ಮುಂಬೈ,ಅ.8: ಪಾಕಿಸ್ತಾನವು ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನೆಯು ತೀವ್ರ ವಾಗ್ದಾಳಿ ನಡೆಸಿದೆ. ನೆರೆಹೊರೆಯ ರಾಷ್ಟ್ರವು ಭಾರತದ ಮೇಲೆ ಎಸಗುತ್ತಿರುವಂತಹ ಅಕ್ರಮಗಳ ಬಗ್ಗೆ ಪ್ರಧಾನಿಯವರು ತನ್ನ ಗಮನವನ್ನು ಕೇಂದ್ರೀಕರಿಸಬೇಕೇ ಹೊರತು ಮಹಾರಾಷ್ಟ್ರದ ರಾಜಕೀಯದ ಮೇಲಲ್ಲ ಎಂದು ಅದು ಹೇಳಿದೆ.
ಗಡಿಯಾಚೆಗಿನಿಂದ ಪಾಕಿಸ್ತಾನವು ಗುಂಡು ಹಾಗೂ ಶೆಲ್ ದಾಳಿಗಳನ್ನು ನಡೆಸು ತ್ತಿರುವುದರ ವಿರುದ್ಧ ಸರಕಾರವು ಸಮರ್ಪಕ ಕ್ರಮ ಕೈಗೊಳ್ಳಲು ವಿಫಲವಾಗಿರುವುದೇ ಆ ರಾಷ್ಟ್ರಕ್ಕೆ ದಾಳಿ ಮುಂದುವರಿಕೆಗೆ ಉತ್ತೇಜನ ದೊರೆಯಲು ಕಾರಣ ಎಂದು ಶಿವಸೇನೆ ಹೇಳಿದೆ. ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ಒಬ್ಬನಿಗೆ 56 ಇಂಚುಗಳ ಎದೆಯು ಬೇಕಾಗಿಲ್ಲ ಎಂದಿರುವ ಶಿವಸೇನೆಯು ಇದಕ್ಕೆ ಬಲವಾದ ಇಚ್ಛಾಶಕ್ತಿಯ ಅಗತ್ಯತೆಯಿದೆ ಎಂದು ಮೋದಿಯನ್ನು ಕುಟುಕಿದೆ.
ಪಾಕಿಸ್ತಾನವು ಭಾರತದ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಧಾನಿಯವರು ಕೇಂದ್ರದಲ್ಲಿ ಕಾರ್ಯ ನಿರತರಾಗಿರಬೇಕಾಗಿರುವುದು ಅತ್ಯಂತ ಅನಿವಾರ್ಯ.ಇದು ಬಿಟ್ಟು ರಾಜ್ಯದಾದ್ಯಂತ ಚುನಾವಣಾ ರ್ಯಾಲಿಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ರಾಷ್ಟ್ರೀಯ ಭದ್ರತೆಯನ್ನು ಕಡೆಗಣಿಸುತ್ತಿರುವುದಕ್ಕೆ ಸಮಾನ ಎಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
‘‘ನಮಗೆ ಹಾಗೂ ಮೋದಿಜೀಯವರಿಗೆ ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಕೊನೆಗೆ ಮಾತುಕತೆ ನಡೆಸಬಹುದು. ನಮ್ಮ ನೆರೆಹೊರೆಯವರು ನಡೆಸುತ್ತಿರುವ ಅಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎನ್ನುವುದು ಸದ್ಯದ ಅತ್ಯಂತ ಮಹತ್ವದ ವಿಷಯ ’’ ಎಂದು ಮೋದಿಯವರ ದೀರ್ಘ ಚುನಾವಣಾ ಪ್ರಚಾರವನ್ನು ಉಲ್ಲೇಖಿಸುತ್ತ ಸಾಮ್ನಾದಲ್ಲಿ ಬರೆಯಲಾಗಿದೆ. ‘‘ ದೇಶದ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಪಾಕಿಸ್ತಾನದ ದುಂಡಾವರ್ತನೆಗೆ ಪಾಠ ಕಲಿಸಲು ನಿಮಗೆ 56 ಇಂಚುಗಳ ಎದೆ ಬೇಕೇ? ಅವರಿಗೆ ತಕ್ಕ ಪ್ರತಿಕ್ರಿಯೆ ನೀಡಲು ಬೇಕಾಗಿರುವುದು ಪ್ರಬಲವಾದ ಇಚ್ಛಾಶಕ್ತಿ ’’ ಎಂದು ಸಾಮ್ನಾದಲ್ಲಿದೆ.
ಭಾರತ ಸರಕಾರವು ಸಮರ್ಪಕ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ದೇಶದ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ. ಪಾಕಿಸ್ತಾನಿ ರೇಂಜರ್ಸ್ಗಳ ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳಲು ಗಡಿ ಪ್ರದೇಶಗಳ ಗ್ರಾಮಸ್ಥರು ಸುರಕ್ಷಿತ ಪ್ರದೇಶಗಳಿಗೆ ಗುಳೆ ಹೊರಟಿರುವುದು ಕನಿಕರ ಮೂಡಿಸುತ್ತಿದೆ ಎಂದು ಶಿವಸೇನೆ ಹೇಳಿದೆ. ‘‘ಪಾಕಿಸ್ತಾನಿಗಳ ಅಕ್ರಮದಿಂದ ನಮ್ಮವರ ಜೀವಕ್ಕೆ ಮಾತ್ರವೇ ಬೆದರಿಕೆಯಿರುವುದಲ್ಲ, ಅವರ ಮನೆಗಳು ಅಲ್ಲಿನ ಸೈನಿಕರ ದಾಳಿಯಿಂದಾಗಿ ನಾಶವಾಗಿದೆ. ಗಡಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಮನೆಗಳು ಸತತ ಗುಂಡಿನ ದಾಳಿಯಿಂದಾಗಿ ನಳುಗಿ ಹೋಗಿವೆ. ಸಾವಿನಿಂದ ಬಚಾವಾಗಲು ನಮ್ಮ ನಾಗರಿಕರು ಬಲುದೂರ ಪಲಾಯನಗೈಯುತ್ತಿದ್ದಾರೆ ಹಾಗೂ ರಾತ್ರಿಯ ಕತ್ತಲಿನಲ್ಲಿ ಪಾಕಿಸ್ತಾನಿಯರ ಹಿಡಿತಕ್ಕೆ ಸಿಕ್ಕಿ ಹಾಕಿಕೊಳ್ಳಲೂಬಹುದು. ಈ ರೀತಿಯಾಗಿ ಮನೆ ಬಿಡುವ ಪರಿಸ್ಥಿತಿ ಅವರಿಗೆ ಒದಗಿಬಂದಿರುವುದು ಕನಿಕರವುಂಟುಮಾಡಿದೆ’’ ಎಂದು ಸಾಮ್ನಾದಲ್ಲಿದೆ. ಅ.1ರಿಂದ ಪಾಕಿಸ್ತಾನವು ಆರಂಭಿಸಿರುವ ಕದನ ವಿರಾಮ ಉಲ್ಲಂಘನೆಗೆ ಇದುವರೆಗೆ 7 ಮಂದಿ ಬಲಿಯಾಗಿ ಸುಮಾರು 70 ಮಂದಿ ಗಾಯಗೊಂಡಿದ್ದಾರೆ. 16,000 ಮಂದಿ ಸುರಕ್ಷಿತ ಸ್ಥಳಕ್ಕೆ ಪಲಾಯನಗೈದಿದ್ದಾರೆ.