ಕಾಂಚಿಪುರಂ, ಅ.8: ಕಲ್ಪಕಂ ಅಣುವಿದ್ಯುತ್ ಸ್ಥಾವರದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಸಿಬ್ಬಂದಿಯೊಬ್ಬರು ಬುಧವಾರ ತಮ್ಮ ಮೂವರು ಸಹೋದ್ಯೋಗಿಗಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಇನ್ನಿಬ್ಬರನ್ನು ಗಾಯಗೊಳಿಸಿದ್ದಾರೆ.
ಹೆಡ್‌ಕಾನ್ಸ್‌ಸ್ಟೇಬಲ್ ವಿಜಯ್ ಪ್ರತಾಪ್ ಸಿಂಗ್ (45) ಹತ್ಯೆ ಪ್ರಕರಣದ ಆರೋಪಿಯಾಗಿದ್ದಾರೆ. ತಮ್ಮ ಬಳಿ ಇದ್ದ 9ಎಂಎಂನ ಕಾರ್ಬೈನ್‌ನಿಂದ ಗುಂಡು ಹಾರಿಸಿ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಗಣೇಶನ್, ಹೆಡ್‌ಕಾನ್ಸ್‌ಸ್ಟೇಬಲ್‌ಗಳಾದ ಸುಬ್ಬುರಾಜ್ ಮತ್ತು ಮೋಹನ್‌ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ. ಕಲ್ಪಕಂ ಅಣುವಿದ್ಯುತ್ ಸ್ಥಾವರದ ಸಂಕೀರ್ಣದಿಂದ 10 ಕಿ.ಮೀ. ದೂರದಲ್ಲಿರುವ ಕಲ್ಪಕಂ ಟೌನ್‌ಶಿಪ್‌ನ ಸಿಐಎಸ್‌ಎಫ್ ಬ್ಯಾರಕ್‌ನಲ್ಲಿ ಈ ಘಟನೆ ನಡೆದಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೂ, ಕಲ್ಪಕಂ ಅಣುವಿದ್ಯುತ್ ಸ್ಥಾವರಕ್ಕೂ ಯಾವುದೇ ಸಂಬಂಧವಿಲ್ಲ. ಸ್ಥಾವರದಲ್ಲಿನ ಕಾರ್ಯಾಚರಣೆಗಳು ಎಂದಿನಂತೆ ನಡೆದಿವೆ ಎಂದು ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ.