ಮಂಗಳೂರು,ಅ.16: ನಗರದ ಬೊಂದೇಲ್ನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಂಗ ಮಂದಿರದ ಪ್ರದೇಶಕ್ಕೆ ಹೊಂದಿಕೊಂಡಿರುವ ಎರಡು ಪಿಡಬ್ಲೂಡಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ತಿಂಗಳ ಅಂತ್ಯದಲ್ಲಿ ಅಥವಾ ನವೆಂಬರ್ ಪ್ರಥಮ ವಾರದಲ್ಲಿ ಈ ಬಗ್ಗೆ ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಭೆ ಏರ್ಪಡಿಸಬೇಕು. ರಂಗ ಮಂದಿರಕ್ಕೆ ಸ್ಥಳೀಯಾಡಳಿತದ ವತಿಯಿಂದ ದೊರೆಯುವ ಹಣ ಹೊಂದಿಸುವ ಕುರಿತು ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸಚಿವ ರಮಾನಾಥ ರೈ ಅಧಿಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ, ರಾಜ್ಯದ ಅನುದಾನ
ರಂಗ ಮಂದಿರಕ್ಕೆ ಒಟ್ಟು 24 ಕೋಟಿ ರೂ. ಖರ್ಚಾಗಲಿದ್ದು, ಇದರಲ್ಲಿ 9.6 ಕೋಟಿ ರೂ. ರಾಜ್ಯ ಸರಕಾರದ ವತಿಯಿಂದ ಹಾಗೂ 14.4 ಕೋಟಿ ರೂ. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದಿಂದ ದೊರೆಯಬೇಕಿದೆ. ರಾಜ್ಯ ಸರಕಾರ ನೀಡುವ ಅನುದಾನದಲ್ಲಿ 3.2 ಕೋಟಿ ರೂ. ಅನ್ನು ಸ್ಥಳೀಯ ಆಡಳಿತ ನೀಡಬೇಕಿದ್ದು, ಉಳಿದದ್ದು ರಾಜ್ಯ ಸರಕಾರದಿಂದ ದೊರೆಯಲಿದೆ. ಈ ಕುರಿತ ಎಲ್ಲ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚಂದ್ರಹಾಸ್ ರೈ ಬಿ. ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಶರಣಪ್ಪ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಕಲಾವಿದರು ಉಪಸ್ಥಿತರಿದ್ದರು.