ಕರಾವಳಿ

ಮಂಗಳೂರು : ಸರಕಾರಿ ವಲಯದ ಪ್ರಥಮ ಅತ್ಯಾಧುನಿಕ ಮೀನು ಸಂಸ್ಕರಣಾ ಸ್ಥಾವರ ಉದ್ಘಾಟನೆ

Pinterest LinkedIn Tumblr
 fisher_rai_inogrtion_1

ಮಂಗಳೂರು, ಅ.13: ನಗರದ ಹೊಯ್ಗೆ ಬಜಾರ್‌ನಲ್ಲಿ ನಿರ್ಮಿಸಲಾದ ಐರೋಪ್ಯ ರಾಷ್ಟ್ರ ಒಕ್ಕೂಟದ ಗುಣಮಟ್ಟ ಅಳವಡಿಸಿರುವ ಸರಕಾರಿ ವಲಯದ ಪ್ರಥಮ ಮೀನು ಸಂಸ್ಕರಣಾ ಸ್ಥಾವರದ ಉದ್ಘಾಟನೆ ಕಾರ್ಯಕ್ರಮ ರವಿವಾರ ನಡೆಯಿತು.

ಸ್ಥಾವರವನ್ನು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹಾಗೂ ಶೈತ್ಯಾಗಾರವನ್ನು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಮಾನಾಥ ರೈ, ಸಂಸ್ಕರಣಾ ಕೇಂದ್ರಗಳ ಮೂಲಕ ಮೀನನ್ನು ದೀರ್ಘಕಾಲ ಶೇಖರಿಸಿಡಲು ಸಾಧ್ಯ. ಜಿಲ್ಲೆಯಲ್ಲಿ ಈ ರೀತಿಯ ಮೀನು ಸಂಸ್ಕರಣಾ ಗಾರವನ್ನು ನಿರ್ಮಿಸುವ ಮೂಲಕ ಸ್ಥಳೀಯ ಮೀನುಗಾರರಿಗೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ. ಇದರ ಮೂಲಕ ಮೀನಿನ ವೌಲವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಹಾಯವಾಗಲಿದೆ. ಉತ್ಪಾದಕರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದವರು ನುಡಿದರು.

fisher_rai_inogrtion_2

ಕೇಂದ್ರ ಸರಕಾರದ ಕೃಷಿ ವಿಕಾಸ ಯೋಜನೆಯ ಮೂಲಕ ನಿರ್ಮಿಸಿರುವ ಸಂಸ್ಕರಣಾ ಸ್ಥಾವರ ಕರ್ನಾಟಕ ಕರಾವಳಿಯ ಮೀನುಗಾರರಿಗೆ ರಫ್ತು ವ್ಯವಹಾರ ಹೆಚ್ಚಿಸಲು ಅನುಕೂಲ ಮಾಡಿಕೊಡಲಿದೆ ಎಂದರು.

ರಾಜ್ಯ ಸರಕಾರ ಕರಾವಳಿಯ ಅಭಿವೃದ್ಧಿಯ ಯೋಜನೆಗಳ ಹಿನ್ನೆಲೆಗಳಲ್ಲಿ ಜಟ್ಟಿ, ಬಂದರುಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮೀನಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ಮೀನು ರಪ್ತು ಉದ್ಯಮಕ್ಕೆ ಹೆಚ್ಚಿನ ನೆರವು: ಸಚಿವ ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ 12 ಸಾವಿರ ಕೋಟಿ ರೂ. ವೌಲ್ಯದ ಮತ್ಸ ಉತ್ಪನ್ನ ರಪ್ತು ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಮೀನುಗಾರಿಕೆಗೆ ಪೂರಕವಾದ ನೆರವು ನೀಡುತ್ತಿದೆ ಎಂದರು.

fisher_rai_inogrtion_3

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಕರಣಾ ಘಟಕ ಸ್ಥಾಪಿತವಾ ಗಿರುವುದು ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಾಧನೆ. ಸ್ಥಳೀಯರ ಪ್ರಯತ್ನದ ಫಲವಾಗಿ ಮೀನುಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಇತರ ಅಭಿವೃದ್ಧಿ ಕಾರ್ಯಯೋಜನೆಗಳು ಅನಷ್ಠಾನಗೊಂಡಿವೆ ಎಂದು ಅವರು ತಿಳಿಸಿದರು.

ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಶೀಘ್ರ ಚಾಲನೆ:
ಮಂಗಳೂರು ಮೀನುಗಾರಿಕಾ ಬಂದರಿನ ಮೂರನೆ ಹಂತದ ಯೋಜನೆಗೆ ತಡೆಯಾಜ್ಞೆ ಇದ್ದ ಕಾರಣ ಅನುಷ್ಠಾನದಲ್ಲಿ ವಿಳಂಬವಾಗಿದೆ. ಶೀಘ್ರದಲ್ಲಿ ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಕುಳಾಯಿ ಹಾಗೂ ಸುರತ್ಕಲ್‌ನಲ್ಲಿ 120 ಕೋಟಿ ರೂ.ನ ಮೀನುಗಾರಿಕಾ ಬಂದರು ನಿರ್ಮಾಣದ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಅಭಯಚಂದ್ರ ಜೈನ್ ತಿಳಿಸಿದ್ದಾರೆ.

