ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವಮಿಯ ಚಂಡಿಕಾಯಾಗ ಹಾಗೂ ನವರಾತ್ರಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ರಾತ್ರಿ ಸಂಭ್ರಮದಿಂದ ಜರಗಿತು.
ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಾಹಣಾಧಿಕಾರಿ ಎಲ್.ಎಸ್. ಮಾರುತಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ದೇವಳದ ಉಪಕಾರ್ಯನಿರ್ವಾಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಆಡಳಿತ ಮಂಡಳಿಯ ಸದಸ್ಯರಾದ ರಾಮಚಂದ್ರ ಅಡಿಗ, ಸವಿತಾ ಯು. ದೇವಾಡಿಗ, ಶ್ರೀನಿವಾಸ ಕಲ್ಲೂರಾಯ, ಜಯಾನಂದ ಹೋಬಳಿದಾರ, ರಾಜೇಶ್ ಕೆ.ಎಂ., ಕಲ್ಪನಾ ಭಾಸ್ಕರ, ಅಣ್ಣಪ್ಪ ಖಾರ್ವಿ, ಡಾ| ಅತುಲ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗ್ಗಿನಿಂದ ಶ್ರೀ ಮೂಕಾಂಬಿಕಾ ಸಭಾಭವನದಿಂದ ಭಕ್ತರ ಸರದಿಯ ಸಾಲು ಆರಂಭಗೊಂಡಿದ್ದು ಸಂಜೆಯ ತನಕವು ದೇವಿ ದರ್ಶನಕ್ಕಾಗಿ ಆಗಮಿಸುತ್ತಿದ್ದ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.