ಮಂಗಳೂರು, ಅ.16: ‘‘ನಿಗದಿತ 18 ತಿಂಗಳುಗಳಲ್ಲಿ ಲೇಡಿಗೋಶನ್ ಆಸ್ಪತ್ರೆಯ ಕಟ್ಟಡ ಕಾಮಗಾರಿ ಮುಗಿಸದೆ, ಕಾಮಗಾರಿ ವಿಳಂಬಕ್ಕೆ ಸಣ್ಣ ಸಣ್ಣ ಸಬೂಬುಗಳನ್ನು ನೀಡುತ್ತಿದ್ದೀರಿ. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದಾದರೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿಕೊಂಡಿದ್ದಾದರೂ ಏಕೆ? ಕೆಲಸದ ವೇಗ ಹೆಚ್ಚಿಸದೆ ಇದ್ದರೆ ನಿಮ್ಮ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಆರೋಗ್ಯ ಇಲಾಖೆಯ ಯಾವ ಕೆಲಸವು ಸಿಗದಂತೆ ಮಾಡುತ್ತೇವೆ’’ ಎಂದು ಲೇಡಿಗೋಶನ್ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿ ಕೊಂಡಿರುವ ಬೆಂಗಳೂರಿನ ಶ್ರೀ ಕೃಷ್ಣ ಶೆಲ್ಟರ್ ಕಂಪೆನಿಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ. ನಿರ್ಮಾಣ ಹಂತದಲ್ಲಿರುವ ಲೇಡಿಗೋಶನ್ ಆಸ್ಪತ್ರೆಯ ಕಟ್ಟಡದಲ್ಲೇ ನಡೆದ ಆಸ್ಪತ್ರೆಯ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಟ್ಟಡ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಿದಾಗ ಗುತ್ತಿಗೆ ಸಂಸ್ಥೆಯ ಎಜಿಎಂ ಪ್ರದೀಪ್, ಕಾಮಗಾರಿ ಸ್ಥಳದಲ್ಲಿ ಬಾವಿ ಇತ್ತು, ಮಣ್ಣು ಸಡಿಲವಾಗಿತ್ತು, ನಗರದ ಮಧ್ಯದಲ್ಲಿರುವುದರಿಂದ ಹಗಲು ಹೊತ್ತಿನಲ್ಲಿ ಕಾಮಗಾರಿ ಸಾಧ್ಯ ವಾಗುವುದಿಲ್ಲ. ನಿಗದಿತ ಸಮಯದಲ್ಲಿ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಸಬೂಬುಗಳನ್ನು ನೀಡಿದಾಗ ಸಚಿವರು ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದರು. ಇಲ್ಲಿ ಯಾವುದೆಲ್ಲ ಸಮಸ್ಯೆಗಳು ಇವೆ ಎಂದು ತಿಳಿದೇ ಗುತ್ತಿಗೆ ಪಡೆದಿದ್ದೀರಿ. ಮತ್ತೆ ಸಬೂಬು ಹೇಳಿ ಕಾಮಗಾರಿ ವಿಳಂಬ ಮಾಡಬೇಡಿ ಎಂದು ಖಾದರ್ ಎಚ್ಚರಿಸಿದರು.
ಮುಂದಿನ 9 ತಿಂಗಳುಗಳಲ್ಲಿ ಕಾಮಗಾರಿ ಮುಗಿಸುವ ಭರವಸೆಯನ್ನು ಗುತ್ತಿಗೆ ಸಂಸ್ಥೆಯ ಅಧಿಕಾರಿ ಪ್ರದೀಪ್ ಸಚಿವರಿಗೆ ಭರವಸೆ ನೀಡಿದರು.ವಾಗ್ದಾನ ತಪ್ಪುವುದಿಲ್ಲ: ಎಂಆರ್‌ಪಿಎಲ್, ಒಎನ್‌ಜಿಸಿಯ ನೂತನ ಅಧ್ಯಕ್ಷರು ಲೇಡಿಗೋಶನ್ ಆಸ್ಪತ್ರೆಯ ಕಾಮಗಾರಿಗೆ ವಿಳಂಬ ಆಗದಂತೆ ನೋಡಿ ಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದುದರಿಂದ ಕಂಪೆನಿ ನಿಗದಿಪಡಿಸಿದ 21.73 ಕೋಟಿ ರೂ. ಮೊತ್ತವನ್ನು ಹಂತಹಂತವಾಗಿ ಪಾವತಿಸಲಾಗುತ್ತದೆ. ನಡೆದಿರುವ ಕಾಮಗಾರಿಗೆ ಈಗಾಗಲೇ 6 ಕೋಟಿ ರೂ. ಪಾವತಿಸಲಾಗಿದೆ. ಬಾಕಿ 2 ಕೋ.ರೂ.ಗಳಲ್ಲಿ 1 ಕೋ.ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತ ಹಂತಹಂತವಾಗಿ ನೀಡುತ್ತೇವೆ. ನಮ್ಮ ಕಡೆಯಿಂದ ಯಾವುದೇ ಅಡ್ಡಿ ಯಾಗದು ಎಂದು ಎಂಆರ್‌ಪಿಎಲ್-ಒಎನ್‌ಜಿಸಿ ಸಂಸ್ಥೆಯ ಅಧಿಕಾರಿ ಸತೀಶ್ಚಂದ್ರ ಭರವಸೆ ನೀಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಚಿವ ಅಭಯಚಂದ್ರ ಜೈನ್, ಎಂಆರ್‌ಪಿಎಲ್ ಡಿಜಿಎಂ (ಕಾರ್ಪೊರೇಟ್ ಆಂಡ್ ಕಮ್ಯುನಿಕೇಶನ್)ಲಕ್ಷ್ಮಿ ಕುಮಾರನ್, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಮತ್ತಿತರರು ಇದ್ದರು.
