ಮಂಗಳೂರು,ಅ.16 : ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಆದರೆ ಶ್ರೀನಿವಾಸ ಕಾಲೇಜಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಒಂದಷ್ಟು ಕಡಿಮೆಯಿದ್ದು, ವಿಶ್ವವಿದ್ಯಾನಿಲಯದ ನಿಯಮದಂತೆ ಪ್ರತೀ ವಿಷಯಕ್ಕೆ 900 ರೂ ದಂಡ ಕಟ್ಟಬೇಕಿದೆ. ಆದರೆ ಶ್ರೀನಿವಾಸ ಕಾಲೇಜು ಆಡಳಿತ ಮಂಡಳಿ ಪ್ರತೀ ವಿದ್ಯಾರ್ಥಿಯಿಂದ ಪರೀಕ್ಷೆಗೆ ಕುಳಿತುಕೊಳ್ಳಲು ಬರೋಬ್ಬರಿ 20 ರಿಂದ 70 ಸಾವಿರದವರೆಗೆ ಹಣ ವಸೂಲಿ ಮಾಡಲು ಹೊರಟಿದೆ .
ಇಂದು ಪರೀಕ್ಷೆ ನಡೆಯಲಿದ್ದು, ಹಣ ಕೊಡದೇ ಇದ್ರೆ ಹಾಲ್ ಟಿಕೇಟ್ ಕೊಡೋದಿಲ್ಲ ಅಂತ ಎಚ್ಚರಿಕೆ ನೀಡಿದೆ ಅನ್ನೋದು ವಿದ್ಯಾರ್ಥಿಗಳ ಆರೋಪ. ಈ ಮಧ್ಯೆ ಇದೇ ವಿದ್ಯಾರ್ಥಿಗಳು ಯುನಿವರ್ಸಿಟಿಗೆ ಹೋದರೆ ಅಲ್ಲಿ ಹಾಜರಾತಿಯಲ್ಲಿ ಯಾವುದೇ ಕೊರತೆಯಿಲ್ಲ. ಆದರೂ ಕಾಲೇಜು ಮಾತ್ರ ಹಣ ಮಾಡೋ ದಂಧೆಗೆ ಇಳಿದಿದೆ ಅನ್ನುವುದು ವಿದ್ಯಾರ್ಥಿಗಳ ಆರೋಪ.
ಈಗಾಗಲೇ ಹಲವು ವಿದ್ಯಾರ್ಥಿಗಳು ಹಣ ಪಾವತಿ ಮಾಡಿದ್ದು ಅದಕ್ಕೆ ಹೆಚ್ಚುವರಿ ತರಗತಿ ಶುಲ್ಕ ಅಂತ ರಿಸಿಪ್ಟ್ ನೀಡಲಾಗಿದೆ. ಪ್ರತಿ ಗಂಟೆ ತರಗತಿ ಹಾಜರಾಗದೇ ಇದ್ದಲ್ಲಿ 700 ರೂ ಪಡೆದುಕೊಂಡಿರುವುದಾಗಿ ಕಾಲೇಜು ಪ್ರಾಂಶುಪಾಲರು ಸಮಜಾಯಿಷಿ ನೀಡಿದ್ದಾರೆ.
ಆದರೆ ವಿದ್ಯಾರ್ಥಿಗಳು ಹೇಳುವಂತೆ ಈ ತನಕ ಯಾವುದೇ ರೀತಿಯ ಹೆಚ್ಚುವರಿ ಕ್ಲಾಸ್‍ಗಳನ್ನ ಮಾಡಿಲ್ಲ. ಹಾಜರಾತಿ ಕೊರತೆ ಇದೆ ಅಂತ ವಿಶ್ವವಿದ್ಯಾನಿಲಯದ ನಿಯಮದಂತೆ ಹೆಚ್ಚಿನ ದಂಡವನ್ನು ವಸೂಲಿ ಮಾಡೋಹಾಗಿಲ್ಲ ಅನ್ನೋ ಕಾರಣಕ್ಕೆ ಹೆಚ್ಚುವರಿ ತರಗತಿ ಹೆಸರಿನಲ್ಲಿ ಹಣ ದೋಚಲಾಗುತ್ತಿದೆ. ಹಣ ಇರೋ ವಿದ್ಯಾರ್ಥಿಗಳು ಹಣ ನೀಡಿ ಹಾಲ್ ಟಿಕೇಟ್ ಪಡೆದುಕೊಂಡಿದ್ದಾರೆ. ಆದರೆ ಹಣ ಇಲ್ಲದೇ ಇರೋ ವಿದ್ಯಾರ್ಥಿಗಳು ಸದ್ಯ ಸಂಸ್ಥೆಯ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಪ್ರಾಂಶುಪಾಲ ಐತಾಳ್ ಹೇಳುವಂತೆ ನಾವು ಯಾರಿಂದಲೂ ಎಕ್ಸಾಂ ಕೂರೋದಕ್ಕೆ ದಂಡ ವಸೂಲಿ ಮಾಡುತ್ತಿಲ್ಲ. ಮಾನವೀಯತೆಯ ದೃಷ್ಟಿಯಿಂದ ಮಕ್ಕಳು ಪರೀಕ್ಷೆ ಕುಳಿತುಕೊಳ್ಳಲಿ ಅಂತ ಹೆಚ್ಚುವರಿ ಕ್ಲಾಸ್ ತೆಗದುಕೊಂಡಿದ್ದೇವೆ ಎಂದರು.