತಿಯ ಪಂಚಾಯತ್ ಅಧಿಕಾರಿಗಳನ್ನು ಕೋಟಕ್ಕೆ ಅಧ್ಯಯನಕ್ಕೆ ಕಳುಹಿಸಿ ಅಲ್ಲಿಯೂ ಈ ರೀತಿಯ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಶೋಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನ, ಹಂಸಲೇಖ ದೇಸಿ ಕಾಲೇಜು, ಬೆಂಗಳೂರು, ಗೆಳೆಯರ ಬಳಗ ಯುವಕ ಸಂಘ (ರಿ) ದಾನಗುಂದು ಹಂದಟ್ಟು ಹಾಗೂ ವಿವೇಕ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಶ್ರೀ ರಾಮ ಪ್ರಸಾದ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ಕೋಟ, ಶ್ರೀ ಶಾಂಭವಿ ವಿದ್ಯಾದಾಯಿನಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕಿರು ನಾಟಕೋತ್ಸವ ನಡೆಯಿತು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರನ್ನು ಅಶೋಕ ಖೇಣಿ ಗೌರವಿಸಿದರು.
ಉಡುಪಿ ಸಹಾಯಕ ಜಿಲ್ಲಾಧಿಕಾರಿ ಕುಮಾರ್, ಸಾಹಿತಿ ಚಂದ್ರಶೇಖರ ಚಡಗ, ಸಾಹಿತಿ ಎ.ಎಸ್.ಎನ್ ಹೆಬ್ಬಾರ್, ಗ್ರಾ.ಪಂ ಸದಸ್ಯ ರಘು ತಿಂಗಳಾಯ, ಅಣ್ಣಪ್ಪ, ರೋಟರಿ ಕ್ಲಬ್ ಹಂಗಾರಕಟ್ಟೆ – ಸಾಸ್ತಾನ ಅಧ್ಯಕ್ಷ ಆನಂದ ಎಂ, ದಾನಗುಂದು ಗೆಳೆಯರ ಬಳಗ ಯುವಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಎಚ್, ವಿವೇಕ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವೆಂಕಟೇಶ್ ಉಡುಪ, ಕೋಟ ರಾಮಪ್ರಸಾದ್ ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ, ಶಾಂಭವೀ ಶಾಲೆ ಮುಖ್ಯ ಶಿಕ್ಷಕ ರಾಜಾರಾಮ್ ಐತಾಳ, ರಂಗ ಕಲಾವಿದ ನರಸಿಂಹ ಐತಾಳ, ವಾಣಿಶ್ರೀ ಅಶೋಕ ಐತಾಳ ಉಪಸ್ಥಿತರಿದ್ದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಜಯರಾಮ್ ಶೆಟ್ಟಿ ವಂದಿಸಿದರು.