ಎಂಆರ್‌ಪಿಎಲ್ ಹಣ ನೀಡದಿದ್ದರೆ ಪಡೆಯುವುದು ಗೊತ್ತು: ಸಚಿವ ರೈ ಸರಕಾರಗಳು ಬದಲಾದಾಗ, ಹೊಸ ಆಡಳಿತಗಾರರ ಮನಃಸ್ಥಿತಿ ಏನು ಎಂದು ತಿಳಿಯದೆ ಗುತ್ತಿಗೆದಾರರು ಕಾಮಗಾರಿಯಲ್ಲಿ ಹಣ ಹೂಡುವುದಕ್ಕೆ ಹಿಂದೇಟು ಹಾಕುವುದು ಸಹಜ. ಲೇಡಿಗೋಶನ್ ಆಸ್ಪತ್ರೆಯ ಕಾಮಗಾರಿಗೆ ನಿಗದಿಪಡಿಸಿದ ಕೊಡುಗೆ ಮೊತ್ತವನ್ನು ಪಾವತಿಸುವ ಭರವಸೆ ಎಂಆರ್‌ಪಿಎಲ್-ಒಎನ್‌ಜಿಸಿ ಕಂಪೆನಿಯ ಹೊಸ ಅಧ್ಯಕ್ಷರು ನೀಡಿದ್ದಾರೆ. ಒಂದು ವೇಳೆ ಅವರು ಕೊಡದಿದ್ದರೂ ನಮಗೆ ಪಡೆದುಕೊಳ್ಳುವುದು ಗೊತ್ತು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರಕಾರ ಹೋಗಿ ಎನ್‌ಡಿಎ ಸರಕಾರ ಬಂದಿದೆ. ಎಂಆರ್‌ಪಿಎಲ್-ಒಎನ್‌ಜಿಸಿ ಕಂಪೆನಿಯ ಅಧ್ಯಕ್ಷ ಬದಲಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಲೇಡಿಗೋಶನ್ ಕಟ್ಟಡ ಕಾಮಗಾರಿಗಾಗಿ ನಿಗದಿಪಡಿಸಿದ ಹಣ ಪಾವತಿಯಲ್ಲಿ ವಿಳಂಬ ಆಗಿದೆ. ಹಣ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಗುತ್ತಿಗೆದಾರರಲ್ಲಿ ಮೂಡಿರುವುದು ಸಹಜ. ಆದರೆ ಸಂಸ್ಥೆಯಿಂದ ಹಣ ಪಡೆದು ನಿಮಗೆ ಕೊಡಿಸುವ ಜವಾಬ್ದಾರಿ ನಮ್ಮದು. ಸ್ಥಳೀಯವಾಗಿ ಕಾರ್ಯಾ ಚರಿಸುತ್ತಿರುವ ಕಂಪೆನಿ ಆಗಿರುವುದರಿಂದ ಅವರು ಜವಾಬ್ದಾರಿಯಿಂದ ನುಣುಚಿ ಕೊಳ್ಳುವುದಕ್ಕೆ ಬಿಡುವುದಿಲ್ಲ. ಇಂತಹ ಸಂದರ್ಭ ಬಂದರೆ ಕಂಪೆನಿಯ ವರಿಗೆ ಕಡಿವಾಣ ಹಾಕುವುದು ನಮಗೆ ಗೊತ್ತು. ಆದುದರಿಂದ ಆತಂಕ ಪಡದೆ ಕೆಲಸ ಮುಂದುವರಿಸಿ ಎಂದು ಗುತ್ತಿಗೆ ಸಂಸ್ಥೆಯವರಿಗೆ ಸಚಿವರು ಭರವಸೆ ನೀಡಿದರು. ರಾಜಕಾರಣಿಗಳ ಅಡ್ಡಿಯಿಲ್ಲ: ಉಳಿದೆಡೆಗಳಲ್ಲಿ ಇರುವಂತೆ ಇಲ್ಲಿ ರಾಜಕಾರಣಿ ಗಳ ಅಡ್ಡಿ ಇರುವುದಿಲ್ಲ. ನಮಗೆ ಗುತ್ತಿಗೆದಾರರು ಯಾರೆಂದೇ ಗೊತ್ತಿರುವುದಿಲ್ಲ. ಇಂತಹ ಪರಿಸರದಲ್ಲಿ ನೀವು ಒಳ್ಳೆಯ ಕೆಲಸ ಮಾಡಬೇಕು ರೈ ನುಡಿದರು.