ಹೊಸದಿಲ್ಲಿ, ಅ. 12: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ‘ಹುಡ್ ಹುಡ್’ ಚಂಡಮಾರುತದ ಅಬ್ಬರ ಆರಂಭವಾಗಿದ್ದು, ನಿರೀಕ್ಷೆಗೂ ಮುನ್ನವೇ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ.
ಗಂಟೆಗೆ 190 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಚಂಡಮಾರುತ ಅಪ್ಪಳಿಸುವ ವೇಳೆಗೆ ಗಾಳಿಯ ವೇಗ ಗಂಟೆಗೆ 140 ರಿಂದ 150 ಕಿ.ಮೀಗೆ ಹೆಚ್ಚಾಗುವ ಸಾಧ್ಯತೆಯಿದೆ.
ಮುಂಜಾಗ್ರತಾ ಕ್ರಮವಾಗಿ ಆಂಧ್ರದಲ್ಲಿ ಸುಮಾರು 5 ಲಕ್ಷ ಮತ್ತು ಒಡಿಶಾದಲ್ಲಿ 3.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಆಂಧ್ರದ ವೈಜಾಗ್, ವಿಶಾಖಪಟ್ಟಣಂ ಹಾಗೂ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಭಾರೀ ಮಳೆ ಆರಂಭವಾಗಿದ್ದು, ಎಲ್ಲೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ವಿಶಾಖಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ಸುಮಾರು 70 ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಲಾಗಿದೆ. ಅಲ್ಲದೆ, ಜನರ ರಕ್ಷಣೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ವಾಯು ಪಡೆಯಿಂದ 10 ಹೆಲಿಕಾಪ್ಟರ್, ನೌಕಾ ನೆಲೆ ಹಾಗೂ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳು ಸನ್ನದ್ಧವಾಗಿವೆ.