ರೋಹ್ಟಕ್, ಅ.8: ದೇಶವನ್ನು ಪ್ರಗತಿಯತ್ತ ಒಯ್ಯಲು ಕೃಷಿ, ಸಾಗರವಲಯ, ವಿದ್ಯುತ್ ಹಾಗೂ ಹಾಲು ಉತ್ಪಾದನೆ ಕ್ಷೇತ್ರಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರತಿನಿಧಿಸುವ ‘ನಾಲ್ಕು-ಬಣ್ಣಗಳ’ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದಾರೆ.
ಇಂದಿಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಮಹಿಳೆಯರ ಮುಖ್ಯವಾಗಿ ದಲಿತರ-ಮಾನ ಮತ್ತು ಗೌರವವನ್ನು ರಕ್ಷಿಸಲು ವಿಫಲವಾಗಿರುವ ಹರ್ಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಅವರ ತವರು ಪಟ್ಟಣದಲ್ಲೇ ತೀವ್ರ ವಾಗ್ದಾಳಿ ನಡೆಸಿದರು.
ಮೋದಿ, ದಲಿತರ ಮಾನ, ಗೌರವ ಹಾಗೂ ಸುರಕ್ಷೆಯ ವಿಷಯವನ್ನೆತ್ತುವ ಮೂಲಕ ವಾಲ್ಮೀಕಿ ಜಯಂತಿಯ ಸಂದರ್ಭವನ್ನು ದಲಿತರ ಒಲವುಗಳಿಸಲು ಬಳಸಿಕೊಂಡರು.
ಕೇಸರಿ ಕ್ರಾಂತಿಯ ಕುರಿತು ಮಾತನಾಡುವ ವೇಳೆ ತನ್ನ ‘ಜಾತ್ಯತೀತ ಮಿತ್ರ’ರನ್ನು ಕುಟುಕಿದ ಪ್ರಧಾನಿ, ಇದರ ಕುರಿತು ಕೇಳಿದರೆ ಅವರಿಗೆ ಜ್ವರ ಬಂದೀತು ಎಂದರು.
ನಮ್ಮ ರಾಷ್ಟ್ರಧ್ವಜದಲ್ಲಿ ಮೂರು ಬಣ್ಣಗಳಿವೆ. ಅಲ್ಲದೆ, ಅಶೋಕ ಚಕ್ರದಲ್ಲಿ ನೀಲಿ ಬಣ್ಣವಿದೆ. ತಾನು ನಾಲ್ಕು-ಬಣ್ಣಗಳ ಕ್ರಾಂತಿ ತರುವುದನ್ನು ಬಯಸುತ್ತೇನೆ. ಒಂದು ಬಣ್ಣ ಕೇಸರಿಯಾಗಿದ್ದು, ತಾನು ಕೇಸರಿ ಕ್ರಾಂತಿ ತರಬಯಸುತ್ತಿದ್ದೇನೆ. ಇದನ್ನು ಕೇಳಿದ ಬಳಿಕ ತನ್ನ ಜಾತ್ಯತೀತ ಮಿತ್ರರಿಗೆ ಜ್ವರ ಆರಂಭವಾಗಲಿದೆ. ಅವರಿಗೆ ನಿದ್ದೆಮಾಡಲು ಸಾಧ್ಯವಾಗುತ್ತದೋ, ಇಲ್ಲವೋ ಎಂಬ ಬಗ್ಗೆ ತನಗೆ ಸಂಶಯವಿದೆ. ಕೇಸರಿಯೆಂದರೆ ಶಕ್ತಿ. ಜನರು ವಿದ್ಯುತ್ತನ್ನು ಬಯಸುತ್ತಾರೆ ಎಂದು ಮೋದಿ ವಿವರಿಸಿದರು.
ದೇಶದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಲು ಶ್ವೇತಕ್ರಾಂತಿಯ ಅಗತ್ಯವಿದೆ. ಇಂದು ರಾಜಕೀಯ ಪ್ರಾಯೋಜಕತ್ವದಲ್ಲಿ ಕೃತಕ ಹಾಲನ್ನು ಉತ್ಪಾದಿಸಲಾಗುತ್ತದೆ. ಅದು ಜನರ ಆರೋಗ್ಯದೊಂದಿಗೆ ಆಟವಾಡುತ್ತದೆ. ಎರಡನೆಯ ಹಸಿರು ಕ್ರಾಂತಿಯೂ ಈ ಕಾಲದ ಅಗತ್ಯವಾಗಿದೆ. ಬಂದರುಗಳ ಅಭಿವೃದ್ಧಿ ಹಾಗೂ ಮೀನುಗಾರರ ಸಬಲೀಕರಣದ ಮೂಲಕ ನಮ್ಮ ಸಾಗರ ಶಕ್ತಿಯನ್ನು ಹೆಚ್ಚಿಸಲು ನೀಲಿ ಕ್ರಾಂತಿಯನ್ನು ತರುವ ಅಗತ್ಯವಿದೆಯೆಂದು ಪ್ರಧಾನಿ ಹೇಳಿದರು.
ಹೂಡಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 10 ವರ್ಷಗಳಿಂದ ಹೂಡಾ ಮತ್ತವರ ಕುಟುಂಬದವರೇ ರಾಜ್ಯವನ್ನು ಆಳಿದ್ದಾರೆ. ಆದರೆ, ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯು ಮಹಿಳೆಯರು ಸುರಕ್ಷಿತ ಭಾವನೆ ಹೊಂದದಂತಿದೆ. ದಲಿತ ಮಹಿಳೆಯರ ಸ್ಥಿತಿ ಇನ್ನೂ ದಯನೀಯವಾಗಿದೆ. ಸರಕಾರಿ ಸಮಿತಿಯೊಂದು ತನ್ನ ವರದಿಯಲ್ಲಿ 19 ಮಂದಿ ದಲಿತ ಬಾಲಕಿಯರ ಮೇಲೆ ದೌರ್ಜನ್ಯ ನಡೆದಿರುವುದನ್ನು ಉಲ್ಲೇಖಿಸಿದೆ ಎಂದರು.
ಮುಖ್ಯಮಂತ್ರಿಯ ಪ್ರದೇಶದಲ್ಲೇ ದಲಿತ ಬಾಲಕಿಯರು ಅಸುರಕ್ಷಿತರಾಗಿದ್ದರೆ, ಸರಕಾರಕ್ಕೆ ಅದಕ್ಕಿಂತ ದೊಡ್ಡ ಕಳಂಕ ಬೇರಿಲ್ಲ ಎಂದ ಮೋದಿ, 2002ರಲ್ಲಿ ಜಿಲ್ಲೆಗೆ ಭೇಟಿ ನೀಡಿ, 1 9 ಮಂದಿ ದಲಿತ ಬಾಲಕಿಯರ ಮೇಲಿನ ದೌರ್ಜನ್ಯವನ್ನು ಖಚಿತಪಡಿಸಿರುವ ಅಖಿಲಭಾರತ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷರ ವರದಿಯನ್ನು ಉಲ್ಲೇಖಿಸಿದರು. ಇಷ್ಟಾದರೂ ಹೃದಯರಹಿತ ಸರಕಾರ ಕಾರ್ಯಾಚರಣೆ ಕೈಗೊಂಡಿಲ್ಲ ಹಾಗೂ ಎಫ್ಐಆರ್ ದಾಖಲಿಸುವ ಬಗ್ಗೆ ಏನೂ ಮಾಡಿಲ್ಲ. ಈ ಆಘಾತಕಾರಿ ವರದಿಯನ್ನು ನಿೀಡಿರುವ ದಲಿತ ಸಂಸ್ಥೆಯ ಅಧ್ಯಕ್ಷ ಕಾಂಗ್ರೆಸ್ನವರೇ ಆಗಿದ್ದಾರೆಂದು ಮೋದಿ ಟೀಕಿಸಿದರು.