ಮಂಗಳೂರು, ಅ.16: ಪ್ರಸಕ್ತ ಸಾಲಿನ ಅಬ್ಬಕ್ಕ ಉತ್ಸವಕ್ಕೆ 40 ಲಕ್ಷ ರೂ. ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು, ಅತ್ಯಂತ ವ್ಯವಸ್ಥಿತ ಹಾಗೂ ಜನ ಸಾಮಾನ್ಯರಿಗೆ ಪೂರಕವಾಗುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮವಾಗಿ ನಡೆಯಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
2014-15ನೆ ಸಾಲಿನ ಅಬ್ಬಕ್ಕ ಉತ್ಸವವನ್ನು ತುಂಬೆ ಬಿ.ಎ. ಪದವಿ ಪೂರ್ವ ಕಾಲೇಜು ಬಳಿ ನಡೆಸಲು ತೀರ್ಮಾನಿಸಿರುವುದಾಗಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ದಿನಕರ್ ಉಳ್ಳಾಲ್ ತಿಳಿಸಿದರು. ಅಬ್ಬಕ್ಕ ಉತ್ಸವವನ್ನು ಜನವರಿ 24 ಮತ್ತು 25ರಂದು ನಡೆಸಲು ಉತ್ಸವ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದಾಗ, ಕರಾವಳಿ ಉತ್ಸವದ ಜತೆ ಜತೆಯಲ್ಲೇ ಅಬ್ಬಕ್ಕ ಉತ್ಸವವನ್ನು ಅತ್ಯಂತ ವ್ಯವಸ್ಥಿತವಾಗಿ ನಿಗದಿತ ದಿನಾಂಕವನ್ನು ಸಿದ್ಧಪಡಿಸಿ ಅದರಂತೆ ನಡೆಸುವಂತಾದರೆ ಒಳಿತು. ಈ ಬಗ್ಗೆ ಸಮಿತಿ ಮತ್ತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಸಚಿವ ರೈ ಅಭಿಪ್ರಾಯಿಸಿದರು.
ತುಂಬೆಯಲ್ಲಿ ನಡೆಯುವ ಅಬ್ಬಕ್ಕ ಉತ್ಸವಕ್ಕೆ 30 ಲಕ್ಷ ರೂ., ಮಂಗಳೂರಿನಲ್ಲಿ ನಡೆಯುವ ಅಬ್ಬಕ್ಕ ಯಕ್ಷಗಾನ ಸಿಡಿ, ಅಬ್ಬಕ್ಕ ನಾಟಕ ಸಿಡಿ ಮತ್ತು ಅಬ್ಬಕ್ಕ ನೃತ್ಯ ರೂಪಕ ಸಿಡಿ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 5 ಲಕ್ಷ ರೂ., ಬೆಂಗಳೂರಿನಲ್ಲಿ ನಡೆಯುವ ಉಳ್ಳಾಲ ವೀರರಾಣಿ ಅಬ್ಬಕ್ಕಳ ಬಗ್ಗೆ ವಿಚಾರಗೋಷ್ಠಿ, ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 5 ಲಕ್ಷ ರೂ. ವಿನಿಯೋಗಿಸಲು ಕರಡು ಬಜೆಟ್ ತಯಾರಿಸಲಾಗಿದೆ. ಸಭೆಯಲ್ಲಿ ಅಬ್ಬಕ್ಕ ಉತ್ಸವ ಸಮಿತಿಯ ಜಯರಾಂ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚಂದ್ರಹಾಸ ರೈ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.