ಮೂಡುಬಿದಿರೆ,ಅ.14: ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಡುಬಿದಿರೆ ಹೋಬಳಿಯ ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಜರಗಿತು. ಸಮಾರಂಭವನ್ನು ದೇವತಾ ಪ್ರಾರ್ಥನೆಯೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ. ಎಂ.ಹರೀಶ ಭಟ್ ಉದ್ಘಾಟಿಸಿದರು.
ಶ್ರೀ ವೀರ ವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ನ ಕಾರ್ಯದರ್ಶಿ ಟಿ.ಗಣಪತಿ ಪೈ ಮಾತನಾಡಿ ದಶಮಾನೋತ್ಸವ ಸಂಭ್ರಮದಲ್ಲಿರುವ ಟ್ರಸ್ಟ್ ವತಿಯಿಂದ ಪ್ರಸಕ್ತ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 825 ಕ್ಕೂ ಮಿಕ್ಕಿದ ಜಿ.ಎಸ್.ಬಿ. ಸಮಾಜದ ವಿದ್ಯಾರ್ಥಿಗಳಿಗೆ 18 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಒಂದೇ ದಿನ ಏಕಕಾಲದಲ್ಲಿ ಮಂಗಳೂರಿನ ವಿದ್ಯಾರ್ಥಿಗಳ ಬಳಿಕ ಮೂಡುಬಿದಿರೆ, ಮೂಲ್ಕಿ, ಬಂಟ್ವಾಳ,ಪುತ್ತೂರು ಮತ್ತು ಮೂಲ್ಕಿಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಈ ನೆರವನ್ನು ನೀಡಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆದು ಮುಂದೆ ನಮ್ಮ ಸಂಸ್ಕೃತಿ ಪರಂಪರೆ ಯನ್ನೂ ಬೆಳಗಬೇಕು. ಉನ್ನತ ಪ್ರತಿಭಾನ್ವಿತರಾಗಿ ತಮ್ಮ ಸೇವೆಯನ್ನು ಹುಟ್ಟೂರಿಗೇ ನೀಡುವಂತಾಗಬೇಕು ಎಂದರು.
ಹೋಬಳಿಯ ಹೈಸ್ಕೂಲಿನ 28, ಪಿ.ಯು.ಸಿಯ 15, ಕಾಲೇಜಿನ 18 ಹಾಗೂ ಸ್ನಾತಕೋತ್ತರ ಪದವಿಯ 6 ಹೀಗೆ ಒಟ್ಟು 67 ವಿದ್ಯಾರ್ಥಿಗಳಿಗೆ ಮಿಜಾರು ಗೋವಿಂದ ಪೈ – ಮಿಜಾರು ಮನೋರಮಾ ಪೈ ಸಂಸ್ಮರಣ ಹಾಗೂ ಮುಂಡ್ಕೂರಿನ ಜಯಶ್ರೀ ರಾಮದಾಸ ಕಾಮತ್ ಇವರ ನೆರವಿನ ಒಟ್ಟು 1.5 ಲಕ್ಷಕ್ಕೂ ಮಿಕ್ಕಿದ ಆರ್ಥಿಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಶ್ರೀ ವೀರ ವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ನ ಸದಸ್ಯ ರಾಧಾಕೃಷ್ಣ ಪ್ರಭು, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಮೊಕ್ತೇಸರರಾದ ಜ್ಞಾನೇಶ್ವರ ಕಾಳಿಂಗ ಪೈ, ಎಂ.ಅಶೋಕ ಮಲ್ಯ, ಉದ್ಯಮಿ ಆರ್.ರವೀಂದ್ರ ಪೈ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಸ್ವಾಗತಿಸಿದರು. ಮೊಕ್ತೇಸರರಾದ ಪಿ.ರಾಮನಾಥ ಭಟ್ ವಿದ್ಯಾರ್ಥಿಗಳ ವಿವರ ನೀಡಿದರು. ಎಸ್. ಮನೋಜ್ ಶೆಣೈ ವಂದಿಸಿದರು. ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.