ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 10.46 ಲಕ್ಷ ಮೌಲ್ಯದ 384 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಜೆಟ್ಏರ್ವೇಸ್ನಲ್ಲಿ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ ಬಂದಿಳಿದ ಕಾಸರಗೋಡು ಎಡನೀರು ಸಮೀಪದ ನಿವಾಸಿ ಅಬ್ದುಲ್ ಶಬೀರ್ (19) ಎಂಬಾತನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ.
ಅಬ್ದುಲ್ ಶಬೀರ್ ದುಬೈಯಿಂದ ಸೋಮವಾರ ಬೆಳಗ್ಗೆ 7 ಗಂಟೆಗೆ ಜೆಟ್ ಏರ್ವೆಸ್ನಿಂದ ಬಂದಿಳಿದಿದ್ದು, ಈ ಸಂದರ್ಭ ಆತನನ್ನು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಆತನ ಬಳಿಯಿದ್ದ ಮಕ್ಕಳ ಆಟಿಕೆಗಳಾದ ಜೀಪ್ ಮತ್ತು ಡಾಗ್ ಟಾಯ್ ಒಳಗಡೆ ಅಳವಡಿಸಿದ್ದ ಮೋಟರ್ ಒಳಗಡೆ 384 ಗ್ರಾಂ. ತೂಕದ ಚಿನ್ನದ ಬಿಸ್ಕತ್ತನ್ನು ಇಡಲಾಗಿತ್ತು. ಅದಕ್ಕೆ ಸಿಲ್ವರ್ ಕೋಟ್ ಮಾಡಲಾಗಿತ್ತು. ಇದರ ಬೆಲೆ 10,46,400 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಮುಂದಿನ ತನಿಖೆಗಾಗಿ ಪ್ರಕರಣವನ್ನು ಬಜ್ಪೆ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.