ಮೀನುಗಾರಿಕಾ ಬೋಟ್‌ಗಳಿಗೆ ಹೊಸದಾಗಿ ಪರವಾನಿಗೆ ನೀಡುವ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಒಳನಾಡಿನ ಮೀನುಗಾರಿಕೆಗೂ ರಾಜ್ಯ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಲಿದೆ. ನಾಡ ದೋಣಿ ಮಾಲಕರ ಸೀಮೆಎಣ್ಣೆ ಸಮಸ್ಯೆ ಪೂರೈಕೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.

fisher_rai_inogrtion_4

ರಾಜ್ಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ಎಚ್.ಎಸ್.ವೀರಪ್ಪ ಗೌಡ ಮಾತ ನಾಡಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಕೃಷಿ ವಿಕಾಸ ಯೋಜನೆಯಡಿ 25 ಕೋ.ರೂ.ನ ಮೀನು ಮಾರಾಟ ಚಟುವಟಿಕೆಗಳ ಅಭಿವೃದ್ಧಿ ಯೋಜನೆ ಕಳೆದ 5 ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮನಪಾ ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ ವಾಸು, ನಿಯಾಝ್ ಸೀ ಫುಡ್ಸ್‌ನ ಅಧ್ಯಕ್ಷ ಯು.ಕೆ.ಬಾವ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ಕುಮಾರ್, ಮೀನುಗಾರರ ಸಂಘಟನೆಯ ಮುಖಂಡರಾದ ಕೇಶವ ಕುಂದರ್, ಇಲಾ ಖೆಯ ಅಧಿಕಾರಿಗಳಾದ ರಾಜೇಶ್ವರಿ, ಗಣಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ಮೀನುಗಾರಿಕಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ ಸ್ವಾಗತಿಸಿದರು.

ಅಂತಾರಾಷ್ಟ್ರೀಯ ಗುಣಮಟ್ಟದ ಸ್ಥಾವರ:

ಐರೋಪ್ಯ ರಾಷ್ಟ್ರಗಳಿಗೆ ಆಹಾರೋತ್ಪನ್ನ ರಪ್ತು ಮಾಡಬೇಕಿದ್ದರೆ ಐರೋಪ್ಯ ರಾಷ್ಟ್ರ ಒಕ್ಕೂಟ ನಿಗದಿಪಡಿಸಿದ ಮಾದರಿಯ ಪ್ರಯೋಗಾಲಯ ಮತ್ತು ಸಂಸ್ಕರಣ ಸ್ಥಾವರ ಹೊಂದಿರಬೇಕಾಗಿರುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಐರೋಪ್ಯ ಮತ್ತು ಅರಬ್ ರಾಷ್ಟ್ರಗಳಿಗೆ ಮೀನಿನ ಉತ್ಪನ್ನ ರಪ್ತು ವ್ಯವಹಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಮೀನು ಸಂಸ್ಕರಣ ಸ್ಥಾವರನ್ನು ನಗರದ ಹೊಯ್ಗೆ ಬಜಾರ್‌ನಲ್ಲಿ ಸ್ಥಾಪಿಸಲಾಗಿದೆ. 6.5 ಕೋ.ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಿರುವ ಮೀೀನು ಸಂಸ್ಕರಣಾ ಸ್ಥಾವರ ದಿನವೊಂದಕ್ಕೆ 16ರಿಂದ 20 ಮೆಟ್ರಿಕ್ ಟನ್ ಮೀನು ಘನೀಕರಿಸುವ ಸಾಮರ್ಥ್ಯ ಹೊಂದಿದೆ. 500 ಟನ್ ಸಾಮರ್ಥ್ಯದ ಶೈತ್ಯಾಗಾರ, 10 ಟನ್ ಸಾಮರ್ಥ್ಯದ ಫ್ಲೇಸ್ ಐಸ್ ಘಟಕ, ದಿನವೊಂದರ 10 ಟನ್ ಸಾಮರ್ಥ್ಯದ ಟ್ರಾಲಿ ಫ್ರೀಝರ್ , 6 ಟನ್ ಸಾಮರ್ಥ್ಯದ ಪ್ಲೇಟ್ ಫ್ರೀಝರ್, 10 ಟನ್ ಸಾಮರ್ಥ್ಯದ ಚಿಲ್ಡ್ ಕೊಠಡಿಯನ್ನು ಹೊಂದಿದೆ. ಇಲ್ಲಿ ಸಂಸ್ಕರಿಸಿದ ಮತ್ಸೋತ್ಪನ್ನವನ್ನು 2 ವರ್ಷಗಳ ಬಳಿಕ ಕೂಡ ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು. ಗುಣಮಟ್ಟ ಕಾಯ್ದುಕೊಳ್ಳಲು ನೀರು ಶುದ್ಧೀಕರಣ, ತ್ಯಾಜ್ಯ ಶುದ್ಧೀಕರಣ ಮತ್ತು ಪ್ರಯೋಗಾಲಯಗಳನ್ನೂ ಇಲ್ಲಿ ಅಳವಡಿಸಲಾಗಿದೆ.

Write A Comment