ರವಿವಾರದೊಳಗೆ ಅಪ್ಪಳಿಸಲಿರುವ ಚಂಡಮಾರುತ
ಹೊಸದಿಲ್ಲಿ/ಭುವನೇಶ್ವರ, ಅ.8: ಇದೇ ರವಿವಾರದೊಳಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ‘ಭಾರೀ ಚಂಡಮಾರುತ’ವೊಂದು ಬಂದು ಅಪ್ಪಳಿಸುವ ಸಾಧ್ಯತೆಯಿದೆ.
‘ಹುಡ್ಹುಡ್’ ಎಂಬ ಹೆಸರಿನ ಈ ಚಂಡಮಾರುತವು ಬುಧವಾರ ಅಂಡ್ಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ಪೋರ್ಟ್ಬ್ಲೇರ್ ಹಾಗೂ ಲಾಂಗ್ ದ್ವೀಪಗಳನ್ನು ದಾಟಿದೆ. ಗಂಟೆಗೆ 67 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ಅಂತಿಮವಾಗಿ ಗಂಟೆಗೆ 155 ಕಿ.ಮೀ. ವೇಗವನ್ನು ಪಡೆದುಕೊಳ್ಳಲಿದ್ದು, ತೀವ್ರ ಬಿರುಗಾಳಿಯೊಂದಿಗೆ ಭಾರೀ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಅಕ್ಟೋಬರ್ 12ರಂದು ರವಿವಾರ ಮಧ್ಯಾಹ್ನ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಒಡಿಶಾದ ಗೋಪಾಲಪುರಗಳ ನಡುವೆ ಚಂಡಮಾರುತವು ಕರಾವಳಿಯನ್ನು ದಾಟಲಿದೆ. ಗಂಟೆಗೆ 130ರಿಂದ 155 ಕಿ.ಮೀ. ವೇಗದಲ್ಲಿ ಪ್ರಬಲ ಬಿರುಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ದಿಲ್ಲಿಯಲ್ಲಿ ತಿಳಿಸಿದ್ದಾರೆ.
ಚಂಡಮಾರುತವು ವಿಶಾಖಪಟ್ಟಣ ಮತ್ತು ಗೋಪಾಲಪುರಗಳ ನಡುವೆ 200 ಕಿ.ಮೀ.ನಷ್ಟು ವಿಸ್ತಾರವಾದ ಪ್ರದೇಶವನ್ನು ಅಪ್ಪಳಿಸಲಿದ್ದು, 500 ಕಿ.ಮೀ.ಯಷ್ಟು ವ್ಯಾಪ್ತಿಯನ್ನು ಹೊಂದಿರುತ್ತದೆ ಎಂದು ಐಎಂಡಿ ಚಂಡಮಾರುತ ಎಚ್ಚರಿಕೆ ವಿಭಾಗದ ವಿಜ್ಞಾನಿ ಎಂ.ಮಹಾಪಾತ್ರ ಹೇಳಿದ್ದಾರೆ.
ಕಳೆದ ವರ್ಷ ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದ ‘ಫೈಲಿನ್’ ಚಂಡಮಾರುತಕ್ಕೆ ಹೋಲಿಸಿದ್ದಲ್ಲಿ ‘ಹುಡ್ಹುಡ್’ಎರಡನೆ ಪ್ರಬಲ ಚಂಡಮಾರುತವಾಗಿದೆ. ಈ ಬಾರಿಯ ಚಂಡಮಾರುತ ಫೈಲಿನ್ನಷ್ಟು ಪ್ರಬಲವಲ್ಲ ಎಂದು ರಾಥೋಡ್ ತಿಳಿಸಿದ್ದಾರೆ.
ಗಂಟೆಗೆ 210-220 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ್ದ ‘ಫೈಲಿನ್’ ಚಂಡಮಾರುತವು ಕಳೆದ ವರ್ಷ ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಭಾರೀ ಅನಾಹುತವನ್ನುಂಟು ಮಾಡಿದುದ್ದನ್ನು ಸ್ಮರಿಸಿಕೊಳ್ಳಬಹುದು.